
Premada Oorali: ‘ಪ್ರೇಮದ ಊರಲಿ’ ಇತ್ತೀಚೆಗೆ ನಾನು ನೋಡಿದ ಒಂದು ಅತ್ಯುತ್ತಮ ಭಾವನಾತ್ಮಕ ಚಿತ್ರ. ಬರೀ ಒಂದು ಪ್ರೇಮಕಥೆಯನ್ನಷ್ಟೇ ಹೇಳದೆ, ಸಂಬಂಧಗಳ ಸಂಕೀರ್ಣತೆ, ನಂಬಿಕೆ ಮತ್ತು ನಮ್ಮ ‘ಹಿಂದಿನ ಜೀವನ’ ನಮ್ಮ ವರ್ತಮಾನವನ್ನು ಹೇಗೆ ಪ್ರಭಾವಿಸುತ್ತದೆ ಅನ್ನೋದರ ಬಗ್ಗೆ ಆಳವಾಗಿ ಯೋಚಿಸುವಂತೆ ಮಾಡುವ ಸಿನಿಮಾ ಇದು.
ತಪಸ್ವಿನಿ ನಟನೆಯ ‘ರುಕ್ಮಿಣಿ’ ಮತ್ತು ಶ್ರೀರಾಮ್ ಅಭಿನಯದ ‘ಸಂತು’ ಪಾತ್ರಗಳ ಸುತ್ತ ಕಥೆ ಸಾಗುತ್ತದೆ. ಹಿಂದಿನ ಕಹಿ ಘಟನೆಗಳು ಅಥವಾ ಪ್ರೇಮ ವೈಫಲ್ಯ ಇಂದಿನ ಬದುಕಿನ ಮೇಲೆ ಹೇಗೆ ಕಾರ್ಮೋಡ ಕವಿಯುವಂತೆ ಮಾಡುತ್ತದೆ ಅನ್ನೋದು ಸಿನಿಮಾದ ಮುಖ್ಯ ಎಳೆ. ಸಂಬಂಧಗಳಲ್ಲಿ ಪ್ರೀತಿಗಿಂತ ನಂಬಿಕೆ ಎಷ್ಟು ಮುಖ್ಯ, ನಂಬಿಕೆ ಇಲ್ಲದ ಪ್ರೀತಿ ಹೇಗೆ ನೋವಿನ ಮೂಲವಾಗುತ್ತದೆ ಅನ್ನೋದನ್ನು ಬಹಳ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಹೆಣ್ಣುಮಕ್ಕಳ ಹಿಂದಿನ ಜೀವನದ ಬಗ್ಗೆ ಸಮಾಜ ಎಷ್ಟು ಸುಲಭವಾಗಿ ತೀರ್ಪು ಕೊಡುತ್ತದೆ ಅನ್ನೋ ವಾಸ್ತವವನ್ನು ಇದು ನೆನಪಿಸುತ್ತದೆ.
ಬರೀ ಸಂಬಂಧಗಳ ಬಗ್ಗೆ ಮಾತ್ರವಲ್ಲದೆ, ಸಿನಿಮಾದಲ್ಲಿ ಹೇಳಿರುವ ಕೆಲವು ಮೌಲ್ಯಗಳು ಮತ್ತು ಸಣ್ಣ ಸಣ್ಣ ಸಂದೇಶಗಳು ಬಹಳ ಕಾಡುತ್ತವೆ. ಉದಾಹರಣೆಗೆ, ವಿದ್ಯೆ ಅನ್ನೋದು ಜ್ಞಾನಕ್ಕಾಗಿಯೇ ಹೊರತು, ಮನುಷ್ಯನನ್ನು ಕೃಷಿಯಿಂದ ದೂರ ಮಾಡಲು ಅಲ್ಲ. ಒಬ್ಬ ವಿದ್ಯಾವಂತ ರೈತ ಕೂಡ ನಮ್ಮ ಸಮಾಜಕ್ಕೆ ಎಷ್ಟು ದೊಡ್ಡ ಆಸ್ತಿಯಾಗಬಲ್ಲ ಅನ್ನೋ ವಿಚಾರವನ್ನು ಕೆಲವು ದೃಶ್ಯಗಳಲ್ಲಿ ಬಹಳ ಅದ್ಭುತವಾಗಿ ತಲುಪಿಸಿದ್ದಾರೆ.
ಇದನ್ನೂ ಓದಿ: Premada Oorali:’ಪ್ರೇಮದ ಊರಲಿ’ ಗೆಲುವಿನ ಸೀಕ್ರೆಟ್ ಅಡಗಿರುವುದು ಟಿಕೆಟ್ ದರದಲ್ಲಿ!
ನನ್ನನ್ನು ಬಹಳವಾಗಿ ಕಾಡಿದ ಮತ್ತೊಂದು ಅಂಶ ಎಂದರೆ, ರಂಗಾಯಣ ರಘು ಅವರು ನಟಿಸಿರುವ ತಂದೆಯ ಪಾತ್ರ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡುವ ಅತ್ತೆ-ಮಾವಂದಿರ ರೂಢಿಗತ ಕಲ್ಪನೆಯನ್ನು ಈ ಪಾತ್ರ ಮುರಿಯುತ್ತದೆ. ಅಪನಂಬಿಕೆಯಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಅನ್ನೋದನ್ನು ತನ್ನ ಬದುಕಿನಲ್ಲೇ ಆಳವಾಗಿ ಕಂಡಿರುವ ಈ ಮನುಷ್ಯ, ತನ್ನ ಮಗ-ಸೊಸೆಯ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಿಜಕ್ಕೂ ಪ್ರಬುದ್ಧವಾಗಿವೆ.
ಹಾಗೆಯೇ, ರಮಿಕಾ ನಿರ್ವಹಿಸಿರುವ ಎರಡನೇ ನಾಯಕಿ ‘ವಸಂತ’ ಪಾತ್ರ. ಸಂತುವನ್ನು ಗುಟ್ಟಾಗಿ ಪ್ರೀತಿಸುತ್ತಿದ್ದ ಅವಳು, ತನ್ನ ಪ್ರೀತಿ ದಕ್ಕುವುದಿಲ್ಲ ಎಂದು ತಿಳಿದಾಗ ಮೊದಲು ಸೆಲ್ಫ್ ಹಾರ್ಮ್ ಮಾಡಿಕೊಳ್ಳುವ ದುಡುಕಿನ ನಿರ್ಧಾರ ಮಾಡಿಬಿಡುತ್ತಾಳೆ. ಆ ದೃಶ್ಯದ ತೀವ್ರತೆಗೆ ಕುತೂಹಲಗೊಂಡು ಅತ್ತ-ಇತ್ತ ನೋಡಿದಾಗ, ಹೆಂಗಸರಿರಲಿ ಭಾರಿ ಭಾರಿ ಮೀಸೆ ಹೊತ್ತ ಗಂಡಸರೂ ಗಳಗಳನೆ ಅಳುತ್ತಿದ್ದರು! ಅಲ್ಲಿಗೆ ಈ ಸಿನಿಮಾದ ಶಕ್ತಿ ಏನು ಎನ್ನುವುದು ನನಗೆ ಅರಿವಾಯಿತು. ಕಡೆಗೆ ಕಥೆಯ ಸಂಪೂರ್ಣ ಸತ್ಯ ತಿಳಿದ ಮೇಲೆ, ಪ್ರೀತಿಯಲ್ಲಿ ಸೋತಾಗ ತನ್ನನ್ನು ತಾನು ನಾಶಮಾಡಿಕೊಳ್ಳುವ ಹಾದಿ ಹಿಡಿಯುವ ಬದಲು, ಭಾವನಾತ್ಮಕ ಪ್ರಬುದ್ಧತೆಯಿಂದ ವಾಸ್ತವವನ್ನು ಒಪ್ಪಿಕೊಂಡು ಮುಂದೆ ಸಾಗಬಹುದು ಅನ್ನೋದನ್ನು ಈ ಪಾತ್ರ ಬಹಳ ಪರಿಣಾಮಕಾರಿಯಾಗಿ ಹೇಳುತ್ತದೆ.
ತಾಂತ್ರಿಕವಾಗಿ ಹೇಳಬೇಕೆಂದರೆ, ಛಾಯಾಗ್ರಹಣ ಅಂತೂ ಅದ್ಭುತ. ಇಡೀ ಸಿನಿಮಾ ಹಸಿರಿನಿಂದ ಕಂಗೊಳಿಸುತ್ತದೆ, ಕಣ್ಣಿಗೆ ಒಂದು ಹಬ್ಬ. ಜೊತೆಗೆ ಸಂಗೀತ ಕೂಡ ಕಥೆಗೆ ಅಷ್ಟೇ ಪೂರಕವಾಗಿದೆ. ಇಂತಹ ಭಾವನಾತ್ಮಕ ಕಥೆಗೆ ಎಂತಹ ಸಂಗೀತ ಬೇಕಿತ್ತೋ ಅದು ಪಕ್ಕಾ ಆಗಿ ಸಿಕ್ಕಿದೆ, ಕಥೆಯ ಓಟಕ್ಕೆ ಅದು ಉತ್ತಮ ಸಾಥ್ ನೀಡುತ್ತದೆ.
ಈಗಾಗಲೇ ಈ ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಲು ಬೇಡಿಕೆ ಬರುತ್ತಿದೆ ಎಂದು ಕೇಳಿದೆ. ಇತ್ತೀಚೆಗಷ್ಟೇ ತೆಲುಗಿನಲ್ಲಿ ಬಿಡುಗಡೆಯಾಗಿ ಅಲ್ಲೂ ಒಳ್ಳೆ ಸದ್ದು ಮಾಡ್ತಿದೆ. ನನ್ನ ಪ್ರಕಾರ, ‘ಪ್ಯಾನ್ ಇಂಡಿಯಾ’ ಸಿನಿಮಾಗಳು ಅಂದರೆ ಹೀಗೆ ಕಥೆಯ ಮೂಲಕವೇ ಸಹಜವಾಗಿ ಹುಟ್ಟಿಕೊಳ್ಳಬೇಕು. ಯಾವುದೋ ಹಳೆಯ ಹಿಟ್ ಫಾರ್ಮುಲಾ ಇಟ್ಟುಕೊಂಡು, ಕೇವಲ ಬಿಲ್ಡಪ್ ಮತ್ತು ಆರ್ಟಿಫಿಶಿಯಲ್ ಹೈಪ್ ಮೂಲಕ ಪ್ರೇಕ್ಷಕರ ಮೇಲೆ ಬಲವಂತವಾಗಿ ಹೇರುವ ಪ್ರಯತ್ನಗಳು ಪ್ಯಾನ್ ಇಂಡಿಯಾ ಆಗಬಾರದು. ಕಥೆಯಲ್ಲಿ ಜೀವವಿದ್ದರೆ ಅದು ತಾನಾಗಿಯೇ ಎಲ್ಲಾ ಭಾಷೆಯ ಜನರನ್ನು ತಲುಪುತ್ತದೆ.
ಅದೇಕೋ ಗೊತ್ತಿಲ್ಲ, ಒಂದಷ್ಟು ಕಡೆ ಲ್ಯಾಗ್ ಅನ್ನಿಸ್ತು. ಆದ್ರೆ ಅದು ಇರೋಬರೋ ದೊಡ್ಡ ಮಟ್ಟದ ಪಾಸಿಟಿವ್ ಅಂಶಗಳಲ್ಲಿ ಒಂದು ಚಿಕ್ಕ ‘ದೃಷ್ಟಿ ಬೊಟ್ಟು’ ಅಂತ ಹೇಳಬಹುದಷ್ಟೇ. ಅಥವಾ, ಒಂದೇ ಸಮನೆ ಬಡಿದಾಡಿಕೊಂಡು ಒಂದೂವರೇ ಗಂಟೆಗಳಲ್ಲೇ ಕತೆ ಮುಗಿದುಹೋಗುವ ಕಥೆಗಳು ನನಗೆ ಹೆಚ್ಚಾಗಿ ಹಿಡಿಸುವ ಕಾರಣದಿಂದಲೂ ಸಹ ನನಗೆ ಹಾಗೆ ಅನಿಸಿರಬಹುದು.
ಭಾವನೆಗಳು, ವಾಸ್ತವ ಮತ್ತು ಮೌಲ್ಯಗಳನ್ನು ಅದ್ಭುತವಾಗಿ ಫುಲ್ ಮೀಲ್ಸ್ ರೀತಿ ಉಣಬಡಿಸಿರುವ ಈ ಸಿನಿಮಾ, ಥಿಯೇಟರ್‌ನಿಂದ ಹೊರಬಂದ ಮೇಲೂ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಬದುಕಿಗೆ ಹತ್ತಿರವಾದ ಒಂದು ಅರ್ಥಪೂರ್ಣ ಸಿನಿಮಾ ನೋಡಬೇಕು ಎನ್ನುವವರಿಗೆ ಇದೊಂದು ಅತ್ಯುತ್ತಮ ಆಯ್ಕೆ.




