Dhanveeraah: ಮೈಸೂರಿನಲ್ಲಿ ನಡೆದ ಯುವ ದಸರಾ ವೇದಿಕೆಯಲ್ಲಿ ನಟ ಧನ್ವೀರ್ ಅವರು ನಟ ದರ್ಶನ್ ಪರವಾಗಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದರ್ಶನ್ ವಿರುದ್ಧ ಎಷ್ಟೇ ಕುತಂತ್ರಗಳು ನಡೆದರೂ ಅವರನ್ನು ಏನೂ ಮಾಡಲು ಆಗುವುದಿಲ್ಲ ಎಂದು ಅವರು ಧೈರ್ಯದ ಮಾತುಗಳನ್ನಾಡಿದ್ದಾರೆ. ಅಲ್ಲದೆ ದರ್ಶನ್ ಶೀಘ್ರದಲ್ಲೇ ಜೈಲಿನಿಂದ ಹೊರಬರಲಿದ್ದಾರೆ ಎಂದು ಭರವಸೆ ನೀಡಿದ್ದು, ಇದು ಸದ್ಯ ರಾಜ್ಯಾದ್ಯಂತ ಹೊಸ ಚರ್ಚೆಗೆ ಕಾರಣವಾಗಿದೆ.
ಯುವ ದಸರಾ ವೇದಿಕೆಯಲ್ಲಿ ದರ್ಶನ್ ಪರ ಧನ್ವೀರ್ ಬ್ಯಾಟಿಂಗ್
ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆದ ಯುವ ದಸರಾ ವೇದಿಕೆಯಲ್ಲಿ ನಟ ಧನ್ವೀರ್ ಅವರ ಈ ಮಾತುಗಳು ಭಾರೀ ಸದ್ದು ಮಾಡುತ್ತಿವೆ. ಹಬ್ಬದ ಸಂಭ್ರಮದ ಸಾಂಸ್ಕೃತಿಕ ವೇದಿಕೆಯಲ್ಲಿ ನಟ ದರ್ಶನ್ ಅವರ ಪರವಾಗಿ ಅವರು ಮಾತನಾಡಿದ್ದಾರೆ. “ಏನೇ ಕುತಂತ್ರಗಳು ನಡೆದರೂ ಹಾಗೂ ನಾಯಿ-ನರಿಗಳು ಏನೇ ಮಾಡಿದರು ಆ ಯಪ್ಪನನ್ನು (ದರ್ಶನ್) ಏನು ಮಾಡಲು ಸಾಧ್ಯವಿಲ್ಲ” ಎಂದು ಅವರು ವೇದಿಕೆಯಲ್ಲಿ ಬಹಿರಂಗವಾಗಿ ಹೇಳಿದ್ದಾರೆ. ದರ್ಶನ್ ಖಂಡಿತವಾಗಿ ಶೀಘ್ರದಲ್ಲೇ ಹೊರಗೆ ಬರಲಿದ್ದಾರೆ ಎಂದು ಅವರು ದೃಢವಾದ ವಿಶ್ವಾಸ ವ್ಯಕ್ತಪಡಿಸಿದ್ದು, ಅಲ್ಲಿ ಸೇರಿದ್ದ ಅಭಿಮಾನಿಗಳು ಹರ್ಷೋದ್ಗಾರದಿಂದ ಇದನ್ನು ಸ್ವಾಗತಿಸಿದ್ದಾರೆ.
ಸಾಸ್ಕೃತಿಕ ವೇದಿಕೆ ದುರ್ಬಳಕೆ ಕುರಿತು ಪರ-ವಿರೋಧ ಚರ್ಚೆ
ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ಈ ರೀತಿ ಮಾತನಾಡಿದ್ದರೆ ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ, ಯುವದಸರಾ ರಂತಹ ಪ್ರಮುಖ ಸಾಂಸ್ಕೃತಿಕ ವೇದಿಕೆಯನ್ನು ಇಂತಹ ವೈಯಕ್ತಿಕ ಹಾಗೂ ವಿವಾದಾತ್ಮಕ ವಿಚಾರಗಳಿಗೆ ಬಳಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೆಲವರು ಇದನ್ನು ತಮ್ಮ ಒಡನಾಟಕ್ಕಾಗಿ ಆಡಿದ ಧೈರ್ಯದ ಮಾತು ಎಂದು ಕೊಂಡಾಡುತ್ತಿದ್ದಾರೆ. ಆದರೆ ಇನ್ನು ಕೆಲವರು ಸಾರ್ವಜನಿಕ ಮತ್ತು ಸಾಂಸ್ಕೃತಿಕ ವೇದಿಕೆಯಲ್ಲಿ ಈ ರೀತಿ ಪದ ಬಳಕೆ ಮಾಡಿ ಮಾತನಾಡಿರುವುದು ಸರಿಯಲ್ಲ ಎಂದು ಟೀಕಿಸುತ್ತಿದ್ದಾರೆ. ಒಟ್ಟಿನಲ್ಲಿ ಧನ್ವೀರ್ ಅವರ ಈ ಹೇಳಿಕೆಯು ಹೊಸ ವಿವಾದದ ಕಿಡಿಯನ್ನು ಹೊತ್ತಿಸಿದೆ.
Dhanveeraah: ದರ್ಶನ್ ಜೊತೆ ನಿಲ್ಲುವ ಧನ್ವೀರ್ ಬದ್ಧತೆ ಮತ್ತು ಟೀಕೆಗಳು
ನಟ ಧನ್ವೀರ್ ಅವರು ಮೊದಲಿನಿಂದಲೂ ನಟ ದರ್ಶನ್ ಅವರ ಪರವಾಗಿ ಬಹಿರಂಗವಾಗಿಯೇ ಧ್ವನಿ ಎತ್ತುತ್ತಾ ಬಂದಿದ್ದಾರೆ. ದರ್ಶನ್ ಅವರ ಜೊತೆ ತಮ್ಮನಂತೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ಈ ಹಿಂದೆಯೂ ದರ್ಶನ್ ಗೈರುಹಾಜರಿಯಲ್ಲಿ ಅಥವಾ ಸಂಕಷ್ಟದ ಸಮಯದಲ್ಲಿ ಧನ್ವೀರ್ ಅವರ ಪರವಾಗಿ ನಿಂತು ಹಲವು ಬಾರಿ ಮಾಧ್ಯಮಗಳ ಮುಂದೆ ಮಾತನಾಡಿದ್ದರು. ಈ ಕಾರಣಕ್ಕಾಗಿ ಅವರು ಸಾಕಷ್ಟು ಟೀಕೆಗಳನ್ನು ಹಾಗೂ ವಿರೋಧಗಳನ್ನು ಎದುರಿಸಬೇಕಾಗಿ ಬಂದಿತ್ತು. ಆದರೂ ಧನ್ವೀರ್ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ದರ್ಶನ್ ಮೇಲಿನ ನಿಷ್ಠೆಯನ್ನು ಮತ್ತೊಮ್ಮೆ ಈ ವೇದಿಕೆಯ ಮೂಲಕ ಸಾಬೀತುಪಡಿಸಿದ್ದಾರೆ.




