ಮಡಿಕೇರಿ: ದಸರಾ ಹಬ್ಬ ಬಂದಿದೆ, ಸಾಲು-ಸಾಲು ರಜೆಗಳು ದೊರಕಿವೆ. ಮಕ್ಕಳಿಗೂ ಸಹ ಈಗ ಮಧ್ಯವಾರ್ಷಿಕ ಪರೀಕ್ಷೆಗಳು ಮುಗಿದು ರಜೆ ಶುರುವಾಗಿದೆ. ಕುಟುಂಬವೆಲ್ಲ ಸೇರಿ ಪ್ರವಾಸ ಹೊರಡಲು ಇದು ಸರಿಯಾದ ಸಮಯ. ಆದರೆ ಏರಿರುವ ಪೆಟ್ರೋಲ್ ಬೆಲೆಗಳ ನಡುವೆ ಖಾಸಗಿ ವಾಹನಗಳಲ್ಲಿ ಪ್ರವಾಸ ಹೋಗುವುದು ಉಳ್ಳುವರಿಗೂ ಕಷ್ಟದ ಕಾರ್ಯ. ಹಾಗೆಂದು ಪ್ರವಾಸದ ಯೋಜನೆ ಕೈಬಿಡಬೇಕಿಲ್ಲ. ಇದೀಗ ದಸರಾ ವಿಶೇಷ ಕೊಡುಗೆಯಾಗಿ ಕೆಎಸ್ಆರ್ಟಿಸಿ (KSRTC) ಪ್ರಯಾಣಿಕರಿಗೆ ವಿಶೇಷ ಕೊಡುಗೆ ನೀಡುತ್ತಿದೆ. ಕೇವಲ 400 ರೂಪಾಯಿಗೆ ಕೊಡಗಿನ ರೌಂಡ್ ಟ್ರಿಪ್ ಮಾಡಬಹುದಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಪುತ್ತೂರು ವಿಭಾಗವು ವಿಶೇಷ ಪ್ರವಾಸಿ ಕೊಡುಗೆಯನ್ನು ನೀಡಿದೆ. ಕೊಡಗು ಜಿಲ್ಲೆಯ ರಮಣೀಯ ಪ್ರಕೃತಿ ಸೌಂದರ್ಯ, ಪ್ರಸಿದ್ಧ ದೇವಸ್ಥಾನಗಳು, ಜಲಪಾತಗಳು ಹಾಗೂ ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ಮಡಿಕೇರಿ ದಸರಾ ಪ್ರಯುಕ್ತ ವಿಶೇಷ ಒಂದು ದಿನದ ಪ್ಯಾಕೇಜ್ ಟೂರ್ ಅನ್ನು ಆಯೋಜಿಸಿದೆ. ಅಕ್ಟೋಬರ್ 11ರಿಂದ ಅಕ್ಟೋಬರ್ 26 ರವರೆಗೆ ಪ್ರವಾಸಿಗರಿಗೆ ಈ ಸೌಲಭ್ಯ ಲಭ್ಯವಿರಲಿದೆ. ಕಡಿಮೆ ವೆಚ್ಚದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಯಸುವ ಪ್ರವಾಸಿಗರು ಹಾಗೂ ಕುಟುಂಬಗಳಿಗೆ ಈ ಯೋಜನೆ ಅನುಕೂಲಕರ ಅವಕಾಶವಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಎರಡು ಪ್ಯಾಕೇಜ್ಗಳನ್ನು ನಿಗಮವು ಘೋಷಿಸಿದೆ. ಅದುವೇ ‘ಕಾವೇರಿ ದರ್ಶನ ಪ್ಯಾಕೇಜ್’ ಮತ್ತು ‘ಕೊಡಗಿನ ಸೊಬಗು ಪ್ಯಾಕೇಜ್’
ಕಾವೇರಿ ದರ್ಶನ ಪ್ಯಾಕೇಜ್
ಈ ಪ್ಯಾಕೇಜ್‌ನಲ್ಲಿ ಮಡಿಕೇರಿ ಬಸ್ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಪ್ರಯಾಣ ಆರಂಭವಾಗಲಿದೆ. ಪ್ರವಾಸಿಗರು ಓಂಕಾರೇಶ್ವರ ದೇವಸ್ಥಾನ, ಇಗ್ಗುತ್ತಪ್ಪ ದೇವಸ್ಥಾನ, ಭಾಗಮಂಡಲ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಅಬ್ಬಿ ಜಲಪಾತ ಹಾಗೂ ರಾಜಾಸೀಟು ಸೇರಿದಂತೆ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು. ಪ್ರಕೃತಿ ಸೌಂದರ್ಯದ ಜೊತೆಗೆ ದೇವಾಲಯಗಳ ದರ್ಶನವೂ ಆಗಲಿದೆ.
ಇದನ್ನೂ ಓದಿ: ‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಸಿಹಿ ಸುದ್ದಿ; ಮರುಪರಿಷ್ಕರಣೆ ನಡುವೆಯೂ ಖಾತೆಗೆ ಜಮೆಯಾಗಲಿದೆ ಹಣ
ಕೊಡಗಿನ ಸೊಬಗು ಪ್ಯಾಕೇಜ್
ಪ್ರಕೃತಿ ಸೌಂದರ್ಯ, ಪ್ರವಾಸಿ ತಾಣಗಳು ಹಾಗೂ ಕೊಡಗಿನ ವಿಶಿಷ್ಟ ಅನುಭವಗಳನ್ನು ಬಯಸುವವರಿಗಾಗಿ ಈ ಮಾರ್ಗವನ್ನು ರೂಪಿಸಲಾಗಿದೆ. ಮಡಿಕೇರಿ ಬಸ್ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಹೊರಡುವ ಬಸ್ ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಜಲಾಶಯ ಅಥವಾ ಆನೆ ಕ್ಯಾಂಪ್, ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ತೋಟಗಳು, ಅಬ್ಬಿ ಜಲಪಾತ ಮತ್ತು ರಾಜಾಸೀಟು ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಿದೆ.
ಪ್ಯಾಕೇಜಿನ ಬೆಲೆ ಎಷ್ಟು?
ಈ ವಿಶೇಷ ಪ್ಯಾಕೇಜ್ ಪ್ರವಾಸದ ಪ್ರಯಾಣ ದರವನ್ನು ವಯಸ್ಕರಿಗೆ ₹400 ಹಾಗೂ ಮಕ್ಕಳಿಗೆ ₹300 ಎಂದು ನಿಗದಿಪಡಿಸಲಾಗಿದೆ. ಊಟೋಪಹಾರ ಮತ್ತು ಪ್ರವೇಶ ಶುಲ್ಕಗಳು ಈ ದರದಲ್ಲಿ ಒಳಗೊಂಡಿರುವುದಿಲ್ಲ. ಬೆಳಗ್ಗೆ 6:30ಕ್ಕೆ ಆರಂಭವಾಗುವ ಪ್ರವಾಸವು ರಾತ್ರಿ ಸುಮಾರು 7:30ಕ್ಕೆ ಮಡಿಕೇರಿ ಬಸ್ ನಿಲ್ದಾಣಕ್ಕೆ ಮರಳಲಿದೆ. KSRTCಯ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದು.




