AMERICA : ರಷ್ಯಾ ಮಿತ್ರ ರಾಷ್ಟ್ರಗಳಿಗೆ ಅಮೆರಿಕ ಶಾಕ್: ಭಾರತದ ಉತ್ಪನ್ನಗಳ ಮೇಲೆ 100% ಸುಂಕದ ಭೀತಿ

ರಷ್ಯಾದಿಂದ ಅಪಾರ ಪ್ರಮಾಣದ ಕಚ್ಚಾ ತೈಲವನ್ನು ಖರೀದಿ ಮಾಡುತ್ತಿರುವ ಭಾರತ ಸೇರಿದಂತೆ ಪ್ರಮುಖ ಐದು ರಾಷ್ಟ್ರಗಳ ವಿರುದ್ಧ ಶೇಕಡಾ 100 ರಷ್ಟು ಭಾರೀ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಪೂರ್ಣ ಅಧಿಕಾರ ನೀಡುವ ಮಸೂದೆಯೊಂದು ಯುಎಸ್ ಕಾಂಗ್ರೆಸ್‌ನಲ್ಲಿ ಪ್ರಮುಖ ಹಂತವನ್ನು ತಲುಪಿದೆ. ‘ಲಿಂಡ್ಸೆ ಓ ಗ್ರಹಾಂ ರಷ್ಯಾ ಮತ್ತು ಇರಾನ್ ನಿರ್ಬಂಧ ಕಾಯ್ದೆ ೨೦೨೬’ ಎಂಬ ಹೆಸರಿನ ಈ ವಿಧೇಯಕ ಅಮೆರಿಕದ ಜನಪ್ರತಿನಿಧಿ ಸಭೆಯಲ್ಲಿ ತೀವ್ರ ಪೈಪೋಟಿಯ ಮತದಾನದ ನಂತರ ಮುನ್ನಡೆ ಸಾಧಿಸಿದ್ದು, ಅಂತಿಮ ಅನುಮೋದನೆಯ ಹಂತದಲ್ಲಿದೆ.

ರಷ್ಯಾದ ತೈಲ ಸಾಗಣೆಗೆ ನೆರವಾಗುವ ಅಕ್ರಮ ಹಡಗುಗಳ ಮೇಲೆಯೂ ನಿರ್ಬಂಧ ಹೇರುವ ಪ್ರಸ್ತಾಪ ಇದಲ್ಲಿದ್ದು, ಚೀನಾ, ಹಂಗೇರಿ, ಸ್ಲೊವಾಕಿಯಾ ಮತ್ತು ಅಜರ್‌ಬೈಜಾನ್ ದೇಶಗಳು ಸಹ ಭಾರತದೊಂದಿಗೆ ಈ ಸುಂಕದ ಬೆದರಿಕೆಗೆ ಒಳಗಾಗಿವೆ. ಉಕ್ರೇನ್ ಯುದ್ಧದ ಸನ್ನಿವೇಶದಲ್ಲಿ ರಷ್ಯಾದಿಂದ ಸವಲತ್ತು ದರದಲ್ಲಿ ಇಂಧನ ತರಿಸಿಕೊಳ್ಳುತ್ತಿರುವ ಭಾರತಕ್ಕೆ ಈ ಕಾಯ್ದೆ ಜಾರಿಯಾದರೆ ತೀವ್ರ ಆರ್ಥಿಕ ಹಿನ್ನಡೆಯಾಗಲಿದೆ.

ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ನಲ್ಲಿ ಈಗಾಗಲೇ ಭಾರಿ ಬೆಂಬಲ ಗಳಿಸಿರುವ ಈ ಮಸೂದೆಯನ್ನು ಅಂತಿಮವಾಗಿ ಅಂಗೀಕರಿಸಿದರೆ, ಭಾರತದಿಂದ ಯುಎಸ್ ಮಾರುಕಟ್ಟೆಗೆ ರಫ್ತಾಗುವ ಔಷಧ, ಜವಳಿ ಹಾಗೂ ತಂತ್ರಜ್ಞಾನ ಸಂಬಂಧಿತ ಪ್ರಮುಖ ಸಾಮಗ್ರಿಗಳ ಬೆಲೆಗಳು ಏಕಾಏಕಿ ದುಬಾರಿಯಾಗಲಿವೆ. ಆದಾಗ್ಯೂ, ವಿಶೇಷ ಸಂದರ್ಭಗಳಲ್ಲಿ ಅಧ್ಯಕ್ಷರು ವಿನಾಯಿತಿ ನೀಡುವ ಅಧಿಕಾರ ಹೊಂದಿರುವುದು ಭಾರತಕ್ಕೆ ಕೊಂಚ ರಾಜತಾಂತ್ರಿಕ ನಿರಾಳತೆಗೆ ಅವಕಾಶ ಮಾಡಿಕೊಟ್ಟಿದೆ.
ಈ ಕಾಯ್ದೆಯು ಜಾಗತಿಕ ವಾಣಿಜ್ಯ ಸಂಬಂಧಗಳ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಲಿದೆ.

ರಷ್ಯಾದ ಆರ್ಥಿಕ ಮೂಲಗಳನ್ನು ಕುಗ್ಗಿಸುವ ಅಮೆರಿಕದ ಕಾರ್ಯತಂತ್ರ ಭಾರತದಂತಹ ನಿಕಟ ಅಭಿವೃದ್ಧಿ ಪಾಲುದಾರ ರಾಷ್ಟ್ರಗಳ ಜಾಗತಿಕ ರಫ್ತು ವ್ಯಾಪಾರಕ್ಕೆ ಸಂಕಷ್ಟ ತಂದೊಡ್ಡುತ್ತಿದೆ. ಅಮೆರಿಕ ತನ್ನ ದೇಶೀಯ ಹಿತಾಸಕ್ತಿ ಹಾಗೂ ಇಂಧನ ಬೆಲೆ ಏರಿಕೆಯ ಭೀತಿಯ ನಡುವೆಯೂ ಕೈಗೊಂಡಿರುವ ಈ ಕಠಿಣ ಹೆಜ್ಜೆ, ಮುಂದಿನ ದಿನಗಳಲ್ಲಿ ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಆದ್ದರಿಂದ ಭಾರತ ತನ್ನ ರಾಷ್ಟ್ರೀಯ ಭದ್ರತೆ ಮತ್ತು ಇಂಧನ ಅಗತ್ಯಗಳನ್ನು ಕಾಯ್ದುಕೊಳ್ಳುತ್ತಲೇ, ಶ್ವೇತಭವನದ ಜೊತೆ ಮಾತುಕತೆ ನಡೆಸುವ ಅಗತ್ಯವಿದೆ.