Darshan Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ. ಮಾಫಿ ಸಾಕ್ಷಿ ಪ್ರದೋಷ್ ಜೈಲಿನಿಂದ ಕೋರ್ಟ್‌ಗೆ ಬರುವಾಗ ಯಾರೊಂದಿಗೂ ಮಾತನಾಡಬಾರದು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಕುರಿತು 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರಬಲ ವಾದ ಮಂಡಿಸಿ ತಿರುಗೇಟು ನೀಡಿದ್ದಾರೆ.
ಪ್ರದೋಷ್ ಅವರನ್ನು ಜೈಲಿನಲ್ಲಿಟ್ಟಿರುವುದು ಏಕೆ?
ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಅವರ ಸುರಕ್ಷತೆಗಾಗಿ ಹಾಗೂ ಪ್ರಭಾವಕ್ಕೆ ಒಳಗಾಗದಿರಲು ಜೈಲಿನಲ್ಲಿ ಇರಿಸಲಾಗಿದೆ ಎಂದು ಎಸ್‌ಪಿಪಿ ತಿಳಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಅವರ ಹೇಳಿಕೆ ಪೂರ್ಣವಾಗಿ ದಾಖಲಾಗುವವರೆಗೂ ಈ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಹೊರಗೆ ಬಂದರೆ ಆರೋಪಿಗಳಿಂದ ಪ್ರಭಾವಕ್ಕೊಳಗಾಗುವ ಸಾಧ್ಯತೆ ಇರುವ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ವಾದಿಸಿದ್ದಾರೆ.
ಇದನ್ನು ಓದಿ: Darshan Case: ಪ್ರದೋಷ್‌ಗೆ ಶಾಕ್ ಕೊಟ್ಟ ದರ್ಶನ್; ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇನಿದೆ ಗೊತ್ತಾ?
ಪೊಲೀಸರ ಎಸ್ಕಾರ್ಟ್ ಭದ್ರತೆಗೆ ಮಾತ್ರ
ಪ್ರದೋಷ್ ಅವರನ್ನು ಕೋರ್ಟ್‌ಗೆ ಕರೆತರುವಾಗ ನೀಡಲಾಗುತ್ತಿರುವ ಪೊಲೀಸ್ ಎಸ್ಕಾರ್ಟ್ ಕೇವಲ ಭದ್ರತೆಯ ಉದ್ದೇಶಕ್ಕೆ ಮಾತ್ರವಾಗಿದೆ. ನ್ಯಾಯಾಲಯದ ಆದೇಶದಂತೆಯೇ ಈ ಭದ್ರತೆ ನೀಡಲಾಗುತ್ತಿದ್ದು, ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಎಸ್‌ಪಿಪಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಕೋರ್ಟ್‌ಗೆ ಎಸ್ಕಾರ್ಟ್ ಅಗತ್ಯವಿಲ್ಲ ಎನಿಸಿದರೆ ಕಾಮಾಕ್ಷಿಪಾಳ್ಯ ಪೊಲೀಸರ ಅಗತ್ಯವೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬಾಡಿ ಕ್ಯಾಮೆರಾ ಮೂಲಕ ಪ್ರತಿ ಕ್ಷಣದ ದಾಖಲಾತಿ
ಪ್ರದೋಷ್‌ಗೆ ಊಟದ ವಿರಾಮದ ವೇಳೆ ಹೇಳಿಕೆ ಕಲಿಸಲಾಗುತ್ತಿದೆ ಎಂಬ ದರ್ಶನ್ ವಕೀಲರ ಆರೋಪಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಉತ್ತರಿಸಿದ್ದಾರೆ. ಪ್ರದೋಷ್ ಕರೆತರುವ ಬಸ್‌ನಲ್ಲಿರುವ ಸಿಬ್ಬಂದಿ ಬಾಡಿ ಕ್ಯಾಮೆರಾ ಧರಿಸಿದ್ದು, ಆಡಿಯೋ ಮತ್ತು ವಿಡಿಯೋ ದಾಖಲಾಗುತ್ತಿದೆ ಎಂದು ಹೇಳಿದ್ದಾರೆ. ಪೊಲೀಸರ ಪ್ರತಿ ಚಲನವಲನ ಹಾಗೂ ವರ್ತನೆ ಸಂಪೂರ್ಣ ದಾಖಲಾಗುತ್ತಿರುವುದರಿಂದ ಯಾವುದೇ ಅಕ್ರಮಕ್ಕೆ ಆಸ್ಪದವಿಲ್ಲ ಎಂದು ವಿವರಿಸಿದ್ದಾರೆ.
Darshan Case: ಅಕ್ಟೋಬರ್ 5ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ
ದರ್ಶನ್ ಪರ ವಕೀಲರ ಅರ್ಜಿ ಹಾಗೂ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ವಾದ-ಪ್ರತಿವಾದಗಳನ್ನು 59ನೇ ಸಿಸಿಹೆಚ್ ಕೋರ್ಟ್ ಆಲಿಸಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಅರ್ಜಿಯ ಮೇಲಿನ ತೀರ್ಪನ್ನು ಕಾಯ್ದಿರಿಸಿದ್ದಾರೆ. ಪ್ರದೋಷ್ ಭದ್ರತೆ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಈ ಅರ್ಜಿಯ ಆದೇಶವು ಅಕ್ಟೋಬರ್ 5ರಂದು ಹೊರಬೀಳಲಿದೆ.




