Kantara Chapter 1: ಒಂದು ಕನಸು, ಎರಡು ಪ್ರಾಜೆಕ್ಟ್ ಹಾಗೂ ಐದು ವರ್ಷದ ಶ್ರಮಕ್ಕೆ ವಿಶ್ವಾದ್ಯಂತ ಪ್ರೇಕ್ಷಕರು ರಿಷಬ್ ಶೆಟ್ಟಿ (Rishab Shetty) ಅವರನ್ನು ಕೊಂಡಾಡಿದ್ದಾರೆ. ಒಂದು ಸಣ್ಣ ಯಶಸ್ಸಿಗೆ ಹಂಬಲಿಸುತ್ತಿದ್ದ ರಿಷಬ್ ಅವರಿಗೆ ಸಾಗರದಷ್ಟು ಪ್ರೀತಿ ಹಾಗೂ ಗೌರವ ತಂದುಕೊಟ್ಟ ಕಥೆಯೇ ‘ಕಾಂತಾರ’ ಸಿನಿಮಾ. ಸದ್ಯ ‘ಕಾಂತಾರ ಚಾಪ್ಟರ್-1’ ಗ್ಲಿಂಪ್ಸ್/ಟೀಸರ್ ಅನೌನ್ಸ್ ಆಗಿ ಬರೋಬ್ಬರಿ ಒಂದು ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಭಾವುಕರಾಗಿದ್ದಾರೆ.
1 ವರ್ಷದ ನೆನಪಿನಲ್ಲಿ ರಿಷಬ್ ಶೆಟ್ಟಿ ಭಾವುಕ ಪೋಸ್ಟ್
‘ಕಾಂತಾರ’ ಸಿನಿಮಾದ ಅದ್ಭುತ ಅಭಿನಯಕ್ಕೆ ರಿಷಬ್ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇದೀಗ ‘ಕಾಂತಾರ ಚಾಪ್ಟರ್ 1’ ಜರ್ನಿಗೆ ಒಂದು ವರ್ಷ ತುಂಬಿದ ಶುಭ ಸಂದರ್ಭದಲ್ಲಿ ರಿಷಬ್ ವಿಶೇಷ ವಿಡಿಯೋ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳದ ಭಾವನೆಗಳನ್ನು ಅಕ್ಷರ ರೂಪದಲ್ಲಿ ಬರೆದುಕೊಂಡು ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
‘ಐದು ವರ್ಷ… ಎರಡು ಕಥೆ… ಒಂದು ಕನಸು’
ಕಾಂತಾರ ಸಿನಿಮಾದ ಮೇಲೆ ಅಪಾರ ಪ್ರೀತಿ ತೋರಿದ ಪ್ರೇಕ್ಷಕರ ಮುಂದೆ ಅದರ ಪ್ರಿಕ್ವೆಲ್ ತರುವುದು ದೊಡ್ಡ ಸವಾಲಾಗಿತ್ತು ಎಂದು ರಿಷಬ್ ಹೇಳಿದ್ದಾರೆ. ಆ ನೆಲದ ಆತ್ಮವನ್ನು ಪ್ರತಿಬಿಂಬಿಸುವ ಕಥೆಯನ್ನು ಹೇಳುವುದು ಜವಾಬ್ದಾರಿ ಮತ್ತು ಸೌಭಾಗ್ಯ ಎರಡೂ ಆಗಿತ್ತು ಎಂದಿದ್ದಾರೆ. ಕಾಡಿನ ಸಂಸ್ಕೃತಿಯನ್ನು ನಾಡಿಗೆ ತಂದ ಈ ಪಯಣದಲ್ಲಿ ಜೊತೆಗಿದ್ದ ತಂಡ ಹಾಗೂ ಪ್ರೇಕ್ಷಕರ ಪ್ರೀತಿಗೆ ಎಂದೆಂದಿಗೂ ಆಭಾರಿ ಎಂದು ಬರೆದುಕೊಂಡಿದ್ದಾರೆ.
Kantara Chapter 1: ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ನಡುವೆ ಬಿರುಕು?
ಇನ್ನೊಂದೆಡೆ ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ಶೆಟ್ಟಿ ನಡುವೆ ವೃತ್ತಿಪರ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಚರ್ಚೆ ಶುರುವಾಗಿದೆ. ವಿಶೇಷ ದಿನದಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ರಿಷಬ್ ಶೆಟ್ಟಿ ಅವರಿಗೆ ಕ್ರೆಡಿಟ್ ಸಲ್ಲಿಸದಿರುವುದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದೆ. ಅದೇ ರೀತಿ ರಿಷಬ್ ಕೂಡ ಸಂಸ್ಥೆಯ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲದಿರುವುದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.




