Photo Credits: @directorprems (Instagram)
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಸಾಲು ಸಾಲು ಬಿಗ್ ಸರ್ಪ್ರೈಸ್ ಸಿಕ್ಕಿದೆ. ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಒಟ್ಟು ಮೂರು ಹೊಸ ಸಿನಿಮಾಗಳು ಅನೌನ್ಸ್ ಆಗಿದ್ದು, ಅದರಲ್ಲಿ ಕ್ರೇಜಿ ಡೈರೆಕ್ಟರ್ ಜೋಗಿ ಪ್ರೇಮ್ ಜೊತೆಗಿನ ಸಿನಿಮಾವೂ ಒಂದಾಗಿದೆ.
‘ದಿ ವಿಲನ್’ ಸಿನಿಮಾದ ಯಶಸ್ಸಿನ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸುದೀಪ್ ಜನ್ಮದಿನದಂದು ಸಂಜೆ 5 ಗಂಟೆಗೆ ಈ ಚಿತ್ರದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
ಈ ಹೊಸ ಸಿನಿಮಾದ ಮುಹೂರ್ತದ ದಿನಾಂಕ ಕೂಡ ಈಗಿನಿಂದಲೇ ಫಿಕ್ಸ್ ಆಗಿದೆ. ಬರುವ ಅಕ್ಟೋಬರ್ 20 ರಂದು ಈ ಚಿತ್ರಕ್ಕೆ ಅಧಿಕೃತವಾಗಿ ಮುಹೂರ್ತ ನೆರವೇರಲಿದೆ. ಅದೇ ದಿನ ಸಿನಿಮಾದ ಸಂಪೂರ್ಣ ವಿವರಗಳನ್ನು ತಂಡ ಬಿಟ್ಟುಕೊಡಲಿದೆ.
ಇದು ಪ್ರತಿಯೊಬ್ಬರ ಮನೆ ಮನೆ ಕಥೆಯ ಸಿನಿಮಾ
ಜೋಗಿ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಈ ಬಾರಿ ಒಂದು ಸುಂದರ ಹಾಗೂ ಅರ್ಥಪೂರ್ಣ ಕಥೆಯನ್ನು ತೆರೆಮೇಲೆ ತರಲು ಮುಂದಾಗಿದ್ದಾರೆ. ಇದು ಪ್ರತಿಯೊಂದು ಕುಟುಂಬದಲ್ಲೂ ಇರುವಂತಹ ಕಥೆಯಾಗಿದ್ದು, ಪ್ರೇಕ್ಷಕರಿಗೆ ಕನೆಕ್ಟ್ ಆಗಲಿದೆ.
ವಿಶೇಷವೆಂದರೆ ಈ ಸಿನಿಮಾ ಇಂದಿನ ‘Gen Z’ ಅಂದರೆ ಹೊಸ ತಲೆಮಾರಿನ ಯುವಜನತೆಗೆ ಹೆಚ್ಚು ಕನೆಕ್ಟ್ ಆಗುವಂತಹ ಕಥಾವಸ್ತುವನ್ನು ಹೊಂದಿದೆ. ಇದೇ ಕಾರಣಕ್ಕೆ ‘ಇದು Gen Z ಗಳ ಮನೆ ಮನೆ ಕಥೆ’ ಎಂದು ಸಿನಿಮಾ ತಂಡವೇ ಹೇಳಿಕೊಂಡಿದೆ.

Photo Credits: @directorprems (Instagram)
‘ದಿ ವಿಲನ್’ ಹಾಗೂ ‘ಕೆಡಿ’ ನಂತರ ಮತ್ತೆ ಒಂದಾದ ಕಾಂಬೋ
ಈ ಹಿಂದೆ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ‘ದಿ ವಿಲನ್’ ಸಿನಿಮಾ ಮೂಡಿಬಂದಿತ್ತು. ಈ ಮಲ್ಟಿಸ್ಟಾರರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದಲ್ಲದೆ, ಹಾಡುಗಳು ಕೂಡ ಸಕತ್ ವೈರಲ್ ಆಗಿದ್ದವು.
ಇದಾದ ಬಳಿಕ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಧ್ರುವ ಸರ್ಜಾ ನಟನೆಯ ‘ಕೆಡಿ’ (KD) ಸಿನಿಮಾದಲ್ಲಿಯೂ ಸುದೀಪ್ ಒಂದು ವಿಶೇಷ ಪಾತ್ರದಲ್ಲಿ ಬಂದು ಹೊಸ ಅಲೆ ಎಬ್ಬಿಸಲಿದ್ದಾರೆ.
ಇದೀಗ ‘ಕೆಡಿ’ ಹಾಗೂ ‘ದಿ ವಿಲನ್’ ನಂತರ ಜೋಗಿ ಪ್ರೇಮ್ ಅವರು ಸುದೀಪ್ ಅವರಿಗೆ ಪೂರ್ಣಪ್ರಮಾಣದ ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರ ಲುಕ್ ಹೇಗಿರಲಿದೆ ಮತ್ತು ಪ್ರೇಮ್ ಅವರು ಎಂತಹ ಸೂಪರ್ ಹಾಡುಗಳನ್ನು ನೀಡಲಿದ್ದಾರೆ ಎಂಬ ಕುತೂಹಲ ಈಗಿನಿಂದಲೇ ಶುರುವಾಗಿದೆ.




