ಬಿಗ್ ಬಾಸ್ ಆರಂಭದಲ್ಲೇ ಮೆಗಾ ಟ್ವಿಸ್ಟ್: ಶುರುವಿನಲ್ಲೇ ದೊರಕಿತು ಕಿಚ್ಚನ ಮೊದಲ ಚಪ್ಪಾಳೆ

ಬಿಗ್ ಬಾಸ್ ಆರಂಭದಲ್ಲೇ ಮೆಗಾ ಟ್ವಿಸ್ಟ್

@colorskannadaofficial (Instagram)

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟು ಪ್ರಸಕ್ತ ಸೀಸನ್‌ಗೆ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ವೀಕ್ಷಕರಿಗೆ ದೊಡ್ಮನೆಯ ಅಸಲಿ ಸೌಂದರ್ಯವನ್ನು ಪರಿಚಯಿಸಿದ್ದಾರೆ.

ಈ ಬಾರಿಯ ಮನೆ ಸಂಪೂರ್ಣ ಹೊಸ ಮಾದರಿಯಲ್ಲಿದೆ. ವಿಶ್ವದ ಪ್ರಮುಖ ಅದ್ಭುತಗಳ ಮಾದರಿಗಳನ್ನು ಬಳಸಿ ಈ ಸೆಟ್ ವಿನ್ಯಾಸಗೊಳಿಸಲಾಗಿದೆ. ಈ ಸುಂದರ ವಾತಾವರಣ ಪ್ರೇಕ್ಷಕರನ್ನು ಅಪಾರವಾಗಿ ಆಕರ್ಷಿಸುತ್ತಿದೆ.

ದೊಡ್ಮನೆಯ ವಿನ್ಯಾಸ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆದರೆ ಇದರ ಜೊತೆಗೇ ಮೊದಲ ದಿನವೇ ಸ್ಪರ್ಧಿಗಳಿಗೆ ದೊಡ್ಡ ಸವಾಲೊಂದನ್ನು ನೀಡಲಾಗಿದೆ. ಈ ಸವಾಲು ಆಟದ ರೋಮಾಂಚನವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಟ್ಯಾಚು ಆಫ್ ಲಿಬರ್ಟಿಗೆ ಭಾರತೀಯ ಸಂಪ್ರದಾಯದ ಸ್ಪರ್ಶ

ಮನೆಯ ಪ್ರದರ್ಶನದ ವೇಳೆ ಸುದೀಪ್ ಅವರು ‘ಸ್ಟ್ಯಾಚು ಆಫ್ ಲಿಬರ್ಟಿ’ ಮಾದರಿಯನ್ನು ಪರಿಶೀಲಿಸಿದರು. ಈ ಮೂರ್ತಿಗೆ ಮೂಗುತಿ ತೊಡಿಸಿ ನಮ್ಮದೇ ನಾಡಿನ ಸಂಪ್ರದಾಯದ ಸ್ಪರ್ಶ ನೀಡಲಾಗಿತ್ತು. ಮೂರ್ತಿಯ ಕೈಯಲ್ಲಿ ‘ಕಿಚ್ಚನ ಚಪ್ಪಾಳೆ’ ಬರಹವಿದ್ದ ಪತ್ರವೊಂದು ಇತ್ತು.

ಶೋ ಆರಂಭದಲ್ಲೇ ಬಿಗ್‌ಬಾಸ್‌ಗೆ ಕಿಚ್ಚನ ಮೊದಲ ಚಪ್ಪಾಳೆ

ಇಂತಹ ಅದ್ಭುತ ಮನೆಯನ್ನು ನಿರ್ಮಿಸಿದ ಬಿಗ್‌ಬಾಸ್ ತಂಡದ ಶ್ರಮವನ್ನು ಸುದೀಪ್ ಮುಕ್ತಕಂಠದಿಂದ ಹೊಗಳಿದರು. ಶೋ ಆರಂಭದಲ್ಲೇ ಬಿಗ್‌ಬಾಸ್‌ಗೆ ತಮ್ಮ ಮೊದಲ ಚಪ್ಪಾಳೆಯನ್ನು ಅರ್ಪಿಸಿದರು. ಸಾಮಾನ್ಯವಾಗಿ ಪ್ರತಿ ವಾರ ಅತ್ಯುತ್ತಮವಾಗಿ ಆಡುವ ಒಬ್ಬ ಸ್ಪರ್ಧಿಗೆ ಮಾತ್ರ ಈ ಪ್ರಶಸ್ತಿ ರೂಪದ ಚಪ್ಪಾಳೆ ಸಿಗುತ್ತದೆ.

ವೇದಿಕೆಯಲ್ಲೇ ಕಾದಿದೆ ಸ್ಪರ್ಧಿಗಳಿಗೆ ಮೊದಲ ಸವಾಲು

ಈ ಬಾರಿ ಮನೆಗೆ ಬರುವ ಸ್ಪರ್ಧಿಗಳಿಗೆ ಸುದೀಪ್‌ ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ವೇದಿಕೆಗೆ ಬರುವ ಸ್ಪರ್ಧಿಗಳು ನೇರವಾಗಿ ದೊಡ್ಮನೆಯೊಳಗೆ ಕಾಲಿಡುವಂತಿಲ್ಲ. ಮನೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬ ಸ್ಪರ್ಧಿಯೂ ಒಂದು ಕಠಿಣ ಸವಾಲನ್ನು ಎದುರಿಸಿ ಗೆಲ್ಲಬೇಕಾಗಿದೆ.

ಬೆಂಗಳೂರು ಹೊರವಲಯದಲ್ಲಿ ಬೃಹತ್ ಸೆಟ್ ನಿರ್ಮಾಣ

ಈ ಬಾರಿ ದಕ್ಷಿಣ ಭಾರತದ ನಾಲ್ಕೂ ಭಾಷೆಗಳ ಬಿಗ್‌ಬಾಸ್ ಏಕಕಾಲಕ್ಕೆ ಆರಂಭವಾಗಿರುವುದು ದೊಡ್ಡ ದಾಖಲೆಯಾಗಿದೆ. ಕನ್ನಡದ ಸೀಸನ್ 13ಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಹಾಗೂ ಅತ್ಯಾಕರ್ಷಕ ಸೆಟ್‌ ಹಾಕಲಾಗಿದೆ.

ಮೊದಲ ಸ್ಪರ್ಧಿಯಾಗಿ ಜಗ್ಗು ಮಮ್ಮಿ ಎಂಟ್ರಿ

ಜನಪ್ರಿಯ ‘ಲವ್ ಮಾಕ್ಟೇಲ್’ ಸಿನಿಮಾ ಖ್ಯಾತಿಯ ನಟ ಜಗದೀಶ್ (ಜಗ್ಗು ಮಮ್ಮಿ) ಮೊದಲ ಸ್ಪರ್ಧಿಯಾಗಿ ಮನೆಗೆ ಬಂದಿದ್ದಾರೆ. ಇವರ ಎಂಟ್ರಿಯೊಂದಿಗೆ ಈ ಬಾರಿಯ ಬಿಗ್‌ಬಾಸ್ ಹಂಗಾಮಾ ಅಧಿಕೃತವಾಗಿ ಆರಂಭಗೊಂಡಿದೆ.