BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಶನಿವಾರದ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಯಮಗಳನ್ನು ಸರಿಯಾಗಿ ಪಾಲಿಸದೆ ಟಾಸ್ಕ್ ರದ್ದುಗೊಳಿಸಿದ ಸ್ಪರ್ಧಿಗಳ ನಡೆಗೆ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧನುಶ್, ಪ್ರಶಾಂತ್, ಕಾವ್ಯಾ ಹಾಗೂ ತಾಂಡವ್ ಸೇರಿದಂತೆ ಹಲವು ಸ್ಪರ್ಧಿಗಳಿಗೆ ಕಿಚ್ಚ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಪದೇ ಪದೇ ನಿಯಮ ಉಲ್ಲಂಘನೆ ಮತ್ತು ರದ್ದಾದ ಟಾಸ್ಕ್
ಈ ಸೀಸನ್ನಲ್ಲಿ ಸ್ಪರ್ಧಿಗಳು ಆಟದ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ರೂಲ್ಸ್ ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲ ಸೃಷ್ಟಿಸಿಕೊಂಡು ಜಗಳದಲ್ಲೇ ಸಮಯ ಕಳೆಯುತ್ತಿದ್ದಾರೆ. ಈ ವಾರವೂ ನಿಯಮ ಉಲ್ಲಂಘನೆಯಿಂದಾಗಿಯೇ ಪ್ರಮುಖ ಟಾಸ್ಕ್ ರದ್ದಾಗಿದೆ. ಈ ಹಿಂದೆ ಕೂಡ ಇದೇ ಕಾರಣಕ್ಕೆ ಆಟವನ್ನು ರದ್ದುಗೊಳಿಸಲಾಗಿತ್ತು.
‘ತಪ್ಪಾಗಿ ಅರ್ಥೈಸಿಕೊಳ್ಳುವುದರಲ್ಲಿ ನಿಮಗೆ ಆಸ್ಕರ್ ಕೊಡಬೇಕು’
ಈ ವಿಚಾರವಾಗಿ ಗರಂ ಆದ ಸುದೀಪ್, “ನಿಮಗೆ ಸರಳ ನಿಯಮಗಳು ಅರ್ಥವಾಗುವುದಿಲ್ಲವೇ? ತಪ್ಪು ನಿಯಮವನ್ನೇ ಸರಿ ಎಂದು ವಾದ ಮಾಡುತ್ತೀರಿ” ಎಂದು ವಾಗ್ದಾಳಿ ನಡೆಸಿದರು. “ತಪ್ಪಾಗಿ ಅರ್ಥೈಸಿಕೊಳ್ಳುವುದರಲ್ಲಿ ಪ್ರತಿ ಬಾರಿಯೂ ಕ್ರಿಯಾಶೀಲತೆ ಪ್ರದರ್ಶಿಸುತ್ತಿದ್ದೀರಿ, ನಿಮಗೆಲ್ಲ ಆಸ್ಕರ್ ಪ್ರಶಸ್ತಿ ನೀಡಬೇಕು” ಎಂದು ಕಿಚ್ಚ ಖಾರವಾಗಿಯೇ ಟೀಕಿಸಿದರು.
BBK 13: ಉಸ್ತುವಾರಿಗಳ ಕೆಟ್ಟ ನಿರ್ಣಯಕ್ಕೆ ಕಿಚ್ಚ ಸುದೀಪ್ ಸಿಟ್ಟು
ಉಸ್ತುವಾರಿ ವಹಿಸಿಕೊಂಡಿದ್ದ ಗಾನವಿ ಮತ್ತು ಕಾವ್ಯಾ ಅವರ ನಿರ್ಧಾರಗಳನ್ನು ಸುದೀಪ್ ತೀವ್ರವಾಗಿ ಪ್ರಶ್ನಿಸಿದರು. “ನಿಮ್ಮ ಕೆಟ್ಟ ನಿರ್ಣಯಗಳಿಂದ ಆಟ ಹಾಳಾಗಿದೆ, ಅರ್ಹ ಸ್ಪರ್ಧಿಗಳಿಗೆ ಆಟವಾಡಲು ಅವಕಾಶವೇ ಸಿಗಲಿಲ್ಲ” ಎಂದರು. “ನಿಮಗೆ ಮುಂದೆ ಲೆಮನ್ ಸ್ಪೂನ್, ಗೋಣಿಚೀಲದ ಓಟದಂತಹ ಆಟಗಳನ್ನಷ್ಟೇ ನೀಡಬೇಕು. ಒಬ್ಬಿಬ್ಬರು ದಡ್ಡರಿದ್ದರೆ ಸರಿ, ಇಡೀ ಮನೆಯಲ್ಲಿ ಎಲ್ಲರೂ ದಡ್ಡರೇ? ಒಳಗೆ ಡ್ರಾಮಾ ಕ್ಲಾಸ್ ನಡೆಯುತ್ತಿದೆಯೇ?” ಎಂದು ಕಿಚ್ಚ ಸುದೀಪ್ ಸಿಟ್ಟಿನಿಂದ ಪ್ರಶ್ನಿಸಿದ್ದಾರೆ.




