☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

TOXIC BOX OFFICE: 200 ಕೋಟಿ ಕ್ಲಬ್‌ನತ್ತ ಯಶ್ ‘ಟಾಕ್ಸಿಕ್’; 2ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು?

2ನೇ ದಿನ 'ಟಾಕ್ಸಿಕ್' ಬಾಕ್ಸ್ ಆಫೀಸ್ ಗಳಿಕೆ ಎಷ್ಟು?

Photo Credits: @tm_x67 (Instagram)

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಜಗತ್ತಿನಾದ್ಯಂತ ಪ್ರದರ್ಶನಗೊಳ್ಳುತ್ತಿದ್ದು, ಎರಡನೇ ದಿನದ ಅಂತ್ಯಕ್ಕೆ ಬರೋಬ್ಬರಿ 200 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ಭರ್ಜರಿಯಾಗಿ ಹೆಜ್ಜೆ ಹಾಕುತ್ತಿದೆ.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎರಡನೇ ದಿನವೂ ಹೌಸ್‌ಫುಲ್ ಶೋಗಳು ಕಂಡುಬಂದಿವೆ. ಭಾರತದಲ್ಲಿ ಎರಡನೇ ದಿನದ ವೇಳೆಗೆ ಚಿತ್ರದ ಒಟ್ಟು ಗಳಿಕೆ ಸುಮಾರು 170 ಕೋಟಿ ರೂಪಾಯಿ ತಲುಪುವ ಸನ್ನಿಹಿತದಲ್ಲಿದ್ದು, ವಿದೇಶಗಳಿಂದ 25 ಕೋಟಿಗೂ ಹೆಚ್ಚು ಕಲೆಕ್ಷನ್ ಬಂದಿದೆ.

ಇದರೊಂದಿಗೆ ವಿಶ್ವಾದ್ಯಂತ ಎರಡನೇ ದಿನದ ಅಂತ್ಯಕ್ಕೆ ‘ಟಾಕ್ಸಿಕ್’ ಒಟ್ಟು ಗಳಿಕೆ ಅಂದಾಜು 190 ರಿಂದ 195 ಕೋಟಿ ರೂಪಾಯಿ ದಾಟಿದೆ.

ಎರಡನೇ ದಿನ ಕಲೆಕ್ಷನ್‌ನಲ್ಲಿ ಸ್ವಲ್ಪ ಇಳಿಕೆ

ಮೊದಲ ದಿನದ ಅಬ್ಬರಕ್ಕೆ ಹೋಲಿಸಿದರೆ ಎರಡನೇ ದಿನ ‘ಟಾಕ್ಸಿಕ್’ ಗಳಿಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಮೊದಲ ದಿನ ಸುಮಾರು 45 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಹಿಂದಿ ಆವೃತ್ತಿಯು ಎರಡನೇ ದಿನ 10 ಕೋಟಿ ರೂ. ದಾಖಲಿಸಿತು.

ಅಂತೆಯೇ ಮೊದಲ ದಿನ ಸುಮಾರು 20 ಕೋಟಿ ರೂ. ಗಳಿಸಿದ್ದ ಕನ್ನಡ ಆವೃತ್ತಿಯು 2ನೇ ದಿನ 3 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆಲುಗು ಹಾಗೂ ಇತರ ಭಾರತೀಯ ಭಾಷೆಗಳ ಗಳಿಕೆಯಲ್ಲೂ ಇಳಿತ ಕಂಡುಬಂದಿದೆ.

ವಿದೇಶಗಳಲ್ಲಿ ಧೂಳೆಬ್ಬಿಸುತ್ತಿರುವ ‘ಟಾಕ್ಸಿಕ್’

ಭಾರತೀಯ ಮಾರುಕಟ್ಟೆಯಲ್ಲಿ ಗಳಿಕೆ ಕೊಂಚ ತಗ್ಗಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕ್ಕೆ ಅತ್ಯುತ್ತಮ ಅಭಿವ್ಯಕ್ತಿ ಮತ್ತು ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜರ್ಮನಿ, ಆಸ್ಟ್ರೇಲಿಯಾ ಹಾಗೂ ದುಬೈ ದೇಶಗಳಲ್ಲಿ ಹಲವು ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ.

ಅಮೆರಿಕನ್ ಪ್ರೇಕ್ಷಕರಿಂದ ಸಿಕ್ಕಿತು ಅಬ್ಬರದ ಮೆಚ್ಚುಗೆ

ಅಮೆರಿಕಾದ ಪ್ರಸಿದ್ಧ ನಟ ಕೈಲ್ ಪೌಲ್, “ಇದೊಂದು ಎಮೋಶನಲ್ ಸಿನಿಮಾ, ಕಿಯಾರಾ ನಟನೆಗೆ ಮನಸೋತೆ. ಸಿನಿಮಾದಲ್ಲಿ ಕನ್ನಡದ ಛಾಪು ಸ್ಪಷ್ಟವಾಗಿ ಕಾಣಿಸಿದೆ” ಎಂದು ಹೊಗಳಿದ್ದಾರೆ. ಹಲವು ಪ್ರೇಕ್ಷಕರು ಕಿಯಾರಾ ನಟನೆಯನ್ನು ಸಾರ್ವಕಾಲಿಕ ಶ್ರೇಷ್ಠ ಎಂದು ಬಣ್ಣಿಸಿದ್ದಾರೆ.

ಅಮೆರಿಕಾದ ‘ಸ್ಟಫ್‌ವಿತ್‌ಅಸ್‌’ ಯೂಟ್ಯೂಬ್ ಚಾನೆಲ್‌ನಲ್ಲೂ ಸಿನಿಮಾದ ವಿಷುವಲ್ಸ್, ಯಶ್ ಸ್ಟೈಲ್ ಹಾಗೂ ಭಾವನಾತ್ಮಕ ಸನ್ನಿವೇಶಗಳಿಗೆ ಪ್ರಶಂಸೆ ಸಿಕ್ಕಿದೆ. ಆದಾಗ್ಯೂ, ಕೆಲವು ವಿದೇಶಿ ಪ್ರೇಕ್ಷಕರು ನಟನೆ ಚೆನ್ನಾಗಿದೆ ಆದರೆ ಕಥೆಯಲ್ಲಿ ಇನ್ನೂ ಬಿಗಿತವಿರಬೇಕಿತ್ತು ಎಂಬ ಮಿಶ್ರ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.