☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Mafia:’ಮಾಫಿಯಾ’ ಕಿತ್ತಾಟ? ಶಿಲ್ಪ,ಚಕ್ರಪಾಣಿ,ಕುಮಾರ್ ನಡುವೆ ಫೈಟ್? ‘ಜೈಲರ್ 2’ ಕಾರಣವೇ?

Prajwal Devaraj movie Mafia producer fight with financiers leads controversy

ಬೆಂಗಳೂರು: ಕನ್ನಡ ಚಿತ್ರರಂಗ ಸೋಲಿನ ಹಾದಿ ಹಿಡಿದಿದೆ. ಆದರೂ ಸಿನಿಮಾ ಮಂದಿಗೆ ಬುದ್ದಿ ಬಂದಂಗೆ ಕಾಣುತ್ತಿಲ್ಲ. ಚಿತ್ರರಂಗವನ್ನು ಹೇಗಾದರೂ ಮಾಡಿ ಉಳಿಸೋಕೆ ಪ್ರಯತ್ನ ಮಾಡಬೇಕಿರೋ ಸಮಯದಲ್ಲಿ ಒಂದರ ಹಿಂದೊಂದು ವಿವಾದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಂಗೂ-ಹಿಂಗೂ ‘ಪ್ರೇಮದ ಊರಲಿ’ ಸಿನಿಮಾ ಹೇಗೋ ಉತ್ತಮ ಗಳಿಕೆ ಕಂಡು ಯಶಸ್ಸಿನ ಹಾದಿ ಹಿಡಿಯುತ್ತಿದೆ. ಈ ಗ್ಯಾಪ್‌ನಲ್ಲೇ ‘ಮಾಫಿಯಾ’ (Mafia) ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಸುದ್ದಿಯೊಂದು ಹರಿದಾಡುವುದಕ್ಕೆ ಶುರುವಾಗಿದೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ ನಟಿಸಿರುವ ‘ಮಾಫಿಯಾ’ ಕಳೆದ ನಾಲ್ಕು ವರ್ಷಗಳಿಂದ ರಿಲೀಸ್‌ಗಾಗಿ ಪರದಾಡುತ್ತಿದೆ. ಬೆಂಗಳೂರು ಕುಮಾರ್ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ, ಇನ್ನೂ ಸಿನಿಮಾ ರಿಲೀಸ್ ಮಾಡಿಲ್ಲ. ಅಸಲಿಗೆ ಯಾವ ಹಂತದಲ್ಲಿದೆ ಅನ್ನೋದೂ ಕೂಡ ಗೊತ್ತಾಗಿಲ್ಲ. ಈ ಮಧ್ಯೆ ‘ಮಾಫಿಯಾ’ದ ನಿರ್ಮಾಪಕರು ಹಾಗೂ ಸಿನಿಮಾಗೆ ಫೈನಾನ್ಸ್ ಮಾಡಿದ್ದವರ ನಡುವೆ ಕಿತ್ತಾಟ ನಡೆದಿದೆ ಅನ್ನೋ ಸದ್ದು ಹರಿದಾಡುತ್ತಿದೆ.

‘ಮಾಫಿಯಾ’ ಕಿತ್ತಾಟದ ಹಿನ್ನೆಲೆ ಏನು?

ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ‘ಮಾಫಿಯಾ’ ಸಿನಿಮಾವನ್ನು ಬೆಂಗಳೂರು ಕುಮಾರ್ ಫಿಲ್ಮ್ಸ್ ಸಂಸ್ಥೆಯ ಬೆಂಗಳೂರು ಕುಮಾರ್ ನಿರ್ಮಾಪಕ ನಿರ್ಮಾಣ ಮಡುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದಾಗ ಇವರಿಗೆ ‘ಉಪೇಂದ್ರ’ ಸಿನಿಮಾದ ನಿರ್ಮಾಪಕರೊಬ್ಬರಾದ ಚಕ್ರಪಾಣಿ ಹತ್ತಿರ ಫೈನಾನ್ಸ್ ಪಡೆದಿದ್ದರು ಎನ್ನಲಾಗಿದೆ. ಆ ವೇಳೆ ಸಿನಿಮಾ ರಿಲೀಸ್‌ಗೂ ಮುನ್ನ ಬಡ್ಡಿ ಸಮೇತ ಹಣ ಕೊಡಬೇಕು ಅನ್ನೋ ಅಗ್ರಿಮೆಂಟ್ ಆಗಿತ್ತು. ಆದರೆ,
ಒಂದು ತಿಂಗಳೂ ಬಡ್ಡಿ ಕೊಟ್ಟಿಲ್ಲ, ಅಸಲಿನ ಬಗ್ಗೆ ಸುದ್ದಿಯಿಲ್ಲ. ಅಲ್ಲದೇ ಸಿನಿಮಾ ಯಾವ ಸ್ಟೇಜ್‌ನಲ್ಲಿದೆ ಅನ್ನೋದು ಗೊತ್ತಿಲ್ಲ. ಈ ಕಾರಣಕ್ಕೆ ಇಬ್ಬರ ನಡುವೆ ಕಿತ್ತಾಟ ನಡೆದಿದೆ ಅಂತ ಗುಲ್ಲೆದ್ದಿದೆ.

ಏನಿದು ಘಟನೆ?

ಹಲವು ದಿನಗಳಿಂದ ಕುಮಾರ್ ಬಳಿ ಚಕ್ರಪಾಣಿ ಹಣವನ್ನು ಕೇಳುತ್ತಲೇ ಇದ್ದರಂತೆ. ಆದರೆ, ಬೆಂಗಳೂರು ಕುಮಾರ್ ಪೋನ್ ಎತ್ತುತ್ತಿರಲಿಲ್ಲ. ಜೊತೆಗೆ ಹಣ ಕೊಡುವುದಕ್ಕೆ ದುಡ್ಡಿಲ್ಲ ಎಂದು ಹೇಳುತ್ತಿದ್ದರಂತೆ. ಈ ಗ್ಯಾಪ್‌ನಲ್ಲಿ ಕೆ.ಮಂಜು ಜೊತೆ ಸೇರಿ ‘ಜೈಲರ್ 2’ ಸಿನಿಮಾದ ಕರ್ನಾಟಕದ ವಿತರಣೆ ಹಕ್ಕನ್ನು ಪಡೆದಿರೋದು ಚಕ್ರಪಾಣಿ ಹಾಗೂ ಅವರ ಆಪ್ತರಾಗಿರುವ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ನಿದ್ದೆಗೆಡಿಸಿತ್ತು. ಹೀಗಾಗಿ ನಿನ್ನೆ ಆಫೀಸ್‌ಗೆ ಹೋಗಿ ಕೇಳಿದಾಗ, ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ.

ಎಫ್‌ಐಆರ್ ಹಾಕಿದ್ರಾ ಪೊಲೀಸರು?

ಚಕ್ರಪಾಣಿ ಹಾಗೂ ಶಿಲ್ಪಾ ಶ್ರೀನಿವಾಸ್ ಗಲಾಟೆ ಮಾಡಿದ ಬಳಿಕ ಬೆಂಗಳೂರು ಕುಮಾರ್ ಬನಶಂಕರಿ ಬಿಡಿಎ ಕಾಂಪ್ಲೆಸ್‌ಗೆ ಬರೋಕೆ ಹೇಳಿದ್ರಂತೆ. ಅಲ್ಲಿ ಸೆಟಲ್ ಮಾಡುತ್ತೇನೆ ಎಂದಿದ್ದರಂತೆ. ಅದನ್ನು ನಂಬಿ ಹೋಗಿದಾಗ, ಅಲ್ಲಿ ಪೊಲೀಸ್ ಅಧಿಕಾರಿ ಒಬ್ಬರು ಪ್ರತ್ಯಕ್ಷ ಆಗಿದ್ದಾರೆ. ಇಬ್ಬರನ್ನೂ ಪೊಲೀಸ್ ಸ್ಟೇಷನ್‌ಗೆ ಕರ್ಕೊಂಡು ಹೋಗಿ “ಇದು ಸಿವಿಲ್ ಮ್ಯಾಟರ್ ಕೋರ್ಟ್‌ನಲ್ಲಿ ಸೆಟಲ್ ಮಾಡ್ಕೊಬೇಕು. ಆಫೀಸ್‌ಗೆ ಹೋಗಿ ಗಲಾಟೆ ಮಾಡ್ಬಾರದು” ಎಂದು ಹೇಳಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಹಬ್ಬಿದೆ. ಇದರ ಹೊರತಾಗಿ ಇನ್ನು ಏನೇನು ನಡೆದಿಯೋ ಮೂವರು ನಿರ್ಮಾಪಕರೇ ಹೇಳ್ಬೇಕು.