PRIYANK KHARGE : ಬಿಜೆಪಿಯವರು ಹೇಳಿದಂಗೆಲ್ಲಾ ಸರ್ಕಾರ ನಡೆಸಲ್ಲ – ಪ್ರಿಯಾಂಕ್ ನಿಗಿ ನಿಗಿ !

ಇಂದು (ಸೆ.14) ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಅವರ ಗಣೇಶ ಮೆರವಣಿಗೆ ಭದ್ರತೆ ಹೇಳಿಕೆ ವಿವಾದಕ್ಕೆ ಪ್ರತಿಕ್ರಿಯಿಸಿದರು. ಇನ್ಸ್‌ಪೆಕ್ಟರ್ ಅಮಾನತಿಗೆ ಬಿಜೆಪಿ ಆಗ್ರಹಿಸಿದ್ದು, ವಿರೋಧ ಪಕ್ಷ ಹೇಳಿದ ತಕ್ಷಣ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಆಗುವುದಿಲ್ಲ, ಅವರ ಮಾತಿಗೆ ಮಣಿದು ಆಡಳಿತ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಿಸ್ತು ಕ್ರಮದ ಅಧಿಕಾರ ಕೇವಲ ಎಸ್‌ಪಿಗೆ ಸೀಮಿತವಲ್ಲ, ಅಂತಿಮ ತೀರ್ಮಾನ ಸರ್ಕಾರದ್ದು ಎಂದು ಹೇಳಿದ ಅವರು ಎಸ್‌ಪಿ ವರದಿ ನಂತರ ತಾವೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಹಬ್ಬದ ದಿನ ಪೊಲೀಸರು ಕುಟುಂಬವನ್ನು ತೊರೆದು ಜನರ ರಕ್ಷಣೆಗೆ ದುಡಿಯುತ್ತಾರೆ, ವಿರೋಧ ಪಕ್ಷಗಳು ಹುಳಿ ಹಿಂಡದೆ ಶಾಂತಿಯುತ ಆಚರಣೆಗೆ ಬಿಡಬೇಕು ಎಂದರು. ಮೈಸೂರಿನ ನಿರುದ್ಯೋಗಿ ರಾಜಕಾರಣಿಗಳು ಠಾಣೆಗೆ ನುಗ್ಗುವ ಬೆದರಿಕೆ ಹಾಕುತ್ತಿದ್ದಾರೆ, ತಮ್ಮ ಸರ್ಕಾರ ಇದ್ದಾಗ ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನಿಸಿದರು. ಇನ್ಸ್‌ಪೆಕ್ಟರ್ ಮಾತು ಖಾರವಾಗಿರಬಹುದು, ಆದರೆ ಮೆರವಣಿಗೆಗೆ ಹಲವು ದಾರಿಗಳಿವೆ, ಸೂಕ್ಷ್ಮ ಸ್ಥಳದಲ್ಲಿ ಪಟಾಕಿ ಏಕೆ ಎಂಬುದನ್ನು ಗಮನಿಸಬೇಕು ಎಂದರು.

ಈ ಪ್ರಕರಣ ಹಬ್ಬದ ಭದ್ರತೆಯನ್ನು ರಾಜಕೀಯಗೊಳಿಸುವ ಅಪಾಯವನ್ನು ತೋರಿಸುತ್ತದೆ. ಸೂಕ್ಷ್ಮ ಮಾರ್ಗದಲ್ಲಿ ಪಟಾಕಿ, ಮೆರವಣಿಗೆ ನಿಯಂತ್ರಣ ಪೊಲೀಸರ ದಿನನಿತ್ಯದ ವಿವೇಚನೆಯಾಗಿದ್ದು ಅದನ್ನು ಬೆದರಿಕೆ ಎಂದು ಬಿಂಬಿಸಿ ಅಮಾನತು ಅಸ್ತ್ರ ಪ್ರಯೋಗಿಸುವುದು ಸರಿಯಲ್ಲ. ವಿರೋಧ ಪಕ್ಷದ ಒತ್ತಡಕ್ಕೆ ತಕ್ಷಣ ಮಣಿದರೆ ಸಿಬ್ಬಂದಿ ಸ್ಥೈರ್ಯ ಕುಗ್ಗಿ ಕಾನೂನು ಜಾರಿ ದುರ್ಬಲಗೊಳ್ಳುತ್ತದೆ. ಆದೇ ಪೊಲೀಸರ ಭಾಷೆ ಸಂಯಮದಿಂದ ಇರಬೇಕು, ಆಂತರಿಕ ತಿದ್ದುಪಡಿಗೆ ಅವಕಾಶ ಇರಬೇಕು. ಆಗಲೇ ಅಧಿಕಾರಿಗಳ ದರ್ಪಕ್ಕೂ ಬ್ರೇಕ್ ಹಾಕಬಹುದು, ಶಾಂತಿ ಸುವ್ಯವಸ್ಥೆಯನ್ನೂ ಕಾಪಾಡಬಹುದು .