ನವದೆಹಲಿ : SIR ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಹೋರಾಟವನ್ನು ಚುರುಕುಗೊಳಿಸಿರುವ ಹೊತ್ತಿನಲ್ಲೇ ರಾಹುಲ್ ಗಾಂಧಿ (Rahul Gandhi) ವಿದೇಶ ಪ್ರವಾಸ ಕೈಗೊಂಡಿದ್ದಾರೆ. ರಾಯ್ ಬರೇಲಿ ಕ್ಷೇತ್ರದ ಸಂಸದರಾಗಿರುವ ಅವರು ಭಾನುವಾರ ಮಧ್ಯಾಹ್ನ 1.35ಕ್ಕೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹನೋಯಿ ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಖಾಸಗಿ ಪ್ರವಾಸವೋ ಅಥವಾ ಅಧಿಕೃತ ಕಾರ್ಯಕ್ರಮದ ನಿಮಿತ್ತವೋ ಎಂಬ ಬಗ್ಗೆ ಪಕ್ಷದ ವತಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಹೋರಾಟದ ನಡುವೆ ವಿದೇಶಿ ಪ್ರವಾಸ..!
ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ವಿದೇಶಿ ನೆಲದಲ್ಲಿ ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿ ದೇಶದ ಗೌರವಕ್ಕೆ ಕುಂದು ತಂದಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈ ವರ್ಷ ಜನವರಿಯಲ್ಲೂ ಅವರು ವಿಯೆಟ್ನಾಂಗೆ ಹೋಗಿದ್ದರು. ಅವರಿಗೆ ಈ ರೀತಿಯ ಕಾರ್ಯಕ್ರಮಗಳಿಗೆ ಆಹ್ವಾನ ಕೊಡುತ್ತಿರುವವರು ಯಾರು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಬಾರಿಯೂ ಭಾರತ ವಿರೋಧಿ ಶಕ್ತಿಗಳ ಆತಿಥ್ಯ ಪಡೆದು ದೇಶದ ವಿರುದ್ಧ ಮಾತನಾಡಲಿದ್ದಾರೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಟೀಕಿಸಿದ್ದಾರೆ. ಮತ್ತೊಂದೆಡೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಹೋರಾಟವನ್ನು ತೀವ್ರಗೊಳಿಸಿದೆ. ಮತ ಕಳವು ಪ್ರಕರಣದಲ್ಲಿ ಚುನಾವಣಾ ಆಯೋಗ ಬಿಜೆಪಿ ಜೊತೆ ಶಾಮೀಲಾಗಿದೆ, ಆಯುಕ್ತರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ.
ಇದನ್ನೂ ಓದಿ :ಪೊಲೀಸ್ ಠಾಣೆಗಳ ಎದುರು ಜೆಡಿಎಸ್ ಧರಣಿಗೆ ಸಿದ್ಧತೆ, ಸರ್ಕಾರಕ್ಕೆ ಕುಮಾರಸ್ವಾಮಿ ಅಂತಿಮ ಎಚ್ಚರಿಕೆ
ಈ ಬೆಳವಣಿ ರಾಜಕೀಯವಾಗಿ ಕಾಂಗ್ರೆಸ್ ಗೆ ಇಕ್ಕಟ್ಟು ತಂದಿದೆ. ಒಂದು ಕಡೆ ಕಾಂಗ್ರೆಸ್ ಪಕ್ಷ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ನೈತಿಕ ಹೋರಾಟ ನಡೆಸುತ್ತಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಅದರ ಪ್ರಮುಖ ನಾಯಕರೇ ಪ್ರತಿಭಟನೆಯ ನಿರ್ಣಾಯಕ ಹಂತದಲ್ಲಿ ದೇಶದಿಂದ ಹೊರಗಿರುವುದು ವಿರೋಧಿಗಳಿಗೆ ಅಸ್ತ್ರವಾಗಿದೆ. ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳು ಹೊಸದಲ್ಲ, ಆದರೆ ಪ್ರತಿ ಬಾರಿಯೂ ಸಮಯದ ಆಯ್ಕೆಯೇ ಚರ್ಚೆಗೆ ಕಾರಣವಾಗುತ್ತಿದೆ. ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಹೋರಾಡುವಾಗ ನಾಯಕತ್ವದ ಅನುಪಸ್ಥಿತಿ ಎದ್ದು ಕಾಣುತ್ತದೆ ಎಂಬ ಟೀಕೆ ಪಕ್ಷದೊಳಗೂ ಕೇಳಿಬರುವ ಸಾಧ್ಯತೆ ಇದೆ.
ಬಿಜೆಪಿ ಈ ವಿಚಾರವನ್ನು ರಾಷ್ಟ್ರೀಯತೆ ಮತ್ತು ಬದ್ಧತೆಯ ಪ್ರಶ್ನೆಯಾಗಿ ಪರಿವರ್ತಿಸಲು ಯತ್ನಿಸುತ್ತಿದೆ. ಕಾಂಗ್ರೆಸ್ ಈ ಪ್ರವಾಸದ ಉದ್ದೇಶವನ್ನು ಪಾರದರ್ಶಕವಾಗಿ ತಿಳಿಸದಿದ್ದರೆ ಅನುಮಾನಗಳು ಮತ್ತಷ್ಟು ದಟ್ಟವಾಗುತ್ತವೆ. ಅದೇ ರೀತಿ ಚುನಾವಣಾ ಆಯುಕ್ತರ ವಿರುದ್ಧ ರಾಜೀನಾಮೆ ಅಸ್ತ್ರ ಪ್ರಯೋಗಿಸುವುದು ಗಂಭೀರ ಆರೋಪವಾಗಿದ್ದು, ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸದೆ ಕೇವಲ ರಾಜಕೀಯ ಹೇಳಿಕೆಗಳಿಗೆ ಸೀಮಿತವಾದರೆ ಆಯೋಗದ ವಿಶ್ವಾಸಾರ್ಹತೆ ಮೇಲಿನ ಚರ್ಚೆ ದುರ್ಬಲಗೊಳ್ಳುತ್ತದೆ. ಒಟ್ಟಾರೆ SIR ಹೋರಾಟಕ್ಕೆ ರಾಹುಲ್ ಅನುಪಸ್ಥಿತಿ ಹಿನ್ನಡೆಯಾಗದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ನಾಯಕತ್ವಕ್ಕೆ ಸವಾಲಾಗಿದೆ.




