Photo Credits: @namma.sandalwood (Instagram)
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಎಲ್ಲೆಡೆ ಧೂಳೆಬ್ಬಿಸುತ್ತಿದೆ. ಅದ್ದೂರಿಯಾಗಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ ಮನಬಿಚ್ಚಿ ಮಾತನಾಡಿದ್ದಾರೆ. ಈ ಬಹುಕೋಟಿ ಬಜೆಟ್‌ನ ಪ್ಯಾನ್-ವರ್ಲ್ಡ್ ಸಿನಿಮಾ ಹೇಗೆ ಶುರುವಾಯಿತು ಮತ್ತು ಯಶ್ ಅವರೊಂದಿಗಿನ ಗೆಳೆತನ ಹೇಗೆ ಬೆಳೆಯಿತು ಎಂಬ ಆಸಕ್ತಿಕರ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಆಕಸ್ಮಿಕ ಭೇಟಿ ಹಾಗೂ ಮೊದಲ ಮಾತುಕತೆ…
‘ಟಾಕ್ಸಿಕ್’ ಸಿನಿಮಾದ ಪಯಣ ಶುರುವಾಗಿದ್ದು ಒಂದು ಸರಳ ಪಾರ್ಟಿಯಿಂದ ಎಂದು ನಿರ್ಮಾಪಕ ವೆಂಕಟ್ ಹೇಳಿದ್ದಾರೆ. ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಪಾರ್ಟಿಗೆ ವೆಂಕಟ್ ಅವರು ಕರೆ ಇಲ್ಲದೆಯೇ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೋಗಿದ್ದರು. ಅಲ್ಲಿ ಯಶ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿ ಸಣ್ಣ ಮಾತುಕತೆ ನಡೆಸುವ ಅವಕಾಶ ಸಿಕ್ಕಿತ್ತು. ಮೊದಲ ಭೇಟಿಯಲ್ಲೇ ಇಬ್ಬರ ನಡುವೆ ಉತ್ತಮ ಕನೆಕ್ಷನ್ ಮತ್ತು ಗೆಳೆತನ ಬೆಳೆಯಿತು. ಆ ನಂತರದ ಭೇಟಿಗಳು ಬೇವರೆಲ್ಲಾ ಉದ್ಯಮಗಳಲ್ಲೂ ಪಾಲುದಾರರಾಗುವ ಮಟ್ಟಿಗೆ ಬೆಳೆದು ನಿಂತವು. ಈ ಆಕಸ್ಮಿಕ ಭೇಟಿಯೇ ಮುಂದೆ ‘ಟಾಕ್ಸಿಕ್’ ನಂತಹ ದೈತ್ಯ ಸಿನಿಮಾ ಹುಟ್ಟಿಕೊಳ್ಳಲು ಕಾರಣವಾಯಿತು.
ನಟನ ಶಿಸ್ತು ಹಾಗೂ ಕೆಲಸದ ಮೇಲಿನ ಶ್ರದ್ಧೆ…
ಯಶ್ ಅವರ ಸಿನಿಮಾ ಪ್ರೀತಿ ಮತ್ತು ಕಠಿಣ ಪರಿಶ್ರಮವನ್ನು ವೆಂಕಟ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅವರಷ್ಟು ಶಿಸ್ತು, ನಿಖರತೆ ಹಾಗೂ ದೀರ್ಘಾಲೋಚನೆ ಇರುವ ವ್ಯಕ್ತಿಯನ್ನು ತಾವು ಕಂಡಿಲ್ಲ ಎಂದಿದ್ದಾರೆ. ಪ್ರತಿಯೊಂದು ಕೆಲಸವನ್ನೂ ಅತ್ಯಂತ ಅದ್ಭುತವಾಗಿಯೇ ಮಾಡಬೇಕು ಎಂಬ ಅವರ ಹಂಬಲ ತಮಗೆ ಆಶ್ಚರ್ಯ ತಂದಿದೆ. ಸೆಟ್‌ನಲ್ಲಿ ಯಶ್ ಇದ್ದರೆ ಎಲ್ಲವೂ ಅತ್ಯಂತ ನಿಖರವಾಗಿ ಮತ್ತು ಸರಿಯಾಗಿ ನಡೆಯುತ್ತದೆ. ಏನಾದರೂ ಲೋಪ ದೋಷಗಳಿದ್ದರೆ ಅದನ್ನು ಯಶ್ ತಕ್ಷಣ ಸರಿಪಡಿಸುವ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಒಬ್ಬ ನಿರ್ಮಾಪಕನಿಗೆ ಇಂತಹ ನಟ ಸಿಗುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ವೆಂಕಟ್ ಹೇಳಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸದ ಮುನ್ಸೂಚನೆ…
ಯಶ್ ಈ ಚಿತ್ರಕ್ಕೆ ಕಥೆ ಬರೆಯುವ ಜೊತೆಗೆ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಈ ಸಿನಿಮಾದ ನಿರ್ಮಾಣದ ಪಯಣ ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ನೆನಪಿನಲ್ಲಿ ಉಳಿಯುವಂತಹದ್ದು ಎಂದಿದ್ದಾರೆ. ‘ಟಾಕ್ಸಿಕ್’ ಹಲವು ತಲೆಮಾರುಗಳ ಕಾಲ ಜನರ ಮನಸ್ಸಿನಲ್ಲಿ ನೆನಪುಳಿಯುವ ಸಿನಿಮಾ ಆಗಲಿದೆ ಎಂಬ ಭರವಸೆ ನನಗಿದೆ. ಇದು ಕೇವಲ ರಂಜನೆ ನೀಡುವ ಚಿತ್ರವಲ್ಲ, ಪ್ರೇಕ್ಷಕರ ನಾಡಿಮಿಡಿತವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಚಿತ್ರತಂಡದ ಪ್ರತಿಯೊಬ್ಬರ ಶ್ರಮಕ್ಕೆ ಇಂದಿನ ಟ್ರೇಲರ್ ಲಾಂಚ್‌ನಲ್ಲಿ ಸಿಕ್ಕ ಸೌಂಡ್ ಸಾಕ್ಷಿಯಾಗಿದೆ. ಆಗಸ್ಟ್ 26ರಂದು ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ದೊಡ್ಡ ಇತಿಹಾಸ ಬರೆಯಲಿದೆ ಎಂದು ವೆಂಕಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




