☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

UGNEET 2026: ವೈದ್ಯಕೀಯ 3ನೇ ಸುತ್ತಿನ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA; ಪ್ರಮುಖ ಸೂಚನೆಗಳು

UGNEET 2026: KEA Announces Round 3 Provisional Seat Allotment Results, Issues Guidelines

UGNEET 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ. ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ ಸೀಟು ರದ್ದು ಹಾಗೂ ಹೊರನಡೆಯಲು ಪ್ರಮುಖ ಮಾರ್ಗದರ್ಶನಗಳನ್ನು ನೀಡಲಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯೊಳಗೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. 

MCC ಸೀಟು ಆಯ್ಕೆಗೆ Choice-4 ಅವಕಾಶ

MCC ಹಾಗೂ KEA ಎರಡೂ ಕಡೆ ಸೀಟು ಪಡೆದಿರುವ ಅಭ್ಯರ್ಥಿಗಳಿಗೆ ಪ್ರಮುಖ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಮೂರನೇ ಸುತ್ತಿನಲ್ಲಿ MCC ಸೀಟಿಗೆ ಪ್ರವೇಶ ಪಡೆಯಲು ಬಯಸಿದರೆ KEA ಕೌನ್ಸೆಲಿಂಗ್‌ನಿಂದ ಹೊರನಡೆಯಬಹುದು. ಇದಕ್ಕಾಗಿ ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯೊಳಗೆ ವೆಬ್‌ಸೈಟ್‌ ಲಿಂಕ್‌ನಲ್ಲಿ Choice-4 ಆಯ್ಕೆ ಮಾಡಿ ಉಚಿತವಾಗಿ ಹೊರಹೋಗಬಹುದು. 

₹10 ಸಾವಿರ ದಂಡ ಕಟ್ಟಿ ಸೀಟು ರದ್ದುಗೊಳಿಸಿ

ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಈಗಾಗಲೇ ಪ್ರವೇಶ ಪಡೆದಿರುವವರಿಗೂ ನಿಯಮ ಅನ್ವಯವಾಗಲಿದೆ. MCC 3ನೇ ಸುತ್ತಿನಲ್ಲಿ ಸೀಟು ಸಿಕ್ಕಿ ಅಲ್ಲಿ ಪ್ರವೇಶ ಪಡೆಯಲು ಇಷ್ಟವಿದ್ದರೆ KEA ಸೀಟನ್ನು ರದ್ದುಪಡಿಸಿಕೊಳ್ಳಬಹುದು. ಅಭ್ಯರ್ಥಿಗಳು ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯೊಳಗೆ ₹10,000 ದಂಡ ಪಾವತಿಸಿ ಸೀಟು ರದ್ದು ಮಾಡಿಕೊಳ್ಳಬಹುದು. 

ಇತರ ರಾಜ್ಯದ ಸೀಟು ಆಯ್ಕೆ ಮತ್ತು KEA ದಂಡ

ಇತರ ರಾಜ್ಯಗಳಲ್ಲಿ 3ನೇ ಸುತ್ತಿನಲ್ಲಿ ಸೀಟು ಸಿಕ್ಕಿ ಅಲ್ಲಿ ಸೇರಲು ಇಚ್ಛಿಸುವವರಿಗೂ ಇದೇ ನಿಯಮ ಅನ್ವಯಿಸಲಿದೆ. ಅಥವಾ ಸಿಕ್ಕಿರುವ ಸೀಟು ಬೇಡವೆಂದು ಕೌನ್ಸೆಲಿಂಗ್‌ನಿಂದ ಹೊರಹೋಗುವವರು ಕೂಡ KEA ಸೀಟನ್ನು ರದ್ದುಗೊಳಿಸಬಹುದು. ಇದಕ್ಕೂ ಸಹ ₹10,000 ದಂಡ ಪಾವತಿಸಬೇಕಿದ್ದು, ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯವರೆಗೆ ಸಮಯಾವಕಾಶವಿದೆ. 

KEA ಸೀಟು ಖಚಿತಪಡಿಸಲು ಇ-ಮೇಲ್ ಕಡ್ಡಾಯ

MCC 1ನೇ ಮತ್ತು 2ನೇ ಸುತ್ತಿನಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ KEA 3ನೇ ಸುತ್ತಿನಲ್ಲಿ ಸೀಟು ಸಿಕ್ಕಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿಯೇ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಕ್ಟೋಬರ್ 5ರ ಮಧ್ಯಾಹ್ನ 12 ಗಂಟೆಯೊಳಗೆ ಇ-ಮೇಲ್ ಮಾಡಬೇಕಾಗುತ್ತದೆ. ‘Confirmation of My KEA Seat’ ಎಂದು ವಿಷಯ ಬರೆದು (keauthority_ka@nic.in) ವಿಳಾಸಕ್ಕೆ ಇ-ಮೇಲ್ ಕಳುಹಿಸಬೇಕು. 

UGNEET 2026: ಕೌನ್ಸೆಲಿಂಗ್‌ನಿಂದ ಹೊರಬಂದರೆ ಮುಂದಿನ ಸುತ್ತಿನ ಅವಕಾಶವಿಲ್ಲ

ಒಮ್ಮೆ ಸೀಟು ರದ್ದುಪಡಿಸಿಕೊಂಡು ಕೌನ್ಸೆಲಿಂಗ್‌ನಿಂದ ಹೊರಹೋದರೆ ನಂತರದ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ರದ್ದುಗೊಂಡ ಸೀಟುಗಳನ್ನು ಪುನಃ ಇದೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಿ, ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಸುತ್ತಿನ ನಂತರ Choice-4 ಆಯ್ಕೆಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ತಿಳಿಸಿದ್ದಾರೆ.