ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಸಂದರ್ಭದಲ್ಲಿ ಫಾರಂ-7 (Form-7) ದುರ್ಬಳಕೆಯ ಮೂಲಕ ಅಕ್ರಮವಾಗಿ ಹೆಸರು ತೆಗೆಸಲು ಯತ್ನಿಸುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಫಾರಂ-7 ದುರ್ಬಳಕೆ ವಿರುದ್ಧ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಮಣಿದು ಸುಳ್ಳು ಅರ್ಜಿ ಸಲ್ಲಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಎಲ್ಲ ಮತದಾರರ ನೋಂದಣಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಸಂಬಂಧ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಬಿಬಿಎಂಪಿ ಚುನಾವಣಾ ಆಯುಕ್ತರು ಸೇರಿದಂತೆ 224 ವಿಧಾನಸಭಾ ಕ್ಷೇತ್ರಗಳ ಇಆರ್ಒಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ, ಫಾರಂ-6, 6ಎ, ಫಾರಂ-7 ಮತ್ತು ಫಾರಂ-8ಗಳಲ್ಲಿ ಉದ್ದೇಶಪೂರ್ವಕ ಸುಳ್ಳು ಮಾಹಿತಿ ನೀಡುವುದು ಕಂಡುಬಂದರೆ ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 31ರ ಅಡಿ ಕ್ರಮ ತೆಗೆದುಕೊಳ್ಳಬೇಕು, ಅದಕ್ಕೂ ಮುನ್ನ ಮತದಾರರ ನೋಂದಣಿ ನಿಯಮಗಳು 1960ರ ನಿಯಮ 20ರ ಪ್ರಕಾರ ವಿಚಾರಣೆ ನಡೆಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದು, ನಕಲಿ ಅರ್ಜಿಗಳ ಮೂಲಕ ಮತಪಟ್ಟಿಯಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧ ನಿರ್ಲಕ್ಷ್ಯ ತೋರದಂತೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲಿ 19 ಸಾವಿರ ವೋಟ್ ಗಳ ಡಿಲಿಟ್ ಗೆ ಹುನ್ನಾರ – ರಾಹುಲ್ ಗಾಂಧಿ ಸ್ಫೋಟಕ ಆರೋಪ
ಈ ಕಠಿಣ ನಿರ್ದೇಶನ ಹೊರಬೀಳುವ ಮೊದಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವರು ಚುನಾವಣಾ ಆಯೋಗದ ಕಚೇರಿ ಎದುರು ಧರಣಿ ನಡೆಸಿ ಫಾರಂ-7 ಅಕ್ರಮದ ಬಗ್ಗೆ ದೂರು ಸಲ್ಲಿಸಿದ್ದರು. ಹಲವು ಹಂತಗಳಲ್ಲಿ ಒಂದು ಕೋಟಿಗೂ ಅಧಿಕ ಮತಗಳನ್ನು ತೆಗೆದುಹಾಕಲಾಗಿದೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದರ ಹಿಂದೆ ದೊಡ್ಡ ಸಂಚು ರೂಪಿಸಿವೆ ಎಂದು ಗಂಭೀರ ಆರೋಪ ಮಾಡಿದರು. ಸ್ಥಳಾಂತರ ಮತ್ತು ಮರಣದಂತಹ ಸಹಜ ಕಾರಣಗಳ ಜೊತೆಗೆ ಸುಮಾರು 50 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಕೊನೆಯ ಮೂರು ದಿನಗಳಲ್ಲಿ ಎಲ್ಲೋ ಮುದ್ರಿಸಿ ತಂದ ಫಾರಂ-7 ಅರ್ಜಿಗಳನ್ನು ಬಳಸಿ ಮತದಾನದ ಹಕ್ಕುಳ್ಳವರ, ಅದರಲ್ಲೂ ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರ ಹೆಸರುಗಳನ್ನು ತೆಗೆಯಲು ಯತ್ನ ನಡೆದಿದೆ ಎಂದರು. ಪ್ರತಿ ಕ್ಷೇತ್ರದಲ್ಲಿ ಹತ್ತು ರಿಂದ ಹದಿನೈದು ಸಾವಿರ ಅರ್ಜಿಗಳು ಸಲ್ಲಿಕೆಯಾಗಿರುವ ದಾಖಲೆಗಳನ್ನು ಚುನಾವಣಾಧಿಕಾರಿಗೆ ನೀಡಲಾಗಿದ್ದು, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ಮತದಾರರ ಹಕ್ಕು ರಕ್ಷಿಸುವುದು ತಮ್ಮ ಜವಾಬ್ದಾರಿ ಎಂದು ತಿಳಿಸಿದರು.
ರಾಜಕೀಯ ಅಸ್ತ್ರವಾಗಿದ್ಯಾ ಎಸ್.ಐ.ಆರ್..?
ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಮೂಲ ದಾಖಲೆ. ಅದರಲ್ಲಿನ ಪ್ರತಿ ಹೆಸರು ಒಬ್ಬ ನಾಗರಿಕನ ಸಾಂವಿಧಾನಿಕ ಹಕ್ಕನ್ನು ಪ್ರತಿನಿಧಿಸುತ್ತದೆ. ಫಾರಂ-7 ನ ಉದ್ದೇಶ ಮರಣ ಹೊಂದಿದ, ಶಾಶ್ವತವಾಗಿ ಸ್ಥಳಾಂತರಗೊಂಡ ಅಥವಾ ನಕಲು ನೋಂದಣಿಯಾಗಿರುವ ಹೆಸರುಗಳನ್ನು ತೆಗೆದು ಪಟ್ಟಿಯನ್ನು ಶುದ್ಧೀಕರಿಸುವುದು. ಆದರೆ ಇದನ್ನೇ ರಾಜಕೀಯ ಅಸ್ತ್ರವಾಗಿ ಬಳಸಿ ಸಾಮೂಹಿಕವಾಗಿ ಅರ್ಜಿ ಸಲ್ಲಿಸುವ ಪ್ರವೃತ್ತಿ ಬೆಳೆದರೆ ಚುನಾವಣೆಯ ಪ್ರಕ್ರಿಯೆ ಪ್ರಶ್ನಾರ್ಹವಾಗುತ್ತದೆ. ಒಂದೇ ಮಾದರಿಯ ಸಹಿ, ಒಂದೇ ಕಡೆ ಮುದ್ರಣಗೊಂಡ ಅರ್ಜಿಗಳು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡ ಅರ್ಜಿ ಸಲ್ಲಿಕೆ ಆರೋಪಗಳು ಕೇವಲ ಆಡಳಿತಾತ್ಮಕ ಲೋಪವಲ್ಲ, ಚುನಾವಣಾ ಪ್ರಕ್ರಿಯೆಯ ಮೇಲಿನ ನಂಬಿಕೆಗೆ ಧಕ್ಕೆ ತರುವ ವಿಚಾರ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ನೀಡಿರುವ ಸೂಚನೆ ಕೇವಲ ಎಚ್ಚರಿಕೆಯಲ್ಲ, ಕಾನೂನಿನ ಪರಿಧಿಯಲ್ಲಿ ಹೊಣೆಗಾರಿಕೆ. ಆದರೆ ಈ ಕ್ರಮ ಪರಿಣಾಮಕಾರಿಯಾಗಬೇಕಾದರೆ ತನಿಖೆ ಪಾರದರ್ಶಕವಾಗಿರಬೇಕು, ಯಾರು ಅರ್ಜಿ ಸಲ್ಲಿಸಿದರು, ಅವರ ಹಿಂದಿನ ಉದ್ದೇಶವೇನು, ಯಾವುದಾದರೂ ಸಂಘಟಿತ ಜಾಲ ಇದೆಯೇ ಎಂಬುದನ್ನು ಬಹಿರಂಗಪಡಿಸಬೇಕು.
ಇಆರ್ಒ ಮಟ್ಟದಲ್ಲಿ ಒತ್ತಡಕ್ಕೆ ಮಣಿಯದೆ ಕ್ಷೇತ್ರ ಪರಿಶೀಲನೆ ನಡೆಯಬೇಕು. ಇಲ್ಲದಿದ್ದರೆ ನೋಟಿಸ್ ಪಡೆದ ಐವತ್ತು ಲಕ್ಷ ಜನರಲ್ಲಿ ನಿಜವಾದ ಅರ್ಹ ಮತದಾರರು ಆತಂಕಕ್ಕೆ ಒಳಗಾಗುತ್ತಾರೆ. ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ತಾಂತ್ರಿಕ ಪ್ರಕ್ರಿಯೆಯಷ್ಟೇ ಅಲ್ಲ, ಅದು ಸಾಮಾಜಿಕ ನ್ಯಾಯದ ಪ್ರಶ್ನೆಯೂ ಹೌದು. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಉಳಿಸಿಕೊಳ್ಳುವುದು ಪ್ರಜಾಪ್ರಭುತ್ವದ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದಕ್ಕೆ ಸಮ. ಆದ್ದರಿಂದ ಚುನಾವಣಾ ಆಯೋಗ ಕೇವಲ ಅರ್ಜಿದಾರರ ವಿರುದ್ಧ ಕ್ರಮಕ್ಕೆ ಸೀಮಿತವಾಗದೆ, ಈ ಅರ್ಜಿಗಳ ಮೂಲ ಪತ್ತೆ ಹಚ್ಚಿ, ಭವಿಷ್ಯದಲ್ಲಿ ಇಂತಹ ಸಾಮೂಹಿಕ ದುರ್ಬಳಕೆಗೆ ತಾಂತ್ರಿಕ ತಡೆಗಳನ್ನು ಅಳವಡಿಸಬೇಕಿದೆ.




