SPECIAL VIBE: ಮೈಸೂರಿನಲ್ಲಿ ಮದುವೆ ಕಳೆ; ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಚಿಕ್ಕಣ್ಣ ಭಾವಿ ಹೆಂಡತಿ

ಚಿಕ್ಕಣ್ಣ ಮದುವೆ ಸಂಭ್ರಮ ಶುರು

Photo Credits: @weddingsbysakkare (Instagram)

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಮದುವೆಗೆ ಈಗ ಕೌಂಟ್‌ಡೌನ್ ಶುರುವಾಗಿದೆ. ಮದುವೆಯ ಸಾಂಪ್ರದಾಯಿಕ ಶಾಸ್ತ್ರಗಳು ವಿಜೃಂಭಣೆಯಿಂದ ಆರಂಭವಾಗಿವೆ.

ಚಿಕ್ಕಣ್ಣ ಅವರ ಮದುವೆ ಸಂಭ್ರಮಕ್ಕೆ ಎರಡೂ ಕುಟುಂಬಗಳಲ್ಲಿ ಕಳೆ ಬಂದಿದೆ. ಆಗಸ್ಟ್ 29ರಂದು ಅದ್ಧೂರಿ ಆರತಕ್ಷತೆ ನೆರವೇರಲಿದ್ದು, ಆಗಸ್ಟ್ 30ರಂದು ಶುಭ ಧಾರಾ ಮುಹೂರ್ತ ನಡೆಯಲಿದೆ.

ನೆಚ್ಚಿನ ನಟನ ಕಲ್ಯಾಣೋತ್ಸವವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

ವಧು-ವರರ ಮನೆಯಲ್ಲಿ ಜೋರಾದ ಹಳದಿ ಸಂಭ್ರಮ

ಗುರುವಾರ ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದಲ್ಲಿರುವ ಭಾವಿ ಪತ್ನಿ ಪಾವನಾ ಅವರ ನಿವಾಸದಲ್ಲಿ ಅರಿಶಿಣ ಶಾಸ್ತ್ರ ಅತ್ಯಂತ ವೈಭವದಿಂದ ನೆರವೇರಿದೆ.

ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ಶಾಸ್ತ್ರದಲ್ಲಿ ಪಾವನಾ ಹಳದಿ ಬಣ್ಣದ ಸಂಭ್ರಮದಲ್ಲಿ ಮಿಂಚಿದ್ದಾರೆ. ಅವರ ಮುಖದಲ್ಲಿ ಮದುವೆಯ ಕಳೆ ಎದ್ದು ಕಾಣುತ್ತಿತ್ತು.

ಇತ್ತ ಚಿಕ್ಕಣ್ಣ ಅವರ ಮನೆಯಲ್ಲೂ ಕೂಡ ಸಾಂಪ್ರದಾಯಿಕವಾಗಿ ಅರಿಶಿಣ ಶಾಸ್ತ್ರವನ್ನು ನೆರವೇರಿಸಲಾಗಿದೆ. ವಧು ಹಾಗೂ ವರನ ಮನೆಗಳಲ್ಲಿ ಪ್ರತ್ಯೇಕವಾಗಿ ಶಾಸ್ತ್ರಗಳು ನಡೆಯುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ತಂದೆ-ತಾಯಿಯ ಆಸೆಯಂತೆ ಮೈಸೂರಿನಲ್ಲಿ ಅದ್ಧೂರಿ ಮದುವೆ

ಸಾಂಸ್ಕೃತಿಕ ನಗರಿ ಮೈಸೂರಿನ ಸ್ಪೆಕ್ಟ್ರಂ ಹಾಲ್‌ನಲ್ಲಿ ಚಿಕ್ಕಣ್ಣ ತಮ್ಮ ತಂದೆ-ತಾಯಿಯ ಆಸೆಯಂತೆ ಕಲ್ಯಾಣ ಬಂಧನಕ್ಕೆ ಕಾಲಿಡಲಿದ್ದಾರೆ.

ಮದುವೆಯ ಸಿದ್ಧತೆಗಳ ಬಗ್ಗೆ ಈ ಹಿಂದೆ ಮಾತನಾಡಿದ್ದ ಚಿಕ್ಕಣ್ಣ, ಮದುವೆಗೆ ಎರಡು-ಮೂರು ದಿನಗಳ ಮುಂಚಿತವಾಗಿಯೇ ಸಾಂಪ್ರದಾಯಿಕ ಶಾಸ್ತ್ರಗಳು ಆರಂಭವಾಗಲಿವೆ ಎಂದು ತಿಳಿಸಿದ್ದರು.

ಅದರಂತೆ ಈಗ ಎಲ್ಲಾ ಶಾಸ್ತ್ರಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.