Photo Credits: @anchor_vish (Instagram)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವಿರುದ್ಧ ನಟಿ ರಿಶಿಕಾ ಸಿಂಗ್ ಬಹಿರಂಗವಾಗಿ ಕಿಡಿಕಾರಿದ್ದರು. ಮಗಳು ರಿಶಿಕಾ ಟೀಕೆ ಮಾಡಿದ ಬೆನ್ನಲ್ಲೇ ತಂದೆ ಹಾಗೂ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೀಡಿದ ಹೇಳಿಕೆ ವೈರಲ್ ಆಗಿದೆ. ಮಗಳ ಅಭಿಪ್ರಾಯವನ್ನು ವೈಯಕ್ತಿಕ ಎಂದಿರುವ ಅವರು, ಯಶ್ ಅವರನ್ನು ‘ಕನ್ನಡದ ಕೋಹಿನೂರ್ ವಜ್ರ’ ಎಂದು ಹೆಮ್ಮೆಯಿಂದ ಬಣ್ಣಿಸಿದ್ದಾರೆ.
‘ಟಾಕ್ಸಿಕ್’ ವಿರುದ್ಧ ಮಗಳ ಕಿಡಿ: ಯಶ್ ಅಭಿಮಾನಿಗಳ ತೀವ್ರ ಆಕ್ರೋಶ…
ನಟಿ ರಿಶಿಕಾ ಸಿಂಗ್ ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ದೃಶ್ಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಟ್ರೇಲರ್ನಲ್ಲಿ ನಟಿಯರನ್ನು ಸರಿಯಾಗಿ ಗೌರವಿಸಿಲ್ಲ ಮತ್ತು ಮಹಿಳೆಯರಿಗೆ ಸೂಕ್ತ ಗೌರವ ನೀಡಿಲ್ಲ ಎಂದು ವೀಡಿಯೋ ಶೇರ್ ಮಾಡಿದ್ದರು. ಜೊತೆಗೆ ಯಶ್ ಒಬ್ಬ ಜವಾಬ್ದಾರಿಯುತ ಪತಿಯಾಗಿದ್ದುಕೊಂಡು ಇಂತಹ ದೃಶ್ಯಗಳಲ್ಲಿ ನಟಿಸಿದ್ದು ಸರಿಯಲ್ಲ ಎಂದು ವಾದಿಸಿದ್ದರು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ರಿಶಿಕಾ ಸಿಂಗ್ ವಿರುದ್ಧ ತೀವ್ರವಾಗಿ ತಿರುಗಿಬಿದ್ದಿದ್ದರು.
ತಂದೆಯಿಂದಲೇ ಮಗಳಿಗೆ ಕೌಂಟರ್: ‘ಅದು ಅವರ ವೈಯಕ್ತಿಕ ಅಭಿಪ್ರಾಯ’ ಎಂದ ಬಾಬು…
ಸಂದರ್ಶನವೊಂದರಲ್ಲಿ ಮಗಳ ಟೀಕೆ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ನೇರವಾಗಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, “ಅದು ಅವರವರ ವೈಯಕ್ತಿಕ ಅಭಿಪ್ರಾಯ, ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ. “ಯಶ್ ಮಾಡುತ್ತಿರುವ ಸಿನಿಮಾಗಳ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಬೇಕು” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಇಂದು ಯಶ್ ಮತ್ತು ‘ಟಾಕ್ಸಿಕ್’ ಸಿನಿಮಾಗಾಗಿ ಕಾಯುತ್ತಿದೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
‘ಯಶ್ ನಮ್ಮ ಇಂಡಸ್ಟ್ರಿಯ ವಜ್ರ’: ಕನ್ನಡಿಗರು ಹೆಮ್ಮೆ ಪಡಬೇಕು ಎಂದ ಹಿರಿಯ ನಿರ್ದೇಶಕ…
ಸಿನಿಮಾ ಬಿಡುಗಡೆಯಾದ ಮೇಲೆ ಪ್ರತಿಯೊಬ್ಬರಿಗೂ ವಿಮರ್ಶೆ ಮಾಡುವ ಹಕ್ಕಿದೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. “ಆದರೆ ನನಗೆ ಯಶ್ ಸಾಧನೆ ಬಗ್ಗೆ ಭಾರಿ ಹೆಮ್ಮೆ ಇದೆ, ಅವರು ನಮ್ಮ ಕನ್ನಡ ಚಿತ್ರರಂಗದ ಕೋಹಿನೂರ್ ವಜ್ರ” ಎಂದಿದ್ದಾರೆ. ಯಶ್ ತಮ್ಮ ಸಿನಿಮಾಗಳ ಮೂಲಕ ಕನ್ನಡ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಗಳ ನೆಗೆಟಿವ್ ಹೇಳಿಕೆಯ ನಡುವೆಯೂ ತಂದೆ ನೀಡಿದ ಈ ಸಕಾರಾತ್ಮಕ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.




