Idli Hotel: ಮೃದುವಾದ ಇಡ್ಲಿಗೆ ಖಾಯಂ ವಿಳಾಸ ಈ ‘ಹರಿ ಹೋಟೆಲ್ಲು’

Idli Hotel

Idli Hotel: ಬೆಂಗಳೂರಿನಿಂದ ಮೇಖ್ರಿ ವೃತ್ತ, ಹೆಬ್ಬಾಳ ದಾಟಿ ಹೈದರಾಬಾದ್ ಹೈವೆಯಲ್ಲಿ ಫ್ಲೈ ಓವರ್ ಹತ್ತಿದರೆ ಅರ್ಧ ಗಂಟೆಯಲ್ಲೇ ದೇವನಹಳ್ಳಿ ಬಂದು ಬಿಡುತ್ತದೆ. ದೇವನಹಳ್ಳಿ ದಾಟುವ ಮುನ್ನವೇ ಬಲಕ್ಕೆ ತಿರುವು ತೆಗೆದುಕೊಂಡರೆ ಅದು ಕೋಲಾರಕ್ಕೆ ಹೋಗುವ ದಾರಿ. ಆ ದಾರಿಯಲ್ಲಿ ಒಂದರ್ಧ ಗಂಟೆ ಕ್ರಮಿಸಿದರೆ ಸಿಗುವ ಊರು ವಿಜಯಪುರ. ತಾಲ್ಲೂಕಾಗುವ ಎಲ್ಲ ಅರ್ಹತೆ ಇದ್ದರೂ ಪಟ್ಟಣವಾಗಿಯೇ ಉಳಿದಿರುವ ಊರದು. ವಿಜಯಪುರದಲ್ಲಿರುವ ಹಲವಾರು ಪುರಾತನ ಐತಿಹ್ಯವುಳ್ಳ ದೇವಾಲಯಗಳ ಕಾರಣದಿಂದಾಗಿ ಈ ಊರನ್ನು ದಕ್ಷಿಣ ಕಾಶಿ ಎಂದೂ ಸಹ ಕರೆಯಲಾಗುತ್ತದೆ. ಮಹಾಭಾರತದ ಕಾಲದ್ದೆನ್ನಲಾದ ದೇವಾಲಯಗಳು, ಕಲ್ಯಾಣಿಗಳ ಜೊತೆಗೆ ಈ ಊರು ಮತ್ತೊಂದು ವಿಷಯಕ್ಕೂ ಬಲು ಪ್ರಸಿದ್ಧ, ಅದುವೇ ಮೃದುವಾದ ಇಡ್ಲಿ .

ವಾರಾಂತ್ಯ ಬಂತೆಂದರೆ ಬೆಂಗಳೂರಿನಿಂದ ದಂಡಿ-ದಂಡಿ ಜನ ವಿಜಯಪುರದ ನಾಣಿ ಹೋಟೆಲ್, ಬಾಬು ಹೋಟೆಲ್ ಇನ್ನಿತರೆಗಳಿಗೆ ಬೆಳಿಗಿನ ಉಪಹಾರ ಸವಿಯಲು ಧಾವಿಸುತ್ತಾರೆ. ನಾಣಿ, ಬಾಬು ಹೋಟೆಲ್ಲು, ಚಿಕ್ಕವೀರಣ್ಣ ಸ್ವೀಟ್ಸ್ಗಳು ವಿಜಯಪುರದ ಖಾದ್ಯಗಳ ರುಚಿಯ ಗರಿಮೆಯನ್ನು ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾರಿವೆ. ಆದರೆ ಈ ಹೋಟೆಲ್ಲುಗಳ ಹೊರತಾಗಿಯೂ ಇನ್ನೂ ಕೆಲವು ಎಲೆ-ಮರೆ ಕಾಯಿಯಂತೆ ಅಥವಾ ಯೂಟ್ಯೂಬ್ ಭಾಷೆಯಲ್ಲಿ ಹೇಳುವುದಾದರೆ ಅಂಡರ್​ರೇಟೆಡ್ ಅಥವಾ ಹಿಡನ್ ಜೆಮ್​​ಗಳು ವಿಜಯಪುರದಲ್ಲಿ ಇನ್ನೂ ಕೆಲವು ಇವೆ. ಅವುಗಳಲ್ಲಿ ಒಂದು ನಾಣಿ ಹೋಟೆಲ್ಲಿನಿಂದ ತುಸುವೇ ದೂರದಲ್ಲಿರುವ ‘ಹರಿ ಹೋಟೆಲ್ಲು’.

Idli Hotel: ಹೋಟೆಲ್ಲಿನ ವಿಳಾಸ

ವಿಜಯಪುರದ ‘ಬೆಳಿಗ್ಗೆ ಮಾರ್ಕೆಟ್’ ರಸ್ತೆಯಲ್ಲಿರುವ ಹರಿ ಹೋಟೆಲ್ ನ ನಿಜ ಹೆಸರು ‘ಶ್ರೀ ಲಕ್ಷ್ಮಿ ಹೋಟೆಲ್’ ಆದರೆ ಈ ಹೆಸರು ಸ್ಥಳೀಯರಿಗೆ ಅಪರಿಚಿತ, ವಿಜಯಪುರವಾಸಿಗಳು ಈ ಹೋಟೆಲ್ ಅನ್ನು ಗುರುತಿಸುವುದು ‘ಹರಿ ಹೋಟೆಲ್’ ಎಂದೇ. ಬಹಳ ಸರಳವಾದ, ಚಿಕ್ಕದಾದ ಆದರೆ ಚೊಕ್ಕದಾದ ಹೋಟೆಲ್ ಇದು. ಹೋಟೆಲ್ ಒಳಗೆ ಇರುವುದು ಐದೇ ಮೇಜು, ಒತ್ತರಿಸಿ ಕುಳಿತರೂ ಒಂದು ಬಾರಿಗೆ ಹತ್ತು ಮಂದಿ ಕೂರಬಹುದಷ್ಟೆ. ಸಿಗುವ ಖಾದ್ಯಗಳ ಸಂಖ್ಯೆಯೂ ಕಡಿಮೆ, ಇಡ್ಲಿ, ದೋಸೆ ಮತ್ತು ಚಿತ್ರಾನ್ನ ಆದರೆ ರುಚಿ ಮಾತ್ರ ನೆನಪುಳಿಯುವಂಥಹದ್ದು.

ಕಿರಿದಾದ ಹರಿ ಹೋಟೆಲ್ ಪ್ರವೇಶಿಸುತ್ತಿದ್ದಂತೆ ತುಸು ಬೆಚ್ಚನೆಯ ಅನುಭವ ಆಗುತ್ತದೆ. ಇಡ್ಲಿ ಒಬ್ಬಿಯ ಹಬೆ ನಿಮ್ಮನ್ನು ತಾಕುತ್ತಿರುತ್ತದೆ. ಕಿರಿದಾದ ಟೇಬಲ್ಲಿನ ಮೇಲೆ ಕೂರುತ್ತಿದ್ದಂತೆ ಟೇಪ್​​ರೆಕಾರ್ಡರ್​​ನಲ್ಲಿ ದೇವರ ನಾಮ ಕಿವಿಗೆ ಬೀಳುತ್ತದೆ. ಜೊತೆಗೆ ದೇವರಿಗೆ ಹಚ್ಚಿಟ್ಟ ಅಗರಬತ್ತಿಯ ಸುಂಗಂಧ ಮೂಗಿಗೆ ಬಡಿಯುತ್ತದೆ. ಅತ್ತಿತ್ತ ಕಣ್ಣಾಯಿಸಿ, ಹಳೆಯ ಕ್ಯಾಲೆಂಡರು, ದೇವರ ಫೋಟೊಗಳನ್ನು ನೋಡುತ್ತಿದ್ದಂತೆ ಟೇಬಲ್ ಮೇಲೆ ಗ್ಲಾಸುಗಳನ್ನಿಟ್ಟು ಅದಕ್ಕೆ ನೀರು ಸುರಿಯುತ್ತಾ, ‘ಆ… ಏನ್ ಕೊಡ್ಲಿ’ ಎನ್ನುತ್ತಾರೆ ಹರಿ. ಮಾತಿಗೆ ಮುಂಚೆ ‘ಆ…’ ಹಚ್ಚದೆ ಮಾತನಾಡುವುದೇ ವಿರಳ ಅವರು. ಬಿಎಂಟಿಸಿ ಬಸ್ ಕಂಡೆಕ್ಟರ್ ಶೈಲಿಯಲ್ಲಿ ಧಾವಂತದಲ್ಲೇ ಮಾತನಾಡುತ್ತಾ, ನಿಮ್ಮ ಅಗತ್ಯಗಳನ್ನು ತಿಳಿದುಕೊಂಡು ಪಕ್ಕದಲ್ಲೇ ಇರುವ ಅಡುಗೆ ಮನೆಯತ್ತ ತಿರುಗಿ ಮತ್ತೊಮ್ಮೆ ಆರ್ಡರ್ ಅನ್ನು ರಿಪೀಟ್ ಮಾಡುತ್ತಾರೆ. ಅವರ ಪತ್ನಿ ಆರ್ಡರ್ ರೆಡಿ ಮಾಡುತ್ತಾರೆ. ಈ ಇಬ್ಬರೇ ಈ ಹೋಟೆಲ್ಲಿನ ಓನರ್, ಸರ್ವರ್, ಕ್ಲೀನರ್, ಕುಕ್ ಎಲ್ಲವೂ.

ಸಿಗುವ ಖಾದ್ಯಗಳು

ಹರಿ ಹೋಟೆಲ್ಲಿನ ಖಾದ್ಯಗಳು ಬಹಳ ಲಿಮಿಟ್ಟು, ಇಡ್ಲಿ, ದೋಸೆ, ಚಿತ್ರಾನ್ನ ಒಮ್ಮೊಮ್ಮೆ ಪುಳಿಯೋಗರೆ. ಇಷ್ಟೆ ಅಲ್ಲಿ ಸಿಗುವುದು. ಆದರೆ ಅಲ್ಲಿನ ಇಡ್ಲಿಗೆ ಸರಿಸಾಟಿಯಾದ ಇಡ್ಲಿ ಕರ್ನಾಟಕದಲ್ಲಿ ಬಹಳ ವಿರಳ ಎನ್ನಬಹುದು. ಬಲು ಮೃದುವಾದ, ಕೈಯಲ್ಲಿ ಹಿಡಿದರೆ ಬಳುಕುವ ಇಡ್ಲಿಗಳವು. ಇಡ್ಲಿ ಮುರಿದು ಬಾಯಿಗಿಟ್ಟರೆ ದವಡೆಗೆ ಕೆಲವೇ ಇಲ್ಲ, ನಾಲಗೆ ಮೇಲೆಯೇ ಕರಗಿ ಉದರ ಸೇರುತ್ತದೆ. ಇಂಡ್ಲಿಗೆ ದ್ರವ-ಘನ ಎರಡೂ ರೀತಿಯ ಚಟ್ನಿ ಲಭ್ಯವಿರುತ್ತದೆ. ಬೇಕೆಂದರೆ ಸಣ್ಣ ಮೊತ್ತವನ್ನು ನೀಡಿ ಪಲ್ಯವನ್ನೂ ತೆಗೆದುಕೊಳ್ಳಬಹುದು. ನೀಡಿದ ಹಣಕ್ಕೆ ಮೋಸ ಮಾಡುವುದಿಲ್ಲ ಆ ಆಲೂಗಡ್ಡೆ ಪಲ್ಯ.

ಹರಿ ಹೋಟೆಲ್ಲಿನಲ್ಲಿ ಇಡ್ಲಿಯಷ್ಟೆ ದೋಸೆಯೂ ರುಚಿಕರ. ದೋಸೆ, ಮಸಾಲೆ ದೋಸೆ ಇನ್ನೂ ಕೆಲ ರೀತಿಯ ದೋಸೆಗಳು ಅಲ್ಲಿ ಲಭ್ಯ, ವಿಶೇಷವಾಗಿ ಅಲ್ಲಿನ ‘ಎಸ್​​ಪಿ ಖಾಲಿ’ ಮರೆಯದೇ ಪ್ರಯತ್ನಿಸಿ. ಬಹಳ ಅಗಲವಾದ ದೋಸೆ ಅಲ್ಲದಿದ್ದರೂ ರುಚಿಯಾದ ದೋಸೆಗಳವು. ತುಪ್ಪ ಸಹ ಬೇಕೆಂದರೆ ಹೆಚ್ಚುವರಿಯಾಗಿ ಕೇಳಿ ಪಡೆದುಕೊಳ್ಳಬಹುದು. ಇನ್ನು ಚಿತ್ರಾನ್ನ, ಪುಲಿಯೋಗರೆಗಳೂ ಸಹ ರುಚಿ ಎನ್ನಿಸುತ್ತವೆ ಆದರೆ ಇಡ್ಲಿ ಮತ್ತು ದೋಸೆಗಳೇ ಅಲ್ಲಿನ ಹೈಲೆಟ್ಟು.

ಹೋಟೆಲ್ಲಿನ ಮಾಲೀಕ ಹರಿ ಅವರು ಹೇಳುವಂತೆ ಸುಮಾರು 50 ವರ್ಷಗಳಿಂದಲೂ ಹೋಟೆಲ್ಲನ್ನು ನಡೆಸಿಕೊಂಡು ಬರುತ್ತಿದ್ದಾರಂತೆ. ಅವರ ತಂದೆಯವರು ಪ್ರಾರಂಭಿಸಿದ ಹೋಟೆಲ್ ಅದು. ಬೆಳಿಗ್ಗೆ 5:30ಕ್ಕೆಲ್ಲ ಅವರು ಅವರ ಪತ್ನಿ ಹೋಟೆಲ್ ಕೆಲಸಗಳನ್ನು ಪ್ರಾರಂಭ ಮಾಡುತ್ತಾರೆ. 7 ಗಂಟೆ ವೇಳೆಗೆಲ್ಲ ಇಡ್ಲಿ ಬೇಯಲು ಶುರುವಾಗುತ್ತದೆ. ಸುಮಾರು 10:30-11 ಗಂಟೆ ವರೆಗೆ ಮಾತ್ರವೇ ಹೋಟೆಲ್ ತೆರೆದಿರುತ್ತದೆ. ಆ ನಂತರ ಮತ್ತೆ ಮಾರನೇಯ ದಿನವೇ.

ಹೋಟೆಲ್‌ ಬಗೆ ಮಾಹಿತಿ

  • ಹೋಟೆಲ್ ಹೆಸರು: ಹರಿ ಹೋಟೆಲ್
  • ವಿಳಾಸ: ವಿಜಯಪುರ, ಬೆಳಿಗ್ಗೆ ಮಾರ್ಕೆಟ್ ಬಳಿ
  • ಸಮಯ: ಬೆಳಿಗ್ಗೆ 7 ಗಂಟೆಯಿಂದ 10:30
  • ಖಾದ್ಯಗಳು: ಇಡ್ಲಿ, ದೋಸೆ, ಚಿತ್ರಾನ್ನ, ಪುಳಿಯೋಗರೆ

ಗೂಗಲ್‌ ಮ್ಯಾಪ್‌ಗಾಗಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ