Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಅವರಿಗೆ ಇಂದು ಅತ್ಯಂತ ನಿರ್ಣಾಯಕ ಹಾಗೂ ಕಠಿಣ ದಿನವಾಗಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಎಸ್. ರಾವ್ ಅವರ ಸಾಕ್ಷ್ಯ ಹೇಳಿಕೆ ದಾಖಲು ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಂದು ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ. ಜೈಲಿನಿಂದ ಹೊರಬರಲು ಒಂದೇ ಒಂದು ದಾರಿಯೂ ಸಿಗದೇ ಕಂಗಾಲಾಗಿರುವ ದರ್ಶನ್ ಅವರಿಗೆ ಇಂದಿನ ನ್ಯಾಯಾಲಯದ ಪ್ರಕ್ರಿಯೆಗಳು ತೀವ್ರ ಕುತೂಹಲ ಮತ್ತು ಆತಂಕ ಮೂಡಿಸಿವೆ.
6 ದಿನ, 20 ಗಂಟೆ, 150 ಪುಟಗಳ ಸುದೀರ್ಘ ಸಾಕ್ಷ್ಯ
ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್ ಒಟ್ಟು 6 ದಿನಗಳ ಕಾಲ ನ್ಯಾಯಾಲಯದ ಮುಂದೆ ಸುದೀರ್ಘವಾಗಿ ತಮ್ಮ ಸಾಕ್ಷ್ಯ ನುಡಿದಿದ್ದಾರೆ. ಸುಮಾರು 20 ಗಂಟೆಗಳ ಕಾಲ ನಡೆದಿರುವ ಈ ಪ್ರಕ್ರಿಯೆಯಲ್ಲಿ 150ಕ್ಕೂ ಹೆಚ್ಚು ಪುಟಗಳಷ್ಟು ವಿವರವಾದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಕೌರ್ಯ ಹಾಗೂ ಕೊಲೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪ್ರದೋಷ್ ಕೋರ್ಟ್ ಮುಂದೆ ಬಿಚ್ಚಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: Darshan Case: ಪ್ರದೋಶ್ ‘ಮಾಫಿ ಸಾಕ್ಷಿ’ ಯಲ್ಲಿ ಎಡವಟ್ಟು; ನಟ ದರ್ಶನ್ಗೆ ಒಲಿಯುತ್ತಾ ಬಿಗ್ ರಿಲೀಫ್?
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ವಿಚಾರಣೆ
ಪ್ರದೋಷ್ ಸಾಕ್ಷ್ಯ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಇಂದಿನ ವಿಚಾರಣೆಗೆ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಪ್ರದೋಷ್ ಸೇರಿದಂತೆ ಹಲವು ಆರೋಪಿಗಳು ಹಾಜರಾಗಬೇಕಿದೆ. ನ್ಯಾಯಾಲಯದ ಸೂಚನೆಯಂತೆ ಜೈಲಿನಲ್ಲಿರುವ ಎಲ್ಲ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಮುಂದಿನ ಪಾಟಿ ಸವಾಲು ಪ್ರಕ್ರಿಯೆ ಹಾಗೂ ವಿಚಾರಣೆಗಳನ್ನು ನ್ಯಾಯಾಧೀಶರು ಕೈಗೆತ್ತಿಕೊಳ್ಳಲಿದ್ದಾರೆ.
Darshan Case: ದರ್ಶನ್ ಅರ್ಜಿಯಂತೆ 7 ಪ್ರಮುಖ ಸಾಕ್ಷಿಗಳ ಡ್ರಿಲ್
ವಿಚಾರಣೆ ವೇಳೆ ಖುದ್ದು ಕೋರ್ಟ್‌ಗೆ ಹಾಜರಾಗಲು ಅನುಮತಿ ಕೋರಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮೊದಲು ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣದ ಪ್ರಮುಖ 7 ಸಾಕ್ಷಿಗಳ ಮುಖ್ಯ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಇಂದು ಈ 7 ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಪ್ರದೋಷ್ ನೀಡಿದ ಸಾಕ್ಷ್ಯ ಹಾಗೂ ಈ 7 ಸಾಕ್ಷಿಗಳ ವಿಚಾರಣೆ ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡುವ ನಿರೀಕ್ಷೆಯಿದೆ.




