
ಬೆಂಗಳೂರು: ‘ಪ್ರೇಮದ ಊರಲ್ಲಿ’ ಸಿನಿಮಾ ದೊಡ್ಡ ಹಿಟ್ ಆಗಿದೆ. ಸಿನಿಮಾ ರಿಲೀಸ್ ಆಗಿ ಮೂರು ವಾರಕ್ಕೂ ಹೆಚ್ಚು ಸಮಯವಾಗಿದ್ದು, ಈಗಲೂ ಚಿತ್ರಮಂದಿರಗಳು ಹೌಸ್‌ಫುಲ್ ಆಗುತ್ತಿದೆ. ಕೌಟುಂಬಿಕ ಪ್ರೇಕ್ಷಕರು ಬಹಳ ಸಮಯದ ಬಳಿಕ ಚಿತ್ರಮಂದಿರಗಳಿಗೆ ಬಂದಿದ್ದಾರೆ. ಹಳ್ಳಿಗಳಿಂದ ಜನ ತಂಡೋಪತಂಡವಾಗಿ ‘ಪ್ರೇಮದ ಊರಲಿ’ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ದೊರೆಯುತ್ತಿರುವ ಅದ್ಭುತ ಪ್ರತಿಕ್ರಿಯೆ ಕನ್ನಡ ಚಿತ್ರರಂಗದಲ್ಲಿ ಆಶಾ ಭಾವನೆ ಮೂಡಿಸಿರುವ ಜೊತೆಗೆ ಹೊಸ ಚರ್ಚೆಯನ್ನು ಸಹ ಹುಟ್ಟುಹಾಕಿದೆ. ‘ಪ್ರೇಮದ ಊರಲಿ’ (Premada Oorali) ಸಿನಿಮಾ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲೆ ಸೆಳೆಯಲು ಕಾರಣಗಳಾದ ಅಂಶಗಳಲ್ಲಿ ಸಿನಿಮಾದ ಟಿಕೆಟ್ ದರವೂ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಿದ್ದಾರೆ ಚಿತ್ರರಂಗದ ಪಂಡಿತರು.
ಇಂದಿನ ಚಿತ್ರರಂಗದಲ್ಲಿ ದೊಡ್ಡ ಬಜೆಟ್, ಜನಪ್ರಿಯ ನಾಯಕರು, ಅದ್ಧೂರಿ ಪ್ರಚಾರ ಮತ್ತು ಭಾರೀ ಬಿಡುಗಡೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆದರೆ ಒಂದು ಸಿನಿಮಾ ಪ್ರೇಕ್ಷಕರ ಮನ ಗೆಲ್ಲಲು ಇವೆಲ್ಲದರ ಜೊತೆಗೆ ಉತ್ತಮ ಕಥೆ, ಮನರಂಜನೆ ಮತ್ತು ಇವುಗಳ ಜೊತೆಗೆ ಪ್ರೇಕ್ಷಕರಿಗೆ ಹೊರೆಯಾಗದ ಟಿಕೆಟ್ ದರವೂ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಪ್ರೇಮದ ಊರಲ್ಲಿ’ ಚಿತ್ರದ ಕುರಿತು ನಡೆಯುತ್ತಿರುವ ಚರ್ಚೆ ಗಮನಾರ್ಹವಾಗಿದೆ.
ಕೈಗೆಟುಕುವ ಟಿಕೆಟ್ ದರದಿಂದ ಕುಟುಂಬ ಪ್ರೇಕ್ಷಕರಿಗೆ ಅನುಕೂಲ
ಸಿನಿಮಾ ಮನರಂಜನೆಗಾಗಿ, ಮನರಂಜನೆ ಪ್ರೇಕ್ಷಕನಿಗೆ ಹೊರೆ ಆಗಬಾರದು. ಹೊರೆ ಆದರೆ ಅದು ಮನರಂಜನೆ ಎನಿಸಿಕೊಳ್ಳುವುದೇ ಇಲ್ಲ. ಕುಟುಂಬದ ನಾಲ್ಕೈದು ಸದಸ್ಯರು ಚಿತ್ರಮಂದಿರಕ್ಕೆ ಹೋಗಬೇಕಾದಾಗ ಟಿಕೆಟ್ ದರ, ಪ್ರಯಾಣ ವೆಚ್ಚ ಮತ್ತು ಆಹಾರ ಸೇರಿದಂತೆ ಒಟ್ಟು ಖರ್ಚು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಕೈಗೆಟುಕುವ ಟಿಕೆಟ್ ದರ ಪ್ರೇಕ್ಷಕರಿಗೆ ಅನುಕೂಲವಾಗುತ್ತದೆ. ಉತ್ತಮ ಸಿನಿಮಾ ಕಡಿಮೆ ವೆಚ್ಚದಲ್ಲಿ ನೋಡುವ ಅವಕಾಶ ದೊರೆತರೆ, ಹೆಚ್ಚಿನ ಜನರು ಚಿತ್ರಮಂದಿರದತ್ತ ಮುಖ ಮಾಡುವ ಸಾಧ್ಯತೆಯೂ ಹೆಚ್ಚುತ್ತದೆ. ‘ಪ್ರೇಮದ ಊರಲಿ’ ಗೆಲುವಿನಲ್ಲಿ ಕೈಗೆಟುವ ಟಿಕೆಟ್ ದರದ ಕೊಡುಗೆಯನ್ನೂ ಕಡೆಗಣಿಸುವಂತಿಲ್ಲ.
ಇದನ್ನೂ ಓದಿ: Premada Oorali:3 ವಾರಗಳಾದ್ಮೇಲೆ ಬೆಳಗ್ಗೆ 7 ಗಂಟೆಗೆ ಶೋ; ತುಮಕೂರಿನ ಮಾರುತಿ ಥಿಯೇಟರ್ಗೆ ನುಗ್ಗಿದ ಜನಜಂಗುಳಿ!
ಶೇ.85ರಿಂದ 90ರಷ್ಟು ಪ್ರದರ್ಶನಗಳು ಹೌಸ್‌ಫುಲ್
ಕರ್ನಾಟಕದ ವಿವಿಧ ಚಿತ್ರಮಂದಿರಗಳಲ್ಲಿ ‘ಪ್ರೇಮದ ಊರಲಿ’ ಚಿತ್ರದ ಶೋಗಳ ಪೈಕಿ ಶೇ. 85ರಿಂದ 90ರಷ್ಟು ಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿವೆ. ಸಿನಿಮಾ ರಿಲೀಸ್ ಆಗಿರುವ ಕೇವಲ ಮೂರು ವಾರಗಳಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಮೊತ್ತವನ್ನು ಸಿನಿಮಾ ಗಳಿಕೆ ಮಾಡಿಕೊಂಡಿದೆ. ಇದೀಗ ತೆಲುಗಿಗೂ ಡಬ್ ಆಗಿ ಆಂಧ್ರ-ತೆಲಂಗಾಣಗಳಲ್ಲಿ ಸಹ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಸಹ ದಿನೇ-ದಿನೇ ಶೋಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡೇ ಸಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 50 ಕೋಟಿಯನ್ನು ದಾಟುವುದು ಖಾತ್ರಿ.
ಚಿತ್ರಗಳ ಯಶಸ್ಸಿಗೆ ದೊಡ್ಡ ಬಜೆಟ್, ಸ್ಟಾರ್ ನಟರು ಮುಖ್ಯವಲ್ಲ ಎಂಬುದನ್ನು ‘ಪ್ರೇಮದ ಊರಲಿ’ ಸಿನಿಮಾ ಖಾತ್ರಿಗೊಳಿಸಿದೆ. ಪ್ರೇಕ್ಷಕರ ಮನ ಮುಟ್ಟುವ ಕಥೆ, ಗುಣಮಟ್ಟದ ನಿರ್ಮಾಣ, ಸೂಕ್ತ ಪ್ರಚಾರ ಮತ್ತು ನ್ಯಾಯಯುತ ಟಿಕೆಟ್ ದರಗಳ ಸಂಯೋಜನೆ ಚಿತ್ರವನ್ನು ಜನರ ಬಳಿಗೆ ಕೊಂಡೊಯ್ಯಬಲ್ಲದು ಎಂಬುದನ್ನು ‘ಪ್ರೇಮದ ಊರಲಿ’ ಸಿನಿಮಾ ಕೂಗಿ ಹೇಳಿದೆ. ಜನ ಚಿತ್ರಮಂದಿರಕ್ಕೆ ಬರುವುದಿಲ್ಲ, ಕನ್ನಡ ಪ್ರೇಕ್ಷಕ ಒಳ್ಳೆಯ ಸಿನಿಮಾಗಳಿಗೆ ಬೆಂಬಲ ಕೊಡಲ್ಲ, ಪರಭಾಷೆ ಸಿನಿಮಾಗಳನ್ನಷ್ಟೆ ನೋಡುತ್ತಾರೆ ಎಂಬ ಆರೋಪಗಳಿಗೆ ಪ್ರೇಕ್ಷಕನು ಉತ್ತರ ನೀಡಿದ್ದಾಗಿದೆ.




