☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

SUPREME COURT : ಜಿರಳೆ ಆಯ್ತು..ಈಗ ನೊಣ – ಸದ್ದು ಮಾಡ್ತಿದೆ ಮಖ್ಖಿ ಜನತಾ ಪಾರ್ಟಿ

Image of Supreme Court about MJP

ನವದೆಹಲಿ : ಸುಪ್ರೀಂ ಕೋರ್ಟ್ ನ (Supreme court) ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನೀಡಿದ ಒಂದು ರೂಪಕ ಹೇಳಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಕ್ಟೋಬರ್ 9 ರಂದು ನ್ಯಾಯಾಲಯದಲ್ಲಿ ಅಕ್ಟೋಬರ್ 10 ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಕಾಕ್ ರೋಚ್ ಜನತಾ ಪಾರ್ಟಿಯ ಪ್ರತಿಭಟನೆಗೆ ಸಂಬಂಧಿಸಿದ ಭದ್ರತಾ ಕ್ರಮಗಳ ಬಗ್ಗೆ ವಿಚಾರಣೆ ನಡೆದಿತ್ತು. ಪ್ರತಿಭಟನೆಯನ್ನು ತಡೆಯಲು ದೆಹಲಿಯ 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲು ಆದೇಶಿಸಲಾಗಿತ್ತು ಮತ್ತು ರಾಜಧಾನಿಗೆ ಬರುವ ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿತ್ತು ಎಂಬ ವರದಿ ಬಂದಿತ್ತು. ಇದನ್ನು ಪ್ರಶ್ನಿಸಿದ ಸೂರ್ಯಕಾಂತ್ ನೇತೃತ್ವದ ಪೀಠವು ಪ್ರತಿಭಟನೆ ನಿಯಂತ್ರಣ ಅಗತ್ಯ, ಆದರೆ ಅದರ ಹೆಸರಿನಲ್ಲಿ ಅತಿಯಾದ ಕ್ರಮ ಬೇಡ ಎಂದು ಹೇಳಿತು. ನೊಣವನ್ನು ಕೊಲ್ಲಲು ಸುತ್ತಿಗೆ ಬಳಸುವ ಅಗತ್ಯವಿಲ್ಲ ಎಂಬ ಮಾತಿನ ಮೂಲಕ ಅಧಿಕಾರಿಗಳು ಮಿತಿ ಮೀರಿದ ನಿರ್ಬಂಧ ಹೇರಬಾರದು ಎಂಬ ಸಂದೇಶವನ್ನು ನ್ಯಾಯಾಲಯ ನೀಡಿತ್ತು.

ಏನಿದು ಮಖ್ಖಿ ಜನತಾ ಪಾರ್ಟಿ ..?

ಈ ಹೇಳಿಕೆಯಲ್ಲಿದ್ದ ನೊಣದ ಪದವನ್ನೇ ಇಟ್ಟುಕೊಂಡು ಈಗ ಮಖ್ಖಿ ಜನತಾ ಪಾರ್ಟಿ ಎಂಬ ಹೆಸರಿನ ವ್ಯಂಗ್ಯಾತ್ಮಕ ರಾಜಕೀಯ ಗುರುತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪಕ್ಷವು ತನ್ನನ್ನು ಪ್ರಜಾಪ್ರಭುತ್ವ, ನಾಗರಿಕರ ಹಕ್ಕುಗಳು, ಸಾರ್ವಜನಿಕ ಗೌರವವನ್ನು ಎತ್ತಿ ಹಿಡಿಯುವ ಗುಂಪು ಎಂದು ಬಿಂಬಿಸಿಕೊಳ್ಳುತ್ತಿದೆ. ಇದರ ವೆಬ್ ಸೈಟ್ ನಲ್ಲಿ ಉದ್ಯಮಶೀಲತೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆಯೂ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಕಾಕ್ ರೋಚ್ ಜನತಾ ಪಾರ್ಟಿ ಪ್ರತಿಭಟನೆಯ ಸಂಕೇತವಾಗಿ ಕಾಣಿಸಿಕೊಂಡಿದ್ದರೆ, ಮಖ್ಖಿ ಜನತಾ ಪಾರ್ಟಿ ಅಭಿವೃದ್ಧಿ ಮತ್ತು ಹಕ್ಕುಗಳ ಆಧಾರಿತ ವ್ಯಂಗ್ಯದ ಪ್ರತಿರೂಪವಾಗಿ ತನ್ನನ್ನು ಪರಿಚಯಿಸಿಕೊಳ್ಳುತ್ತಿದೆ.

ಇದನ್ನೂ ಓದಿ : ಎಸ್ಐಆರ್ ತಡೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಗೆ ರಾಹುಲ್ ಗಾಂಧಿ 10 ಮನವಿಗಳ ಅರ್ಜಿ

ನ್ಯಾಯಾಲಯದ ಒಂದೇ ಒಂದು ಮಾತು ಹೇಗೆ ಜನರ ಆಕ್ರೋಶ ಮತ್ತು ವ್ಯಂಗ್ಯಕ್ಕೆ ಹೊಸ ರೂಪ ನೀಡುತ್ತದೆ ಎಂಬುದಕ್ಕೆ ಇದು ಉದಾಹರಣೆ. ಸರ್ಕಾರಗಳು ಸಣ್ಣ ಪ್ರತಿಭಟನೆಯನ್ನು ದೊಡ್ಡ ಬೆದರಿಕೆಯಂತೆ ಪರಿಗಣಿಸಿ ಇಡೀ ನಗರದ ಸಾರಿಗೆ ವ್ಯವಸ್ಥೆಯನ್ನೇ ಸ್ಥಗಿತಗೊಳಿಸುವುದು ಪ್ರಜಾಪ್ರಭುತ್ವದಲ್ಲಿನ ಅಸಹಿಷ್ಣುತೆಯನ್ನು ತೋರಿಸುತ್ತದೆ. 57 ಮೆಟ್ರೋ ನಿಲ್ದಾಣ ಮುಚ್ಚುವುದು ಮತ್ತು ರೈಲು ರದ್ದು ಮಾಡುವುದು ನೊಣಕ್ಕೆ ಸುತ್ತಿಗೆ ಹೊಡೆದಂತೆ ಎಂಬ ನ್ಯಾಯಮೂರ್ತಿಗಳ ಮಾತು ಆಡಳಿತದ ಅತಿರೇಕದ ಕ್ರಮವನ್ನು ನಿಖರವಾಗಿ ವಿವರಿಸುತ್ತದೆ. ಜನರು ಈಗ ಜಿರಳೆ ಮತ್ತು ನೊಣದ ಹೆಸರಿನಲ್ಲಿ ಪಕ್ಷಗಳನ್ನು ಸೃಷ್ಟಿಸಿ ವ್ಯಂಗ್ಯ ಮಾಡುತ್ತಿರುವುದು ಆಡಳಿತದ ವಿರುದ್ಧದ ಸಾಮಾಜಿಕ ಮಾಧ್ಯಮದ ಪ್ರತಿರೋಧದ ಹೊಸ ಮಾರ್ಗವಾಗಿದೆ. ಭದ್ರತೆ ಮತ್ತು ಸ್ವಾತಂತ್ರ್ಯದ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳದಿದ್ದರೆ ಇಂತಹ ವ್ಯಂಗ್ಯಾತ್ಮಕ ಚಳುವಳಿಗಳು ಇನ್ನಷ್ಟು ಹುಟ್ಟಿಕೊಳ್ಳುವುದು ಸಹಜ.