ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಶೆಡ್ನ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆ ಈಗ ಭಾರಿ ಗಮನ ಸೆಳೆದಿದೆ.
ಆರೋಪಿಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ನರೇಂದ್ರ ಸಿಂಗ್ ಹೇಳಿದ್ದಾರೆ. ಅಂದು ನಡೆದ ಘಟನೆಗಳ ಬಗ್ಗೆಯೂ ತನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಈ ಮೂಲಕ ಸಾಕ್ಷ್ಯ ವಿಚಾರಣೆ ವೇಳೆ ಸೆಕ್ಯೂರಿಟಿ ಗಾರ್ಡ್ ಉಲ್ಟಾ ಹೊಡೆದಿದ್ದಾರೆ. ಕೋರ್ಟ್ನಲ್ಲಿ ನಡೆದ ಈ ಬೆಳವಣಿಗೆಯ ಸಂಪೂರ್ಣ ವಿವರ ಇಲ್ಲಿದೆ.
ನ್ಯಾಯಾಲಯದಲ್ಲಿ ನರೇಂದ್ರ ಸಿಂಗ್ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪಟ್ಟಣಗೆರೆ ಶೆಡ್ನ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ಆರೋಪಿಗಳನ್ನು ತಾನು ನೋಡಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಅಂದು ಶೆಡ್ನಲ್ಲಿ ಏನಾಯಿತು ಎಂಬುದು ತನಗೆ ಗೊತ್ತಿಲ್ಲ ಎಂದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಆರೋಪಿಗಳಲ್ಲಿ ಯಾರನ್ನೂ ಗುರುತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಆರೋಪಿ ವಿನಯ್ ಗುರುತಿಸಿದ ಸಾಕ್ಷಿ
ವಿಚಾರಣೆ ವೇಳೆ ಹತ್ತನೇ ಆರೋಪಿ ವಿನಯ್ ಅವರನ್ನು ಮಾತ್ರ ನರೇಂದ್ರ ಸಿಂಗ್ ಗುರುತಿಸಿದ್ದಾರೆ. ತಾನು ಕೆಲಸ ಮಾಡುತ್ತಿದ್ದ ಸಮಯದಿಂದಲೇ ವಿನಯ್ ಪರಿಚಯವಿದೆ ಎಂದು ಹೇಳಿದ್ದಾರೆ.
ವಿನಯ್ ಬಳಸುತ್ತಿದ್ದ ವಾಹನದ ಬಣ್ಣ ಕೆಂಪು ಎಂದು ಉತ್ತರಿಸಿದ್ದಾರೆ. ಆದರೆ ಕೊಲೆ ನಡೆದ ದಿನ ವಿನಯ್ ಕಾರು ಶೆಡ್ಗೆ ಬಂದಿತ್ತೇ ಎಂಬ ಪ್ರಶ್ನೆಗೆ ನೆನಪಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: Darshan: ತೀವ್ರ ಬೆನ್ನುನೋವು, ಜೈಲಿನಲ್ಲಿ ಸರಿಯಾದ ಚಿಕಿತ್ಸೆ ಇಲ್ಲ ಆರೋಪ; ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಲು ದರ್ಶನ್ ಮನವಿ
ನರೇಂದ್ರ ಸಿಂಗ್ ಹೇಳಿಕೆಗಳ ಹಿನ್ನೆಲೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಮಹತ್ವದ ಮನವಿ ಮಾಡಿದ್ದಾರೆ. ಅವರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಕೋರಿದ್ದಾರೆ.
ಈಗಾಗಲೇ ಈ ಪ್ರಕರಣದಲ್ಲಿ ಪುನೀತ್, ಯಶಸ್ ಸೂರ್ಯ ಹಾಗೂ ರೇಣುಕಾಸ್ವಾಮಿ ತಾಯಿ ಸೇರಿದಂತೆ ಕೆಲವರು ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
Darshan Case: ಸೋಮವಾರಕ್ಕೆ ಮುಂದೂಡಿದ ಕ್ರಾಸ್ ಎಕ್ಸಾಮಿನೇಷನ್
ನರೇಂದ್ರ ಸಿಂಗ್ ವಿಚಾರಣೆಯನ್ನು ಹಿಂದಿ ಭಾಷೆಯಲ್ಲಿ ಮುಂದುವರಿಸಲು ಸಮಯ ಬೇಕಿದೆ ಎಂದು ಎಸ್ಪಿಪಿ ಮನವಿ ಮಾಡಿದ್ದಾರೆ. ಅಗತ್ಯವಿದ್ದರೆ ಭಾಷಾಂತರಕಾರರ ನೆರವು ಪಡೆಯುವುದಾಗಿಯೂ ತಿಳಿಸಿದ್ದಾರೆ.
ಇದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಕ್ರಾಸ್ ಎಕ್ಸಾಮಿನೇಷನ್ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಿದೆ.




