Photo Credits: @kiaraaliaadvani (Instagram)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ವರ್ಲ್ಡ್ ಸಿನಿಮಾದ ಮೇಲೆ ದೇಶಾದ್ಯಂತ ಭಾರಿ ನಿರೀಕ್ಷೆ ವ್ಯಕ್ತವಾಗಿದೆ. ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ತಮ್ಮ ‘ಟಾಕ್ಸಿಕ್’ ಸಿನಿಮಾದ ಸುದೀರ್ಘ ಪಯಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಹೊಸ ಸವಾಲುಗಳು ಮತ್ತು ಕಲಿಕೆ: ‘ಟಾಕ್ಸಿಕ್’ ತಂದಿತ್ತ ವಿಭಿನ್ನ ಅನುಭವ…
ಸಿನಿಮಾ ಬಿಡುಗಡೆಗೂ ಮುನ್ನ ತಮ್ಮ ಅನುಭವ ಹಂಚಿಕೊಂಡಿರುವ ಕಿಯಾರಾ, ಸಿನಿಮಾಗಳು ನಮಗೆ ಪರಿಚಯವಿಲ್ಲದ ಹೊಸ ಜಗತ್ತನ್ನು ಪರಿಚಯಿಸುತ್ತವೆ ಎಂದಿದ್ದಾರೆ. ಪ್ರತಿಯೊಂದು ಹೊಸ ಪಾತ್ರ, ಹೊಸ ಸೆಟ್ ಹಾಗೂ ಹೊಸ ಸವಾಲುಗಳು ನಮ್ಮೊಳಗಿನ ಸಾಮರ್ಥ್ಯವನ್ನು ನಮಗೆ ಪರಿಚಯಿಸುತ್ತವೆ ಎಂದು ಬರೆದುಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ತಮಗೆ ಹಲವು ರೀತಿಯ ಹೊಸ ಅನುಭವಗಳನ್ನು ನೀಡಿದ್ದು, ಕುತೂಹಲದಿಂದ ಕಲಿಯುವುದನ್ನು ಕಲಿಸಿದೆ ಎಂದು ಹೇಳಿದ್ದಾರೆ. ಪರಿಚಯವಿಲ್ಲದ ಸಂಗತಿಗಳಿಗೆ ಹೊಂದಿಕೊಂಡು ಹೋಗುವುದು ಹಾಗೂ ಈ ಪಯಣವನ್ನು ಆನಂದಿಸುವುದನ್ನು ಈ ಸಿನಿಮಾ ತಮಗೆ ಕಲಿಸಿದೆ ಎಂದಿದ್ದಾರೆ.
ಅಭಿಮಾನಿಗಳಿಗೆ ಕಿಯಾರಾ ನೀಡಿದ ಪ್ರೇರಣಾದಾಯಿ ಸಂದೇಶ…
ತಮ್ಮ ವೃತ್ತಿಜೀವನದ ಬೆಳವಣಿಗೆಗೆ ಹೊಸ ರೀತಿಯ ಸವಾಲುಗಳನ್ನು ಸ್ವೀಕರಿಸುವುದೇ ಮುಖ್ಯ ಕಾರಣ ಎಂದು ನಟಿ ಕಿಯಾರಾ ಅಭಿಪ್ರಾಯಪಟ್ಟಿದ್ದಾರೆ. ತಮ್ಮನ್ನು ಸ್ವಲ್ಪ ಭಯಪಡಿಸುವ ಮತ್ತು ಸವಾಲೆಸೆಯುವ ವಿಚಾರಗಳಿಗೂ ಧೈರ್ಯವಾಗಿ ‘ಯೆಸ್’ ಎನ್ನುವುದರಲ್ಲಿ ತಾವು ನಂಬಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ. “ನನ್ನ ಪಾಲಿಗೆ ಬೆಳವಣಿಗೆ ಎಂದರೆ ಭಯ ಹುಟ್ಟಿಸುವ ಸಂಗತಿಗಳಿಗೆ ಹೌದು ಎನ್ನುವುದು ಮತ್ತು ಆ ಪಯಣವನ್ನು ಪ್ರೀತಿಸುವುದು” ಎಂದಿದ್ದಾರೆ. ಹೊಸ ಸಾಹಸಗಳು ಮತ್ತು ಹೊಸ ಕೌಶಲ್ಯಗಳಿಗೆ ಧುಮುಕುವಂತೆ ಮಾಡುವ ಉತ್ಸಾಹವನ್ನು ತಮ್ಮ ಬರಹದಲ್ಲಿ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 26ಕ್ಕೆ ತೆರೆಗೆ ಬರಲಿದೆ ಬಿಗ್ ಬಜೆಟ್ ಸಿನಿಮಾ…
‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಅವರು ‘ನಾದಿಯಾ’ ಎಂಬ ಅತ್ಯಂತ ಪ್ರಮುಖ ಹಾಗೂ ಕುತೂಹಲಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಕಿಯಾರಾ ಅವರ ಕೆಮಿಸ್ಟ್ರಿ ಮತ್ತು ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂದು ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಮುಂತಾದ ದೈತ್ಯ ತಾರಾಗಣ ಅಭಿನಯಿಸಿದೆ. ಕೆಜಿಎಫ್ ಬಳಿಕ ಬಡಾಗೆ ಬರುವ ಯಶ್ ಅವರ ಈ ಸಿನಿಮಾ ಇದೇ ಆಗಸ್ಟ್ 26ಕ್ಕೆ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.




