☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

STING OPERATION: ಸಿದ್ದು ಸ್ಟಿಂಗ್ ವಿವಾದಕ್ಕೆ ಹೊಸ ತಿರುವು – ಡಿಕೆ ವಿರುದ್ಧ ರಾಜಣ್ಣ ಪರೋಕ್ಷ ವಾಗ್ದಾಳಿ

Image of DK Shivakumar with KN Rajanna about Sting operation

ಬೆಂಗಳೂರು : ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿರುವ ಸ್ಟಿಂಗ್ ಆಪರೇಷನ್ (Sting operation) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯ ಎಂಬ ಹೆಸರಿನ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಲಿದೆ. ಇದರ ನಡುವೆಯೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಈ ವಿವಾದದ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ಹಳೆಯ ದೃಶ್ಯಾವಳಿ ಎಂದು ಹೇಳಿರುವ ಅವರು ರಾಜ್ಯದಲ್ಲಿ ಇರುವುದು ಒಂದೇ ಕಾರ್ಖಾನೆ, ಆದರೆ ಅದರ ಪಾಲುದಾರರು ಬೇರೆ ಬೇರೆ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರಮೇಶ್ ಜಾರಕಿಹೊಳಿ ಪ್ರಕರಣದ ವಿಡಿಯೋವನ್ನು ಯಾರು ಸಿದ್ಧಪಡಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರತ್ತ ಬೊಟ್ಟು ಮಾಡಿದ್ದಾರೆ. ಇದರ ಹಿಂದೆ ಒಬ್ಬರೇ ಮಾಲೀಕರಿದ್ದು ಹಲವು ಸಹಚರರು ಇರಬಹುದು, ಕೆಟ್ಟ ಕೆಲಸ ಮಾಡಲು ಹೊರಟವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸ್ಟಿಂಗ್ ಸಂಚಲನ !

ಈ ಸ್ಟಿಂಗ್ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಸ್ವತಃ ಡಿ.ಕೆ.ಶಿವಕುಮಾರ್ ಅವರು ಪ್ರಸ್ತಾಪಿಸಿದ್ದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಆ ನಂತರ ಕರ್ನಾಟಕದ ರಾಜಕಾರಣಿಗಳ ಸ್ಟಿಂಗ್ ಎನ್ನಲಾದ ವಿಡಿಯೋ ಮತ್ತು ವರದಿಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸುವಂತೆ ಕೋರಿ ಸಿಸಿಎಚ್ 18 ನ್ಯಾಯಾಲಯದಲ್ಲಿ ಮೂಲ ದಾವೆ ದಾಖಲಾಗಿದೆ. ವಕೀಲ ಪ್ರವೀಣ್ ಕಾಮತ್ ಎಂ.ಆರ್. ಮೂಲಕ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಈ ದಾವೆಯ ಸಂಖ್ಯೆ 7655/2026 ಆಗಿದ್ದವು . ಒಟ್ಟು 42 ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಕಳೆದ ಒಂದು ವಾರದಿಂದ ಆಡಳಿತ ಪಕ್ಷದೊಳಗೆ ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಲ್ಲಿ ಮೌನವಾಗಿದ್ದರು, ನಂತರ ಮಾತನಾಡಿ ಸ್ಟಿಂಗ್ ನಡೆಯುತ್ತಿರುವುದು ಗೊತ್ತಿದೆ, ಆದರೆ ಅದರ ಹಿಂದಿರುವ ಶಕ್ತಿ ಯಾರು ಎಂಬುದು ಬಹಿರಂಗವಾಗಬೇಕು ಎಂದಿದ್ದರು. ಈ ವಿಷಯದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಕಳೆದ ಕೆಲವು ದಿನಗಳಿಂದ ಸಾಲು ಸಾಲು ಹೇಳಿಕೆ ನೀಡಿ, ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳನ್ನೇ ಗುರಿಯಾಗಿಸಿ ಬಲೆಗೆ ಬೀಳಿಸುವ ಪ್ರಯತ್ನ ನಡೆದಿದ್ದರೆ ಅದನ್ನು ಏಕೆ ಮುಚ್ಚಿಡಲಾಗುತ್ತಿದೆ, ಇದರ ಹಿಂದೆ ಯಾರಿದ್ದಾರೆ ಮತ್ತು ತಪ್ಪಿತಸ್ಥರನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ : ಕಬ್ಬು ಬೆಳೆಗೆ ಎಂಎಸ್‌ಪಿ ಚರ್ಚೆ ವಿಫಲ, ಇಂದಿನಿಂದ ಬಂದ್‌ಗೆ ರೈತರ ಕರೆ

ಈ ಪ್ರಕರಣ ಕೇವಲ ಒಂದು ವಿಡಿಯೋದ ವಿವಾದವಾಗಿ ಉಳಿದಿಲ್ಲ, ಕರ್ನಾಟಕದ ರಾಜಕಾರಣದಲ್ಲಿ ಕಳೆದ ಒಂದು ದಶಕದಿಂದ ನಡೆಯುತ್ತಿರುವ ಸಿ.ಡಿ ಸಂಸ್ಕೃತಿಯ ಮುಂದುವರಿದ ಭಾಗವಾಗಿ ಕಾಣುತ್ತಿದೆ. ಕೆ.ಎನ್.ರಾಜಣ್ಣ ಅವರ ಒಂದೇ ಫ್ಯಾಕ್ಟರಿ ಹೇಳಿಕೆ ಈ ಹಿಂದೆ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಕೇಳಿಬಂದಿದ್ದ ಆರೋಪಗಳನ್ನು ಮತ್ತೆ ನೆನಪಿಸುತ್ತದೆ. ರಾಜಣ್ಣ ಅವರು ಪಕ್ಷಭೇದ ಮರೆತು ಎಲ್ಲ ನಾಯಕರ ಮಾನ ಹರಾಜಾಗುತ್ತಿದೆ, ಇದರಿಂದ ನಾವೇ ನಮ್ಮ ಗೌರವವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿರುವುದು ಮುಖ್ಯವಾಗುತ್ತದೆ.

ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಸೂತ್ರದಂತೆ ಈ ಬೆಳವಣಿಗೆಗಳು ನಡೆಯುತ್ತಿವೆ ಎಂದು ಅವರು ಹೇಳಿರುವುದು ಕಾಂಗ್ರೆಸ್ ಒಳಗಿನ ಆಂತರಿಕ ಕಲಹದ ಸುಳಿವನ್ನು ನೀಡುತ್ತದೆ. ಈ ಸ್ಟಿಂಗ್ ಪ್ರಯೋಗ ನಡೆದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ನ್ಯಾಯಾಲಯದಲ್ಲಿ 42 ಮಾಧ್ಯಮಗಳ ವಿರುದ್ಧ ದಾವೆ ಹೂಡಿರುವುದು ಸುದ್ದಿಯನ್ನು ತಡೆಯುವ ಪ್ರಯತ್ನವೇ ಅಥವಾ ತಮ್ಮ ಮೇಲಿನ ದಾಳಿಯನ್ನು ಕಾನೂನಾತ್ಮಕವಾಗಿ ಎದುರಿಸುವ ತಂತ್ರವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ನಿಜಕ್ಕೂ ಇಂತಹ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರ ಸಮಗ್ರ ತನಿಖೆಯಾಗದೆ ಹೋದರೆ ಮುಂದಿನ ದಿನಗಳಲ್ಲಿ ಯಾವುದೇ ನಾಯಕನೂ ಸುರಕ್ಷಿತವಲ್ಲ ಎಂಬ ಭಯದ ವಾತಾವರಣ ಸೃಷ್ಟಿಯಾಗುತ್ತದೆ.