Darshan Case: ಇಂದು ಮಾಫಿ ಸಾಕ್ಷಿ ಪ್ರದೋಷ್ ಅವರ ಹೇಳಿಕೆ ಮುಕ್ತಾಯವಾಗಲಿದ್ದು, ಮೂರನೇ ದಿನವಾದ ಇಂದು ಬಾಕಿ ಇರುವ ಹೇಳಿಕೆಯನ್ನು ದಾಖಲಿಸಲಾಗುತ್ತದೆ. 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಪ್ರಕರಣದ ಹಲವು ಪ್ರಮುಖ ರಹಸ್ಯಗಳು ಇಂದು ಹೊರಬೀಳುವ ನಿರೀಕ್ಷೆಯಿದೆ.
ಪಟ್ಟಣಗೆರೆ ಶೆಡ್ ಕ್ರೌರ್ಯದ ಇಂಚಿಂಚೂ ಮಾಹಿತಿ ಬಹಿರಂಗ
ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಕ್ರೌರ್ಯದ ಬಗ್ಗೆ ಪ್ರದೋಷ್ ಈಗಾಗಲೇ ಪ್ರಮುಖ ವಿವರಗಳನ್ನು ಕೋರ್ಟ್‌ಗೆ ನೀಡಿದ್ದಾರೆ. 2024ರ ಜೂನ್ 8ರಂದು ಶೆಡ್‌ನಲ್ಲಿ ಏನೇನು ನಡೆಯಿತು ಎಂಬುದರ ಇಂಚಿಂಚೂ ವಿವರಣೆಯನ್ನು ಪ್ರದೋಷ್ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಘಟನೆಯ ದಿನ ಶೆಡ್‌ನಲ್ಲಿ ಯಾರೆಲ್ಲಾ ಇದ್ದರು ಹಾಗೂ ಹೇಗೆಲ್ಲಾ ಹಲ್ಲೆ ನಡೆಸಲಾಯಿತು ಎಂಬುದನ್ನು ಅವರು ವಿವರಿಸಲಿದ್ದಾರೆ.
ಇಂದಿನ ವಿಚಾರಣೆಯಲ್ಲಿ ಏನೇನು ಮಾಹಿತಿ ರಿವೀಲ್ ಆಗಬಹುದು?
ನಟ ದರ್ಶನ್ ಪರಿಚಯ ಹೇಗಾಯಿತು ಹಾಗೂ ಘಟನೆಯ ದಿನ ತಾನು ಎಲ್ಲಿದ್ದೆ ಎಂಬುದನ್ನು ಪ್ರದೋಷ್ ಸ್ಪಷ್ಟಪಡಿಸಲಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ಯಾರೆಲ್ಲಾ ಬಂದಿದ್ದರು, ಕೊಲೆ ಹೇಗೆ ನಡೆಯಿತು ಎಂಬ ಸತ್ಯವನ್ನು ಕೋರ್ಟ್ ಮುಂದೆ ಬಿಚ್ಚಿಡಲಿದ್ದಾರೆ. ಶವ ಸಾಗಾಟ ಮತ್ತು ಸುಪಾರಿ ಆರೋಪಿಗಳ ವ್ಯವಸ್ಥೆ ಹೇಗೆ ಮಾಡಲಾಯಿತು ಎಂಬುದನ್ನೂ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಲಿದ್ದಾರೆ.
ಇದನ್ನು ಓದಿ: Darshan Case: ನಟ ದರ್ಶನ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕೊನೆಯ ಅವಕಾಶ; ಪ್ರದೋಷ್ ಮಾಫಿ ಸಾಕ್ಷಿ ವಿರುದ್ಧ ಶಾಸನಬದ್ಧ ಸಮರ
ಮಾಫಿ ಸಾಕ್ಷಿ ವಿರುದ್ಧ ದರ್ಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಏಕೆ?
ಮಾಫಿ ಸಾಕ್ಷಿ ಪ್ರದೋಷ್ ವಿರುದ್ಧ ನಟ ದರ್ಶನ್ ಕಾನೂನು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಹೈಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡ ಬೆನ್ನಲ್ಲೇ, ದರ್ಶನ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಮಾಫಿ ಸಾಕ್ಷಿ ವಿರುದ್ಧ ಒಟ್ಟು ಮೂರು ಮೇಲ್ಮನವಿಗಳು ಸಲ್ಲಿಕೆಯಾಗಿದ್ದು, ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಅರ್ಜಿ ಸಲ್ಲಿಸಿದ್ದಾರೆ.
Darshan Case: ಇದೇ ವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಸಾಧ್ಯತೆ
ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ದರ್ಶನ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇದೇ ವಾರ ವಿಚಾರಣೆಗೆ ಬರಲಿದೆ. ಇನ್ನೊಂದೆಡೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೂಷ್ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಹೇಳಿಕೆ ಪೂರ್ಣಗೊಳಿಸಲಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ಹೇಳಿಕೆ ದಾಖಲು ಪ್ರಕ್ರಿಯೆ ಇಂದು ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.




