ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಕಾರ್ಯಾಚರಣೆ ಕುರಿತ ಚರ್ಚೆ ತಣ್ಣಗಾಗುತ್ತಿರುವ ಹೊತ್ತಿನಲ್ಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದು ಮಂಡ್ಯ ಜಿಲ್ಲೆಯಲ್ಲಿ ಕೇಂದ್ರದ ಪ್ರಮುಖ ಯೋಜನೆಗಳಿಗೆ ಭೂಮಿ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಹಾಗೂ ವಿದ್ಯುತ್ ವಾಹನಗಳ ಪರೀಕ್ಷಾ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರ ಸಿದ್ಧವಿದ್ದರೂ ಕಳೆದ ಹತ್ತು ತಿಂಗಳಿನಿಂದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಭೂ ಹಸ್ತಾಂತರ ಪ್ರಕ್ರಿಯೆಯನ್ನು ಮುಂದೂಡುತ್ತಿದೆ ಎಂದು ಅವರು ಪತ್ರದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಮಂಡ್ಯದಲ್ಲಿಯೇ ಕೈಗಾರಿಕೆ ತರಲು ಸಾವಿರ ಎಕರೆ ಭೂಮಿಯನ್ನು ಕೊಡಲು ಸಿದ್ಧ ಎಂದು ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದನ್ನು ನೆನಪಿಸಿದ ಕುಮಾರಸ್ವಾಮಿ, ಕೇಂದ್ರ ಸ್ವಾಮ್ಯದ ಈ ಸಂಸ್ಥೆಗಳಿಗೆ ಕೂಡಲೇ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
160 ಎಕರೆ ಜಾಗಕ್ಕೆ ಡಿಮ್ಯಾಂಡ್..!
ಈ ಪತ್ರದಲ್ಲಿ ಕುಮಾರಸ್ವಾಮಿ ಅವರು ಬಸರಾಳು ಭಾಗದಲ್ಲಿ ನಿರ್ದಿಷ್ಟ ಜಾಗವನ್ನು ಗುರುತಿಸಿ ನೀಡುವಂತೆ ಕೋರಿದ್ದಾರೆ. ಭಾರತೀಯ ವಾಹನ ಸಂಶೋಧನಾ ಸಂಘದ ಪರೀಕ್ಷಾ ಕೇಂದ್ರಕ್ಕೆ ಇನ್ನೂ ಸೂಕ್ತ ಸ್ಥಳ ಒದಗಿಸಿಲ್ಲ ಎಂದು ಹೇಳಿರುವ ಅವರು, ಸಿಐಇ ಸೌಲಭ್ಯಕ್ಕಾಗಿ ಸುಮಾರು ನೂರು ಎಕರೆ ಹಾಗೂ ಇವಿ ಪರೀಕ್ಷಾ ಕೇಂದ್ರಕ್ಕಾಗಿ ಅದಕ್ಕೆ ಹೊಂದಿಕೊಂಡಂತೆ ಹೆಚ್ಚುವರಿ ಅರವತ್ತು ಎಕರೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರದ ಬೃಹತ್ ಯೋಜನೆಗಳು ರಾಜ್ಯಕ್ಕೆ ಬರುವಾಗ ಭೂಮಿ ನೀಡಲು ತಡ ಮಾಡುವುದು ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಒಳ್ಳೆಯ ಸಂದೇಶವಲ್ಲ ಎಂದು ಎಚ್ಚರಿಸಿರುವ ಅವರು ಪತ್ರದ ಜೊತೆಗೆ ಸಂಬಂಧಿತ ಅಧಿಕೃತ ದಾಖಲೆಗಳನ್ನೂ ಲಗತ್ತಿಸಿದ್ದಾರೆ. ಇತ್ತ ದಸರಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿದ್ದ ಸ್ಟಿಂಗ್ ಕಿಂಗ್ಪಿನ್ ಪತ್ತೆಗೆ ಆಗ್ರಹಿಸಿ ಜೆಡಿಎಸ್ ನಡೆಸುತ್ತಿದ್ದ ಪ್ರತಿಭಟನೆ ದಸರಾ ಬಳಿಕ ಮತ್ತೆ ಆರಂಭವಾಗಲಿದೆ ಎಂದು ಹೇಳಿದ್ದ ಕುಮಾರಸ್ವಾಮಿ, ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಪ್ರಕಟಿಸುವ ಸಾಧ್ಯತೆಯಿದೆ.
ಇದನ್ನೂ ಓದಿ :ದಸರಾ ಪೂಜೆ ವೇಳೆ ದಲಿತ ಸಚಿವರಿಗೆ ಪ್ರವೇಶ ನಿರಾಕರಣೆ, ಕಾಂಗ್ರೆಸ್ ನಲ್ಲೇ ಆಕ್ರೋಶ
ಈ ಪತ್ರ ಕೇವಲ ಭೂಮಿ ಮಂಜೂರಾತಿ ವಿಳಂಬದ ಬಗ್ಗೆ ಮಾತ್ರವಲ್ಲ, ರಾಜ್ಯ ಮತ್ತು ಕೇಂದ್ರದ ನಡುವಿನ ರಾಜಕೀಯ ಸಂಘರ್ಷದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಮಂಡ್ಯದಂತಹ ಕೃಷಿ ಪ್ರಧಾನ ಜಿಲ್ಲೆಯಲ್ಲಿ ಅತ್ಯಾಧುನಿಕ ಪರೀಕ್ಷಾ ಕೇಂದ್ರಗಳು ಬಂದರೆ ಸ್ಥಳೀಯ ಯುವಕರಿಗೆ ಉದ್ಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ಪೂರಕ ಕೈಗಾರಿಕೆಗಳಿಗೆ ದೊಡ್ಡ ಅವಕಾಶ ಸಿಗುತ್ತದೆ. ಹತ್ತು ತಿಂಗಳ ವಿಳಂಬದಿಂದ ಕೇಂದ್ರದ ಹೂಡಿಕೆ ಬೇರೆ ರಾಜ್ಯಕ್ಕೆ ಹೋಗುವ ಆತಂಕವೂ ಇದೆ. ಮತ್ತೊಂದೆಡೆ ಸ್ಟಿಂಗ್ ವಿವಾದದ ಬಿಸಿ ಇನ್ನೂ ತಣ್ಣಗಾಗಿಲ್ಲ , ಅದಾಗಲೇ ಕುಮಾರಸ್ವಾಮಿ ಅಭಿವೃದ್ಧಿ ವಿಷಯವನ್ನು ಮುನ್ನೆಲೆಗೆ ತಂದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಅನುಸರಿಸಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಸರ್ಕಾರ ಈಗ ಭೂಮಿ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುತ್ತದೆಯೋ ಅಥವಾ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿ ಮುಂದುವರಿಸುತ್ತದೆಯೋ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ನಿರ್ಧಾರವಾಗಲಿದೆ.




