ಬೆಂಗಳೂರು: ಧೃವ ರಾಠಿ (Dhruv Rathee) ಜರ್ಮನಿಯಲ್ಲಿ ಕೂತು ಭಾರತದ ರಾಜಕೀಯ, ಹೋರಾಟಗಳನ್ನು ಪ್ರಭಾವಿಸುತ್ತಿರುವ ಪ್ರಭಾವಿ ಯೂಟ್ಯೂಬರ್. ವಿಶೇಷವಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಆನ್ ಲೈನ್ ಚಳವಳಿಯನ್ನೇ ಹುಟ್ಟುಹಾಕಿರುವ ವ್ಯಕ್ತಿ. ಇದೀಗ ದೇಶದಾದ್ಯಂತ ಚುನಾವಣಾ ಆಯೋಗದ ವಿರುದ್ಧ ಹೋರಾಟಗಳನ್ನು ಸಿಜೆಪಿ ಹಮ್ಮಿಕೊಂಡಿದ್ದು, ಇಂದು (ಅಕ್ಟೋಬರ್ 8) ಬೆಂಗಳೂರಿನಲ್ಲಿ ಸಹ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಸಿಜೆಪಿಯ ಪ್ರಮುಖರಾದ ಅಭಿಜಿತ್ ದಿಪ್ಕೆ, ಪ್ರಕಾಶ್ ರೈ ಭಾಗಿ ಆಗಿದ್ದರು. ಜೊತೆಗೆ ಧೃವ ರಾಠಿ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಧೃವ ರಾಠಿಗೆ ಕನ್ನಡಪರ ಸಂಘಟನೆಗಳ ವಿರೋಧ ಎದುರಾಗಿದೆ.
ವಿರೋಧಕ್ಕೆ ಕಾರಣ ಏನು?
ಕರ್ನಾಟಕದಲ್ಲಿ ಬಿಜೆಪಿಯನ್ನು ವಿರೋಧಿಸುವವರೂ ಸಹ ಧೃವ ರಾಠಿಯ ಬೆಂಗಳೂರು ಆಗಮನದ ಬಗ್ಗೆ ವಿರೋಧ ವ್ಯಕ್ತಿಪಡಿಸಿದ್ದಾರೆ. ಇದಕ್ಕೆ ಕಾರಣ ಧೃವ ರಾಠಿಯ ಹಳೆಯ ವಿಡಿಯೋ. ಕೆಲ ವರ್ಷಗಳ ಹಿಂದೆ ಭಾಷಾ ಹೋರಾಟದ ಬಗ್ಗೆ ವಿಡಿಯೋ ಮಾಡಿದ್ದ ಧೃವ ರಾಠಿ ಭಾಷಾಪರ ಹೋರಾಟಗಳನ್ನು ಭಯೋತ್ಪಾದನೆಗೆ ಹೋಲಿಕೆ ಮಾಡಿದ್ದರು. ಆ ವಿಡಿಯೋನಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ನಡೆದಿದ್ದ ಭಾಷಾ ಹೋರಾಟದ ಬಗ್ಗೆ ಪ್ರಸ್ತಾಪಿಸಿದ್ದ ಧೃವ ರಾಠಿ ಕನ್ನಡಪರ ಹೋರಾಟಗಾರರನ್ನು ಗೂಂಡಾಗಳಿಗೆ, ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದರು.
ಇದನ್ನೂ ಓದಿ: SIR : ಚು. ಆಯೋಗದ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಮೂರ್ತಿಗಳು !
ಇದೇ ಕಾರಣವಾಗಿ ಇಂದಿನ ಫ್ರೀಡಂ ಪಾರ್ಕ್ ಹೋರಾಟದ ಬಳಿಕ ಧೃವ ರಾಠಿ ಬಗ್ಗೆ ಕನ್ನಡಪರ ಸಂಘಟನೆಯ ಹಲವರು ವಿರೋಧ ವ್ಯಕ್ತಪಡಿಸಿದ್ದು, ಕನ್ನಡಪರ ಹೋರಾಟಗಾರರನ್ನು ಜರಿದ, ನಿಂದಿಸಿದ್ದ ಧೃವ ರಾಠಿ ಬೆಂಗಳೂರಿಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕಾವೇರಿದ ಚರ್ಚೆ ನಡೆದಿದ್ದು, ಹೋರಾಟದಲ್ಲಿ ಭಾಗಿ ಆಗಿದ್ದ ಕನ್ನಡಿಗರಿಗೂ ಚಾಟಿ ಬೀಸಲಾಗಿದೆ.
ಧೃವ ರಾಠಿ ಹೇಳಿದ್ದೇನು?
ಇಂದಿನ ಪ್ರತಿಭಟನೆಯಲ್ಲಿ ಮಾತನಾಡಿದ ಧೃವ ರಾಠಿ ‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಆಯೋಗವು ಯಾವುದೇ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೊಂದಿಲ್ಲ ಎಂದು ಧ್ರುವ ರಾಠಿ ಗಂಭೀರ ಆರೋಪ ಮಾಡಿದರು. ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ನಿಗೂಢವಾಗಿ ತೆಗೆದುಹಾಕಿರುವ ಮತ್ತು ಸೇರಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮೂರು ಪ್ರಶ್ನೆಗಳನ್ನು ಮುಂದಿಟ್ಟ ಧೃವ ರಾಠಿ, ‘ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ಸುಮಾರು 70 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟು, ಚುನಾವಣೆ ಮುಗಿದ ನಂತರ ಮತ್ತೆ ಸೇರಿಸಿದ್ದು ಏಕೆ?’, ‘ಬಿಹಾರದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ 75 ಲಕ್ಷ ಜನರ ಹೆಸರುಗಳನ್ನು ಡಿಲೀಟ್ ಮಾಡಿದ್ದು ಏಕೆ?’ ‘ಉತ್ತರ ಪ್ರದೇಶದಲ್ಲಿ ಹಠಾತ್ತನೆ 14 ಲಕ್ಷ ಹೊಸ ಹೆಸರುಗಳನ್ನು ಸೇರಿಸಲು ಕಾರಣವೇನು?’ ಎಂದು ಪ್ರಶ್ನೆ ಮಾಡಿದರು.




