ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಹಫ್ತಾ ವಸೂಲಿ ಮಾಡುವ ಗಿರಾಕಿ, ಅವರ ಅಕ್ರಮದ ಕೆಜಿಎಫ್-2, ಕೆಜಿಎಫ್-3 ಮಟ್ಟದ ದಾಖಲೆಗಳು ನಮ್ಮ ಬಳಿಯೂ ಇವೆ ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ನೈಸ್ ಯೋಜನೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಬಾಲಕೃಷ್ಣ, ಎಚ್‍ಡಿಕೆ ಪ್ರಸ್ತಾಪಿಸುತ್ತಿರುವ ಅಂಶಗಳಲ್ಲಿ ಹೊಸತೇನೂ ಇಲ್ಲ, ಆ ಎಲ್ಲಾ ವಿವರಗಳನ್ನು ಶಿವಕುಮಾರ್ ಅವರು ಈಗಾಗಲೇ ಚುನಾವಣಾ ಅಫಿಡವಿಟ್ ನಲ್ಲಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು 3B ಅಂದರೆ ಬ್ಲಾಕ್ ಮೇಲಿಂಗ್, ಬ್ಯಾಕ್ ಸ್ಟ್ಯಾಬಿಂಗ್ ಮತ್ತು ಬ್ಲಾಕ್ ಮ್ಯಾಜಿಕ್ ಗೆ ಖ್ಯಾತರು ಎಂದು ಟೀಕಿಸಿರುವ ಸಚಿವರು, ಈ ಹಿಂದೆ ಧರ್ಮಸಿಂಗ್ ಮತ್ತು ಬಿ.ಎಸ್.ಯಡಿಯೂರಪ್ಪ ಅವರಿಗೆ ಅವರು ಬೆನ್ನಿಗೆ ಚೂರಿ ಹಾಕಿದ್ದನ್ನು ನೆನಪಿಸಿದ್ದಾರೆ. ಪ್ರತಿದಿನ ಯಾರನ್ನಾದರೂ ಬೆದರಿಸುವುದು, ಬ್ಲಾಕ್ ಮೇಲ್ ಮಾಡುವುದು ಮತ್ತು ದಾರಿ ತಪ್ಪಿಸುವುದೇ ಅವರ ನಿತ್ಯದ ಕೆಲಸವಾಗಿದೆ, ಇದು ಕೆಲಸವಿಲ್ಲದ ಕುಂಬಾರನಂತಹ ಸ್ಥಿತಿ ಎಂದು ಲೇವಡಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಬೆಳವಣಿಗೆ ಮತ್ತು ಪ್ರಭಾವವನ್ನು ಸಹಿಸಿಕೊಳ್ಳಲು ಆಗದೆ ಕುಮಾರಸ್ವಾಮಿ ಅವರಿಗೆ ನಿದ್ದೆಯೇ ಬರುತ್ತಿಲ್ಲ ಎಂದು ಅವರ ಆಪ್ತರೇ ಹೇಳುತ್ತಿದ್ದಾರೆ, ಮೊದಲು ಅವರು ನಿದ್ದೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲಿ ಇಲ್ಲದಿದ್ದರೆ ಮುಂದೆ ಆರೋಗ್ಯ ಹದಗೆಟ್ಟರೆ ಅದಕ್ಕೂ ಶಿವಕುಮಾರ್ ಕಾರಣ ಎಂದು ಹೇಳಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕುಮಾರಣ್ಣನ ಗೊಡ್ಡು ಬೆದರಿಕೆಗೆ ಹೆದರಲ್ಲ – ಹೆಚ್.ಡಿ.ಕೆ ಆರೋಪಕ್ಕೆ ಡಿಕೆ ಕೌಂಟರ್
ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಏನು ಮಾಡಿದರು ಎಂದು ಪ್ರಶ್ನಿಸಿರುವ ಅವರು, ರಾತ್ರಿ ಸೂಟ್ ಕೇಸ್ ತಲುಪಿದ ಕೂಡಲೇ ಮಾತು ಬದಲಾಯಿಸುವುದು ಅವರ ಹಳೆಯ ಚಾಳಿ, ನಮ್ಮ ಹಳೆಯ ಸ್ನೇಹಿತ ಈಗ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಮೊದಲು ರಾಜ್ಯದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ಕೊಡಿಸಲಿ ಇಲ್ಲದಿದ್ದರೆ ಜನರು ಪಾಠ ಕಲಿಸುತ್ತಾರೆ, ಚನ್ನಮ್ಮ ಅವರಿಗೆ ಐಟಿ ನೋಟಿಸ್ ಬಂದ ಕೂಡಲೇ ಮೋದಿ ಮತ್ತು ಅಮಿತ್ ಶಾ ಬಳಿ ಹೋಗಿ ಶರಣಾಗಿ ಮೈತ್ರಿ ಮಾಡಿಕೊಂಡರು ಎಂದು ಆರೋಪಿಸಿದ್ದಾರೆ. ಜೊತೆಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಸಹೋದರ ಬಾಲಕೃಷ್ಣ ಗೌಡರ ಆಸ್ತಿ ಒಂದೇ ವರ್ಷದಲ್ಲಿ ಸಾವಿರ ಕೋಟಿಗೆ ಹೇಗೆ ಏರಿತು ಎಂಬುದರ ತನಿಖೆಯಾಗಬೇಕು ಎಂದು ಸವಾಲು ಹಾಕಿದ್ದಾರೆ.
ಒಕ್ಕಲಿಗ ನಾಯಕರ ರಾಜಕೀಯ ಸಮರ !
ಈ ಪ್ರಕರಣವನ್ನು ಕೇವಲ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಮಾತಿನ ಚಕಮಕಿ ಎಂದು ಪರಿಗಣಿಸಲು ಸಾಧ್ಯವಿಲ್ಲ, ಇದರ ಹಿಂದೆ ದಶಕಗಳ ರಾಜಕೀಯ ಹಗೆತನ ಮತ್ತು ಕಾರ್ಯತಂತ್ರ ಇದೆ. ನೈಸ್ ಯೋಜನೆ ಕರ್ನಾಟಕದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಪ್ರತಿ ಚುನಾವಣೆಯಲ್ಲೂ ಮರುಬಳಕೆಯಾಗುವ ಅಸ್ತ್ರ, ನ್ಯಾಯಾಲಯದಲ್ಲಿರುವ ವಿಚಾರವನ್ನು ರಾಜಕೀಯವಾಗಿ ಕೆದಕುವುದು ಎರಡೂ ಕಡೆಯ ಸಾಮಾನ್ಯ ತಂತ್ರವಾಗಿದೆ. ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಎತ್ತರ ಮತ್ತು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ ಎಂಬುದು ಬಾಲಕೃಷ್ಣ ಅವರ ವಾದ. ಅದಕ್ಕೆ ಪ್ರತಿಯಾಗಿ ಕೆಜಿಎಫ್-2, ಕೆಜಿಎಫ್-3 ದಾಖಲೆ ಇದೆ ಎನ್ನುವುದು ಬ್ಲಾಕ್ ಮೇಲ್ ಗೆ ಪ್ರತೀ ಬ್ಲಾಕ್ ಮೇಲ್ ಎಂಬ ಸಂದೇಶ. ಸಿನಿಮಾ ಹೆಸರಿನಲ್ಲಿ ದಾಖಲೆಗಳನ್ನು ಬಿಂಬಿಸುವುದು ಸಾರ್ವಜನಿಕರಲ್ಲಿ ಕುತೂಹಲ ಸೃಷ್ಟಿಸುವ ಪ್ರಚಾರ ತಂತ್ರವೂ ಹೌದು. 3B ಎಂಬ ಲೇಬಲ್ ಅಂಟಿಸುವುದು ವಿಚಾರಾಧಾರಿತ ಚರ್ಚೆಯನ್ನು ವೈಯಕ್ತಿಕ ವರ್ಚಸ್ಸು ಹಾಳು ಮಾಡುವ ಹಂತಕ್ಕೆ ಕೊಂಡೊಯ್ಯುತ್ತದೆ. ಸೂಟ್ ಕೇಸ್, ಹಫ್ತಾ, ಐಟಿ ನೋಟಿಸ್ ನಂತರ ಮೈತ್ರಿ, ಸಹೋದರನ ಆಸ್ತಿ ಏರಿಕೆ ಎಂಬ ಆರೋಪಗಳು ಗಂಭೀರವಾಗಿದ್ದರೂ ಸೂಕ್ತ ದಾಖಲೆ ಮತ್ತು ತನಿಖೆ ಇಲ್ಲದೆ ಕೇವಲ ಹೇಳಿಕೆಗೆ ಸೀಮಿತವಾದರೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತವೆ. ರೈತರಿಗೆ ಪರಿಹಾರದ ವಿಷಯವನ್ನು ಮಧ್ಯೆ ತರುವುದು ಚರ್ಚೆಯನ್ನು ಭಾವನಾತ್ಮಕ ನೆಲಕ್ಕೆ ಸೆಳೆಯುವ ಪ್ರಯತ್ನ. ಒಟ್ಟಾರೆ ಈ ಬೆಳವಣಿಗೆ ಕಾನೂನು ಹೋರಾಟಕ್ಕಿಂತ ಹೆಚ್ಚಾಗಿ ಮಾಧ್ಯಮ ಸಮರವಾಗಿ ಮುಂದುವರೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ನೊಳಗಿನ ಭಿನ್ನಮತ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಯ ಭವಿಷ್ಯದ ಮೇಲೆ ಪರೋಕ್ಷ ಪರಿಣಾಮ ಬೀರಬಹುದು.




