ಬಿಗ್‌ಬಾಸ್ (Bigg Boss Kannada) ಮನೆ ಅತಿ ಹೆಚ್ಚು ಜನಪ್ರಿಯವಾಗಿರುವುದು ಮನೆಯಲ್ಲಿ ನಡೆಯುವ ಜಗಳಗಳಿಂದ. ಜಗಳುಗಳು ನಡೆಯಬೇಕೆಂಬ ಉದ್ದೇಶದಿಂದಲೇ ಬಿಗ್‌ಬಾಸ್ ಟಾಸ್ಕುಗಳನ್ನು ಡಿಸೈನ್ ಮಾಡಲಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಜಗಳಗಳು ನಡೆದಷ್ಟೂ ರೋಚಕತೆ ಹೆಚ್ಚುತ್ತದೆ ಜೊತೆಗೆ ಟಿಆರ್ಪಿ ಸಹ. ಇದೀಗ ಮತ್ತೊಂದು ಬಿಗ್‌ಬಾಸ್ ಸೀಸನ್ ಶುರುವಾಗಿ ವಾರವಾಗಿದೆ. ಪ್ರತಿ ಬಾರಿಗಿಂತಲೂ ಈ ಬಾರಿ ಹೆಚ್ಚು ಭಿನ್ನ ವ್ಯಕ್ತಿತ್ವದ ವಿಶೇಷವಾಗಿ ಅಗ್ರೆಸ್ಸಿವ್ ವ್ಯಕ್ತಿತ್ವದ ಜನಗಳನ್ನು ಬಿಗ್‌ಬಾಸ್ ಮನೆಯಲ್ಲಿ ಒಟ್ಟಿಗೆ ಸೇರಿಸಲಾಗಿದ್ದು, ಜಗಳಗಳಿಗೆ ವೇದಿಕೆ ಸಜ್ಜು ಮಾಡಲಾಗಿದೆ. ಅದಕ್ಕೆ ತಕ್ಕಂತೆ ಎರಡನೇ ವಾರದ ಮೊದಲಲ್ಲೇ ಭರ್ಜರಿ ಜಗಳವೇ ಬಿಗ್‌ಬಾಸ್ ಮನೆಯಲ್ಲಿ ನಡೆದಿದ್ದು ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಒಬ್ಬ ಸ್ಪರ್ಧಿಯಂತೂ ವಿಲನ್ನುಗಳ ರೀತಿಯಲ್ಲಿ ‘ನಿನ್ನನ್ನು ಕುಕ್ಕಿ ಬಿಡುತ್ತೇನೆ, ಲಟ-ಲಟ ಎಂದು ಮುರಿದು ಹಾಕಿಬಿಡ್ತೀನಿ’ ಎಂದು ನೇರವಾಗಿ ಬೆದರಿಕೆ ಹಾಕಿದ್ದಾನೆ. ಆ ವಿಡಿಯೋ ಅನ್ನು ಕಲರ್ಸ್ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಕಲರ್ಸ್, ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಟಾಸ್ಕ್ನ ಪ್ರಕಾರ, ಸ್ಪರ್ಧಿಗಳು ತಮ್ಮ ಬಳಿ ಇರುವ ವಸ್ತುಗಳನ್ನು ಎದುರಾಳಿ ಗುಂಪು ತೆಗೆದುಕೊಳ್ಳತಂದೆ ತಡೆಯಬೇಕು. ಅಂದರೆ ಎದುರಾಳಿ ಗುಂಪು ವಸ್ತುಗಳನ್ನು ಪಡೆದುಕೊಳ್ಳಬೇಕೆಂದರೆ ವಸ್ತುಗಳನ್ನು ಹೊಂದಿರುವ ಸ್ಪರ್ಧಿಗಳ ಜೊತೆಗೆ ನೇರಾ-ನೇರಾ ಜಗಳಕ್ಕೆ ಇಳಿಯಬೇಕು. ಮತ್ತು ತಮ್ಮ ಬಳಿ ಇರುವ ವಸ್ತುಗಳನ್ನು ಉಳಿಸಿಕೊಳ್ಳಬೇಕೆಂದರೆ ಕದಿಯಲು ಬಂದವರ ಬಳಿ ಜಗಳ ಮಾಡಲೇ ಬೇಕು. ಸ್ಪರ್ಧೆಯಲ್ಲೂ ಹಾಗೆಯೇ ಆಗಿದ್ದು, ಸಾಮಾನ್ಯರ ಕೋಟಾದಿಂದ ಒಳಗೆ ಹೋಗಿರುವ ಧನುಶ್ ಮತ್ತು ‘ಮಹಾ ಕವಿ’ ಮಂಜು ಸಹ ಸ್ಪರ್ಧಿಗಳ ಬಳಿ ಇರುವ ವಸ್ತುಗಳನ್ನು ಬಲವಂತವಾಗಿ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಆಗ ಸಹಜವಾಗಿಯೇ ಜಗಳ ನಡೆದಿದೆ.
ಸೂಪರ್ ಸಂಡೆ ವಿತ್ ಬಾದ್‌ಷಾ ಸುದೀಪ್; ಪ್ರೋಮೋದಲ್ಲಿಯೇ ಸಖತ್ ನಗು ತರಿಸಿದ ಕಿರಣ್ ಶಾಸ್ತ್ರಿ
ಧನುಶ್ ಮತ್ತು ಮಂಜ ಇಬ್ಬರೂ ಸೌಂದರ್ಯಾ ಶೆಟ್ಟಿ ಬಳಿ ಇರುವ ವಸ್ತುಗಳನ್ನು ಬಲವಂತದಿಂದ ಕಿತ್ತುಕೊಳ್ಳಲು ಯತ್ನಿಸಿದರು. ಈ ವೇಳೆ ತನ್ನ ವಸ್ತುಗಳನ್ನು ಉಳಿಸಿಕೊಳ್ಳಲು ಸೌಂದರ್ಯಾ ಪ್ರಯತ್ನ ಮಟ್ಟರು. ಆದರೆ ಧನುಶ್ ಮತ್ತು ಮಂಜು ತಮ್ಮ ಬಲಪ್ರಯೋಗಿಸಿ ಬಲವಂತವಾಗಿ ವಸ್ತುಗಳನ್ನು ಕಿತ್ತುಕೊಂಡರು. ಆಗ ಸೌಂದರ್ಯ, ತಾನೂ ಬಲ ಪ್ರಯೋಗಿಸಿ ಮಂಜನ ಬೆನ್ನಿಗೆ ಕೆಲವು ಏಟು ಹೊಡೆದರು.
bigg boss Kannada: ಮಂಜ ಹೇಳಿದ್ದೇನು?
ಇದರಿಂದ ತೀವ್ರವಾಗಿ ಸಿಟ್ಟಾದ ಮಂಜ, ‘ತೆಗೆದು ಕುಕ್ಕಾಕೋಣ ಅನ್ನಿಸ್ತಿದೆ. ಎತ್ತಿ ನೆಲಕ್ಕೆ ಕುಕ್ಕಿಬಿಡ್ತೀನಿ, ಲಟ-ಲಟ-ಲಟ ಎಂದು ಮುರಿದು ಬಿಡ್ತೀನಿ, ಮುಖ ಜಜ್ಜಿ ಹಾಕಿಬಿಡ್ತೀನಿ’ ಎಂದು ರೌಡಿಯಂತೆ ಬೆದರಿಕೆ ಹಾಕಿದರು. ಸೌಂದರ್ಯಾ ಮುಂದೆ ಹೋಗಿ ನಿಂತು ವಿಲನ್ ರೀತಿ ಅಬ್ಬರಿಸಿದ. ಆದರೆ ಸೌಂದರ್ಯಾ ಇದಕ್ಕೆಲ್ಲ ಕೇರ್ ಮಾಡದೆ ಗಟ್ಟಿಯಾಗಿ ನಿಂತಿದ್ದರು. ಇದೀಗ ಈ ಪ್ರೋಮೊ ವಿಡಿಯೋ ಅನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ. ಪೂರ್ಣ ಎಪಿಸೋಡ್ ಪ್ರಸಾರ ಆದ ಬಳಿಕ ಇನ್ನಷ್ಟು ವಿಷಯಗಳು ಸ್ಪಷ್ಟ ಆಗಲಿವೆ.




