☔ Weather
Bengaluru: ☁️ 25°C | AQI 51
Mysore: 🌧️ 25°C | AQI 51
Mangalore: ⛈️ 32°C | AQI 87
Bengaluru: ☁️ 25°C | AQI 51

CJP : ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ – ಸಿಜೆಪಿ ವಿರುದ್ಧ ಬಿಜೆಪಿ ಜಾಗೃತಿ ಅಭಿಯಾನ

Image of CJP vs BJP

ಬೆಂಗಳೂರು : ದೇಶದಾದ್ಯಂತ ಕಾಂಗ್ರೆಸ್ ಹಾಗೂ ಅದರ ಜೊತೆಗಿರುವ ಜಿರಳೆ ಪಡೆ (CJP) ನಡೆಸುತ್ತಿದೆ ಎನ್ನಲಾದ ಆಡಳಿತ ಬದಲಾವಣೆ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿ ಹೈಕಮಾಂಡ್ ದೊಡ್ಡ ನಿರ್ಧಾರ ಕೈಗೊಂಡಿದೆ. ವಿಜಯದಶಮಿ ಮುಗಿದ ಕೂಡಲೇ ಈ ಕಾರ್ಯಾಚರಣೆಗೆ ವೇಗ ಸಿಕ್ಕಿದ್ದು, ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಇಂದಿನಿಂದ ಕರ್ನಾಟಕದಲ್ಲಿ ಬೃಹತ್ ಹೋರಾಟ ಆರಂಭವಾಗಲಿದೆ. ದೇಶವ್ಯಾಪಿ ಹಮ್ಮಿಕೊಂಡಿರುವ ಈ ಅಭಿಯಾನ ರಾಜ್ಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನಡೆಯಲಿದ್ದು, ಅಕ್ಟೋಬರ್ 22ರಿಂದ ನವೆಂಬರ್ 5ರವರೆಗೆ ಸುಮಾರು 15ರಿಂದ 20 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದೆ. ಎದುರಾಳಿಗಳು ಹರಡುತ್ತಿರುವ ಸುಳ್ಳು ಪ್ರಚಾರ ಮತ್ತು ಷಡ್ಯಂತ್ರಗಳಿಗೆ ಇದೇ ವೇದಿಕೆಯಿಂದ ಉತ್ತರ ಕೊಡಲು ಕೇಸರಿ ಪಡೆ ಸಿದ್ಧತೆ ಮಾಡಿಕೊಂಡಿದೆ.

15 ಜಿಲ್ಲೆಗಳಲ್ಲಿ ಅಭಿಯಾನ..!

ಕರ್ನಾಟಕಕ್ಕೆ ನೂತನ ಉಸ್ತುವಾರಿಯಾಗಿ ನೇಮಕಗೊಂಡಿರುವ ಹರೀಶ್ ದ್ವಿವೇದಿ ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಈ ಮಹತ್ವದ ಹೋರಾಟದ ಜವಾಬ್ದಾರಿ ಹೊತ್ತಿದ್ದಾರೆ. ಇಂದು ಸಂಜೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯದ ಪ್ರಮುಖ ನಾಯಕರ ಜೊತೆ ವರ್ಚುವಲ್ ಸಭೆ ಮಾಡಿದ ಅವರು ಅಭಿಯಾನ ಯಶಸ್ವಿಯಾಗಲು ಸ್ಪಷ್ಟ ಕಾರ್ಯಸೂಚಿ ಮತ್ತು ಗುರಿಗಳನ್ನು ನಿಗದಿ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜಿರಳೆ ತಂಡಗಳು ಸೃಷ್ಟಿಸಿರುವ ಸುಳ್ಳು ಕಥನಗಳಿಗೆ ಇಂದಿನ ಯುವ ಪೀಳಿಗೆ, ಅದರಲ್ಲೂ ಜೆನ್-ಜಿ ವರ್ಗ ಬಲಿಯಾಗದಂತೆ ತಡೆಯುವುದು ಈ ಹೋರಾಟದ ಪ್ರಮುಖ ಗುರಿ ಎಂದು ಪಕ್ಷ ಹೇಳಿದೆ. ರಾಷ್ಟ್ರಮಟ್ಟದ ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ಈ ಅಭಿಯಾನದಲ್ಲಿ ಯುವ ಸಂವಾದ, ವಿಚಾರಗೋಷ್ಠಿ ಮತ್ತು ಮುಕ್ತ ಚರ್ಚೆಗಳ ಮೂಲಕ ನಿಜಾಂಶಗಳನ್ನು ತಿಳಿಸುವ ಕೆಲಸ ನಡೆಯಲಿದೆ. ಇದರ ಮೂಲಕ ಪಕ್ಷದ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸುವುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ : ಎಸ್ಐಆರ್ ವಿರುದ್ಧ ಬೀದಿಗಿಳಿಯಲಿರುವ ನಿರ್ಮಲಾ ಸೀತಾರಾಮನ್ ಪತಿ ಪರಕಾಲ ಪ್ರಭಾಕರ್

ಈ ಪಾದಯಾತ್ರೆ ಕೇವಲ ರಾಜಕೀಯ ಪ್ರತಿಕ್ರಿಯೆಯಾಗಿ ಉಳಿಯದೆ, ಮುಂದಿನ ಚುನಾವಣೆಗಳ ದಿಕ್ಕನ್ನು ನಿರ್ಧರಿಸುವ ಪ್ರಯತ್ನವಾಗಿಯೂ ಕಾಣುತ್ತಿದೆ. ಕಾಂಗ್ರೆಸ್ ವಿರುದ್ಧ ಜಿರಳೆ ಎಂಬ ಪದ ಬಳಸುವ ಮೂಲಕ ಬಿಜೆಪಿ ತನ್ನ ಎದುರಾಳಿಗಳನ್ನು ತೀಕ್ಷ್ಣವಾಗಿ ಟೀಕಿಸುವ ಜೊತೆಗೆ ಯುವ ಮತದಾರರನ್ನು ಸೆಳೆಯಲು ಹೊಸ ತಂತ್ರ ಹೂಡಿದೆ. ಆದರೆ ಅಪಪ್ರಚಾರಕ್ಕೆ ಪ್ರತಿಯಾಗಿ ಪ್ರಚಾರ ಎಂಬ ಹೋರಾಟ ಜನರಲ್ಲಿ ಎಷ್ಟು ನಂಬಿಕೆ ಹುಟ್ಟಿಸುತ್ತದೆ ಎಂಬುದು ಪಾದಯಾತ್ರೆಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಯುವಜನರನ್ನು ತಲುಪುವ ಸಲುವಾಗಿ ಸಂವಾದ ಮತ್ತು ಚರ್ಚೆಗಳ ಮಾರ್ಗ ಆಯ್ಕೆ ಮಾಡಿರುವುದು ಸಕಾರಾತ್ಮಕ ಹೆಜ್ಜೆಯಾದರೂ, ಕೇವಲ ಘೋಷಣೆಗಳಿಂದ ಸತ್ಯ ತಲುಪುವುದಿಲ್ಲ, ನಿಖರ ದಾಖಲೆ ಮತ್ತು ಮುಕ್ತ ಉತ್ತರಗಳಿಂದ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ. ಉಸ್ತುವಾರಿ ಬದಲಾವಣೆಯ ಬೆನ್ನಲ್ಲೇ ಆರಂಭವಾಗಿರುವ ಈ ಅಭಿಯಾನ ರಾಜ್ಯ ಬಿಜೆಪಿಯ ಒಗ್ಗಟ್ಟನ್ನು ಪರೀಕ್ಷಿಸುವ ಜೊತೆಗೆ, ಕರ್ನಾಟಕದಲ್ಲಿ ಪಕ್ಷದ ಸಂಘಟನಾ ಶಕ್ತಿಯನ್ನು ಮತ್ತೆ ಎತ್ತಿ ತೋರಿಸುವ ಅವಕಾಶವೂ ಆಗಿದೆ.