☔ Weather
Bengaluru: 🌧️ 21°C | AQI 49
Mysore: 🌦️ 22°C | AQI 42
Mangalore: ⛈️ 25°C | AQI 75
Bengaluru: 🌧️ 21°C | AQI 49

DK SHIVAKUMAR: ಟ್ರ್ಯಾಪ್ ಪಿತಾಮಹ ಯಾರು ಎಂದು ಗೊತ್ತಿದೆ – ಸೂಕ್ತ ಸಮಯದಲ್ಲಿ ಬಹಿರಂಗ ಎಂದ ಡಿ.ಕೆ

Image of DK Shivakumar

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಮ್ಮ ವಿರುದ್ಧವೇ ಟ್ರ್ಯಾಪ್ ಮಾಡುವ ಷಡ್ಯಂತ್ರ ನಡೆದಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮಿಂದಲೇ ಈ ಬಲೆಗೆ ಬೀಳಿಸುವ ಪ್ರಯತ್ನವನ್ನು ಕೆಲವರು ಆರಂಭಿಸಲು ಮುಂದಾಗಿದ್ದರು ಎಂದು ಅವರು ಹೇಳಿದ್ದಾರೆ. ತಾವು ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ಆಧಾರವಿಲ್ಲದೆ ಯಾವುದೇ ಮಾತನಾಡುವುದಿಲ್ಲ ಮತ್ತು ಈ ಸಂಬಂಧ ಎಲ್ಲಾ ಸಾಕ್ಷ್ಯಾಧಾರಗಳು ತಮ್ಮ ಬಳಿ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಟಿಂಗ್ ಆಪರೇಷನ್ ಪಿತಾಮಹ ಯಾರು..?

ಈ ಷಡ್ಯಂತ್ರದ ಹಿಂದಿರುವ ಪಿತಾಮಹ ಯಾರು ಮತ್ತು ಇದಕ್ಕೆ ಹಣಕಾಸಿನ ನೆರವು ನೀಡುತ್ತಿರುವವರು ಯಾರು ಎಂಬುದು ತಮಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿಯಾದ ನಂತರ ನಡೆದ ಬೆಳವಣಿಗೆಗಳು ಮತ್ತು ತಮ್ಮ ನಂತರ ಇತರರ ವಿರುದ್ಧ ನಡೆಯುತ್ತಿರುವ ಕೃತ್ಯಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ ಎಂದು ಅವರು ತಿಳಿಸಿದ್ದಾರೆ. ಈ ಕೃತ್ಯದ ಹಿಂದೆ ಕರ್ನಾಟಕದವರೇ ಇದ್ದಾರೆಯೇ ಅಥವಾ ಹೊರಗಿನವರ ಕೈವಾಡವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಎಲ್ಲವನ್ನೂ ಬಹಿರಂಗಪಡಿಸುವ ಅಗತ್ಯವಿಲ್ಲ, ಸೂಕ್ತ ಸಮಯ ಬಂದಾಗ ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹೋರಾಟದ ನಡುವೆಯೂ ಭೂಸ್ವಾಧೀನ ಮುಂದುವರಿಕೆ – 1,200 ಕೋಟಿ ಪರಿಹಾರ ಪಾವತಿ

ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ತಮ್ಮನ್ನೇ ಟ್ರ್ಯಾಪ್ ಮಾಡಲು ಯತ್ನ ನಡೆದಿದೆ ಎಂದು ಹೇಳುವುದು ರಾಜ್ಯ ರಾಜಕಾರಣದಲ್ಲಿ ಸಾಮಾನ್ಯ ಹೇಳಿಕೆಯಲ್ಲ. ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಅನೇಕ ರಾಜಕೀಯ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸಿ ಬಂದಿದ್ದಾರೆ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಪ್ರಕರಣಗಳಿಂದ ಹಿಡಿದು ಹಲವು ರಾಜಕೀಯ ಬೆಳವಣಿಗೆಗಳವರೆಗೆ ಅವರನ್ನು ಸುತ್ತುವರಿದಿವೆ. ಈ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗೆ ಹೆಚ್ಚಿನ ಮಹತ್ವ ಬರುತ್ತದೆ. ಅವರು ಪಿತಾಮಹ ಎಂಬ ಪದ ಬಳಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ರಾಜ್ಯದೊಳಗಿನ ಪ್ರಭಾವಿ ವ್ಯಕ್ತಿಯನ್ನು ಸೂಚಿಸುತ್ತದೆಯೇ ಅಥವಾ ಕೇಂದ್ರ ಮಟ್ಟದ ಶಕ್ತಿಗಳನ್ನು ಸೂಚಿಸುತ್ತದೆಯೇ ಎಂಬ ಚರ್ಚೆ ಆರಂಭವಾಗಿದೆ. ಇನ್ನು ಇದೆಲ್ಲಾ ಸಿಎಂ ಆದ ಬಳಿಕ ನಡೆದ ಬೆಳವಣಿಗೆಗಳು ಎಂದಿರುವುದು, ಅಧಿಕಾರ ಹಸ್ತಾಂತರದ ನಂತರ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಚ್ಚಾಟದ ಕಡೆಗೆ ಬೆರಳು ತೋರಿಸುತ್ತದೆ. ಆದ್ರೆ ಈ ಎಲ್ಲಾ ವಿವರಗಳನ್ನು ಈಗ ಬಹಿರಂಗಪಡಿಸುವುದಿಲ್ಲ ಎಂದು ಹೇಳಿರುವುದು ರಾಜಕೀಯ ತಂತ್ರವಾಗಿರಬಹುದು. ಸೂಕ್ತ ಸಮಯಕ್ಕಾಗಿ ಕಾಯುತ್ತಿರುವುದು ಎಂದರೆ ಅವರು ಈ ಸಾಕ್ಷ್ಯಗಳನ್ನು ತಮ್ಮ ರಾಜಕೀಯ ರಕ್ಷಣೆಯ ಅಸ್ತ್ರವಾಗಿ ಬಳಸಲು ಇಟ್ಟುಕೊಂಡಿದ್ದಾರೆ ಎಂಬ ಅರ್ಥವೂ ಬರುತ್ತದೆ. ಈ ಹೇಳಿಕೆ ಆಡಳಿತ ಪಕ್ಷದೊಳಗೆ ಭಿನ್ನಾಭಿಪ್ರಾಯವಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಮುಂದಿನ ದಿನಗಳಲ್ಲಿ ಅವರು ಯಾರ ಹೆಸರು ಬಹಿರಂಗಪಡಿಸುತ್ತಾರೆ ಮತ್ತು ಯಾವ ಸಾಕ್ಷ್ಯ ಮುಂದಿಡುತ್ತಾರೆ ಕಾದು ನೋಡಬೇಕಿದೆ.