ಚೆನ್ನೈ: ಭಾರತೀಯ ಚಿತ್ರರಂಗ ಕಂಡ ಕ್ರಿಯೇಟಿವ್ ನಿರ್ದೇಶಕರ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿ ಸಿಂಗೀತಂ ಶ್ರೀನಿವಾಸರಾವ್ (Singeetam Srinivasa Rao) ಕೂಡ ನಿಲ್ಲುತ್ತಾರೆ. ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಸಿನಿಮಾ ನಿರ್ದೇಶನ ಮಾಡಿರೋ ಹೆಗ್ಗಳಿಕೆ ಇವರದ್ದು. ಇಷ್ಟೇ ಅಲ್ಲದೇ ಹಿಂದಿ ಭಾಷೆಯಲ್ಲೂ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ತಮ್ಮ 94ನೇ ವಯಸ್ಸಿನಲ್ಲೂ ಸಿನಿಮಾ ನಿರ್ದೇಶಿಸುತ್ತಿದ್ದರು.
ದಕ್ಷಿಣ ಭಾರತೀಯ ಚಿತ್ರರಂಗದ ಲೆಜೆಂಡರಿ ನಿರ್ದೇಶಕ, ಸ್ಕ್ರೀನ್‌ಪ್ಲೇ ರೈಟರ್ ಹಾಗೂ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಸಿಂಗೀತಂ ಶ್ರೀನಿವಾಸರಾವ್ (94) ನಿನ್ನೆ (ಅಕ್ಟೋಬರ್ 3) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶನಿವಾರ (ಅಕ್ಟೋಬರ್ 3) ರಾತ್ರಿ 10:30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
5 ಭಾಷೆಗಳಲ್ಲಿ ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನ
ಸಿಂಗೀತಂ ಶ್ರೀನಿವಾಸರಾವ್ ಪ್ರಯೋಗಾತ್ಮಕ ಸಿನಿಮಾಗಳಿಗೆ ಹೆಸರುವಾಸಿಯಾದವರು. ದಕ್ಷಿಣ ಭಾರತೀಯ ಚಿತ್ರರಂಗದ ಮತ್ತೊಬ್ಬ ದಿಗ್ಗಜ ನಿರ್ದೇಶಜ ಕೆ. ವಿ. ರೆಡ್ಡಿ ಅವರ ಬಳಿ ಸಹಾಯಕರಾಗಿ ಸಿನಿಮಾಗೆ ಕಾಲಿಟ್ಟಿದ್ದರು. ಇಲ್ಲಿಂದ ಹೆಚ್ಚು-ಕಡಿಮೆ ತಮ್ಮ 6 ದಶಕಗಳ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ:
ವಿಶಿಷ್ಟ ಸಿನಿಮಾಗಳಿಗೆ ಫೇಮಸ್
ತಮ್ಮ ವೃತ್ತಿ ಬದುಕಿನಲ್ಲಿ ಹಲವು ವಿಶಿಷ್ಟ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. 1987ರಲ್ಲಿ ಮೂಕಿ ಚಿತ್ರ ‘ಪುಷ್ಪಕ ವಿಮಾನ’ ಸಿನಿಮಾ ಪ್ರೇಮಿಗಳ ಮನಗೆದ್ದಿತ್ತು. ಕಮಲ್ ಹಾಸನ್ ನಟಿಸಿದ ಈ ಸಿನಿಮಾದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿತ್ತು. ಇಂದಿಗೂ ಇದು ಭಾರತೀಯ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ ಎನಿಸಿಕೊಂಡಿದೆ.
ಹಾಗೇ ಡ್ಯಾನ್ಸ್ ಆಧಾರಿತ ‘ಮಯೂರಿ’ (1985), ಟೈಮ್ ಟ್ರಾವೆಲ್ ಶೈಲಿಯ ‘ಆದಿತ್ಯ 369’ (1991), ಕಮಲ್ ಹಾಸನ್ ನಟಿಸಿದ ಮತ್ತೊಂದು ವಿಶಿಷ್ಟ ಸಿನಿಮಾಗಳಾದ ‘ಅಪೂರ್ವ ಸಹೋದರರ್ಗಳ್’ ಮತ್ತು ‘ಮೈಕೆಲ್ ಮದನ ಕಾಮರಾಜನ್’ ಇವರ ಕ್ರಿಯೇಟಿವಿಗೆ ಸಾಕ್ಷಿ.
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ
ಸಿಂಗೀತಂ ಶ್ರೀನಿವಾಸರಾವ್ ಕನ್ನಡ ಚಿತ್ರರಂಗಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಡಾ.ರಾಜ್‌ಕುಮಾರ್ ಅವರಿಗೆ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಹಾಗೇ ಶಿವರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾ ‘ಆನಂದ್’ಗೆ ಆಕ್ಷನ್ ಕಟ್ ಹೇಳಿದ್ದು ಇವರೇ.
1982ರಲ್ಲಿ ತೆರೆಕಂಡಿದ್ದ ‘ಹಾಲು ಜೇನು’, 1984ರಲ್ಲಿ ಬಂದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಶ್ರಾವಣ ಬಂತು’, ‘ದೇವತಾ ಮನುಷ್ಯ’ದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 1987ರಲ್ಲಿ ತೆರೆಕಂಡಿದ್ದ ಪುಷ್ಪಕ ವಿಮಾನ ರಾಷ್ಟ್ರಮಟ್ಟದಲ್ಲಿ ಪ್ರಶಂಸೆಯನ್ನು ಪಡೆದುಕೊಂಡಿತ್ತು.
ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಅವರ ನಿಧನಕ್ಕೆ ಭಾರತೀಯ ಚಿತ್ರರಂಗದ ಗಣ್ಯರು, ತೆಲುಗು ಮತ್ತು ಕನ್ನಡ ಚಿತ್ರರಂಗದ ನಟರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.




