ಬಿಗ್ಬಾಸ್ ಕನ್ನಡ ಸೀಸನ್ 13 (Bigg Boss Kannada) ಮನರಂಜನೆಗಿಂತಲೂ ಕಿತ್ತಾಟದಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಮಂಜ, ಲಿಖಿತ್ ಇನ್ನೂ ಕೆಲವರು ‘ಕಿತ್ತಾಟ’ವನ್ನೇ ‘ಬಿಗ್ಬಾಸ್ ಆಟ’ ಎಂದುಕೊಂಡು ಗೇಮ್ ಆಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೆ ವೈಲ್ಡ್ ಕಾರ್ಡ್ ಮೂಲಕ ಮೂವರು ಹೊಸ ಸ್ಪರ್ಧಿಗಳು ಎಂಟ್ಟಿ ಕೊಟ್ಟಿದ್ದು, ಅವರಲ್ಲಿ ಸಹ ಕೆಲವರು ಜಗಳವೇ ‘ಆಟ’ ಎಂದುಕೊಂಡು ಪ್ರತಿ ಮಾತಿಗೂ ಜಗಳವನ್ನೇ ಮಾಡುತ್ತಿದ್ದಾರೆ. ವಿಶೇಷಾಗಿ ಗಾನವಿ ಅವರು ಮನೆಯ ಎಲ್ಲ ಸದಸ್ಯರ ವಿರೋಧ ಕಟ್ಟಿಕೊಂಡಿದ್ದಾರೆ. ಶುಕ್ರವಾರದ ಎಪಿಸೋಡಿನಲ್ಲಂತೂ ಗಾನವಿ ಅವರು ತಮ್ಮ ಮತ್ತೊಂದು ಮುಖ ತೋರಿಸಿದ್ದಾರೆ. ಶಾಸ್ತ್ರಿ ಮತ್ತು ಮನೆಯ ಇತರೆ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿದ್ದಾರೆ.
ಶುಕ್ರವಾರದಂದು ಮನೆಯ ಸದಸ್ಯರಲ್ಲಿ ಕಳಪೆ ಯಾರೆಂದು ಆಯ್ಕೆ ಮಾಡಬೇಕಿತ್ತು. ಗಗನ್, ಯಶಸ್ ಇನ್ನೂ ಹಲವರು ಗಾನವಿಗೆ ಕಳಪೆ ನೀಡಿದರು. ಗಾನವಿಗೆ ಕಳಪೆ ನೀಡಿದಾಗಲೆಲ್ಲ ಮನೆಯ ಇತರೆ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದ್ದು ಎದ್ದು ಕಾಣುತ್ತು. ಆದರೆ ಗಾನವಿ ಸಹ ತಮಗೆ ಕಳಪೆ ನೀಡಿದವರ ಮೇಲೆಲ್ಲ ಜಗಳ ಮಾಡಿದರು. ವಿತಂಡ ವಾದ ಮಾಡಿದರು. ಮನೆಯ ಎಲ್ಲ ಸದಸ್ಯರಿಗೂ ಕಿರಿ-ಕಿರಿ ಮೂಡಿಸಿದರು. ಅದರಲ್ಲೂ ಕಿರಣ್ ಶಾಸ್ತ್ರಿ ಮಾತನಾಡುವಾಗ ಗಾನವಿ ಆಡಿದ ಮಾತು ಖುದ್ದು ಶಾಸ್ತ್ರಿ ಮತ್ತು ಮನೆಯ ಇತರೆ ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ಆಡಿದ ಮಾತಾಗಿತ್ತು.
ಕಿರಣ್ ಶಾಸ್ತ್ರಿ, ಕೆಲ ದಿನಗಳ ಹಿಂದೆ ಭಾವುಕರಾಗಿ ಕಣ್ಣೀರು ಹಾಕಿದ್ದರು. ಸೌಂದರ್ಯಾ ಅವರ ತೊಡೆಯ ಮೇಲೆ ಮಲಗಿ ಅವರು ಅತ್ತಿದ್ದರು. ಅದರ ಬಗ್ಗೆ ಗಾನವಿ ಕೀಳಾಗಿ ಕಮೆಂಟ್ ಮಾಡಿದರು. ಶಾಸ್ತ್ರಿ ಖುದ್ದು ಹೇಳಿದರು. ಸೌಂದರ್ಯ ನನಗೆ ಅಕ್ಕ ಅವರು ನನಗೆ ಎಮೋಷನಲ್ ಬೆಂಬಲ ನೀಡಿದರು ಎಂದು. ಆದರೆ ಗಾನವಿ ತೀರಾ ಕೀಳಾಗಿ ಮಾತನಾಡಿ, ‘ಮನೆಯ ಎಲ್ಲ ಹೆಣ್ಣು ಮಕ್ಕಳ ತೊಡೆ ಮೇಲೆ ಹೋಗಿ ಮಲಗಿಕೊ’ ಎಂದರು. ಇದರಿಂದ ಇಡೀ ಮನೆಯ ಹೆಣ್ಣು ಮಕ್ಕಳು ಒಂದು ಕ್ಷಣ ಶಾಕ್ ಆದರು. ಸೌಂದರ್ಯಾ ಅಂತೂ ‘ಚೀ ಇದು ಅಸಹ್ಯ, ಇದನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದರು. ಆಸಿಯಾ, ಕಾವ್ಯಾ ಸಹ ಗಾನವಿ ಮಾತನ್ನು ಕಟುವಾಗಿ ವಿರೋಧಿಸಿದರು. ಆ ಬಳಿಕ ಗಾನವಿ ನಾಮ್ ಕೆ ವಾಸ್ತೆ ಅಲ್ಲೇ ‘ಓಕೆ ಸಾರಿ’ ಎಂದರಾದರೂ ಶಾಸ್ತ್ರಿ ಮೇಲಿನ ವಾಗ್ದಾಳಿಯನ್ನು ಮುಂದುವರೆಸಿದರು.
ಗಗನ್, ಯಶಸ್, ಶಾಸ್ತ್ರಿ, ಸೋನಿಕಾ ಇನ್ನೂ ಹಲವಾರು ಸದಸ್ಯರು ಗಾನವಿಗೆ ಕಳಪೆ ನೀಡಿದರು. ಆದರೆ ಅಂತಿಮವಾಗಿ ಮಂಜ ಮತ್ತು ಗಾನವಿ ಇಬ್ಬರಿಗೂ ಸಮಾನ ಸಂಖ್ಯೆಯ ಮತಗಳು ಬಿದ್ದ ಕಾರಣ, ಇಬ್ಬರನ್ನೂ ಜೈಲಿಗೆ ಹಾಕಲಾಯ್ತು. ಆ ಬಳಿಕವೂ ಸಹ ಗಾನವಿ ಸುಮ್ಮನೆ ಕೂರಲಿಲ್ಲ, ಮನೆಯ ಹಲವು ಸದಸ್ಯರ ಮೇಲೆ ದೂರುಗಳನ್ನು ಹೇಳಿದರು. ಚುಚ್ಚು ಮಾತುಗಳನ್ನು ಸಹ ಆಡಿದರು. ಸುದೀಪ್ ಅವರ ಬುದ್ಧಿವಾದದ ಬಳಿಕ ಮಂಜನ ಟಾಕ್ಸಿಸಿಟಿ ತುಸು ಕಡಿಮೆ ಆಗಿತ್ತು ಆದರೆ ಗಾನವಿ ಹೆಸರಲ್ಲಿ ಡಬಲ್ ಟಾಕ್ಸಿಸಿಟಿ ಮನೆ ಪ್ರವೇಶಿಸಿದೆ.




