Photo Credits: @actor_jaggesh (Instagram)
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ 1980ರ ದಶಕದ AI ಫೋಟೋ ಟ್ರೆಂಡ್ ಭಾರಿ ಸದ್ದು ಮಾಡುತ್ತಿದೆ. ಪ್ರತಿಯೊಬ್ಬರೂ ತಮ್ಮ ಫೋಟೋಗಳನ್ನು AI ತಂತ್ರಜ್ಞಾನದ ಮೂಲಕ 80ರ ದಶಕದ ಶೈಲಿಗೆ ಬದಲಾಯಿಸಿ ಶೇರ್ ಮಾಡುತ್ತಿದ್ದಾರೆ.
ಈ ಡಿಜಿಟಲ್ ಟ್ರೆಂಡ್ ನಡುವೆ ನವರಸ ನಾಯಕ ಜಗ್ಗೇಶ್ ಅವರು ತಮ್ಮದೇ ಆದ ರಿಯಲ್ ಹಾಗೂ ಒರಿಜಿನಲ್ ಉತ್ತರದ ಮೂಲಕ ಆಗಮಿಸಿದ್ದಾರೆ. ಹದಿಹರೆಯದ ತಮ್ಮ 1980ರ ದಶಕದ ನೈಜ ಕಪ್ಪು-ಬಿಳುಪು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಸಾರ್ ನೀವು ನಿಜವಾದ 1980ರ ಕಾಲವನ್ನು ಕಂಡವರು. ದಯವಿಟ್ಟು AI ಬಳಸದೆ ಒರಿಜಿನಲ್ ಚಿತ್ರಗಳನ್ನು ಹಾಕಿ” ಎಂದು ಅಭಿಮಾನಿಗಳು ಪ್ರೀತಿಯಿಂದ ವಿನಂತಿಸಿದ್ದರು. ಹೀಗಾಗಿ ಜಗ್ಗೇಶ್ ತಮ್ಮ ಅಪರೂಪದ ರಿಯಲ್ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ನಾನು ಬೆಂಕಿಯಲ್ಲಿ ಅರಳಿದ ಹೂವು’: ಪ್ರತಿಯೊಂದು ಸಾಲಿನಲ್ಲಿಯೂ ಮೋಟಿವೇಷನ್ ನೀಡಿದ ಜಗ್ಗೇಶ್
ತಮ್ಮ ಹಳೆಯ ಕಪ್ಪು-ಬಿಳುಪು ಫೋಟೋಗಳನ್ನು ಶೇರ್ ಮಾಡಿರುವ ಜಗ್ಗೇಶ್, ಅದಕ್ಕೆ ಅರ್ಥಪೂರ್ಣ ಹಾಗೂ ಸ್ಪೂರ್ತಿದಾಯಕವಾದ ಬರಹವೊಂದನ್ನು ಬರೆದುಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಸಂದೇಶ ನೀಡಿದ್ದಾರೆ.
“ನಾನು ಬೆಂಕಿಯಲ್ಲಿ ಅರಳಿದ ಹೂವು. ಒಂದಲ್ಲಾ ಒಂದು ದಿನ ಆಗುತೀನಿ, ನಾನು ನಾಡೆಲ್ಲಾ ಪ್ರೀತಿಮಾಡೋ ಹಮ್ಮೀರ. ನೀವು ಜಗ ಗೆದ್ದು ಮುಂದೆ ನಿಮ್ಮ ಚಿತ್ರಗಳನ್ನು ಹಂಚಿಕೊಳ್ಳುವ ಶಪಥವನ್ನು ಇಂದೇ ಮಾಡಿ” ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಈ ಫೋಟೋಗಳಲ್ಲಿ ಜಗ್ಗೇಶ್ ಸಖತ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ. ಕಿವಿ ಮೇಲೆ ಬರುವ ಹೇರ್ ಸ್ಟೈಲ್, ಬೈಕ್ ಹ್ಯಾಂಡಲ್ ಮೇಲೆ ಕುಳಿತ ಸ್ಟೈಲಿಶ್ ಭಂಗಿ ಹಾಗೂ ಕೆರೆಯ ದಡದ ಬಂಡೆಯ ಮೇಲಿನ ಶರ್ಟ್ಲೆಸ್ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.
ಜೂನಿಯರ್ ರಜನಿಕಾಂತ್ ಎಂದ ಅಭಿಮಾನಿಗಳು: ಕಾಮೆಂಟ್ ಬಾಕ್ಸ್ನಲ್ಲಿ ಪ್ರಶಂಸೆಯ ಮಳೆ
ಜಗ್ಗೇಶ್ ಅವರ ಈ ಅಪರೂಪದ ಫೋಟೋಗಳನ್ನು ನೋಡಿ ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳು ರೋಮಾಂಚನಗೊಂಡಿದ್ದಾರೆ. ಕಾಮೆಂಟ್ ಬಾಕ್ಸ್ನಲ್ಲಿ ಹಾರ್ಟ್ ಇಮೋಜಿಗಳ ಜೊತೆಗೆ ತರಹೇವಾರಿ ಕಾಮೆಂಟ್ಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಅಭಿಮಾನಿಗಳು ಜಗ್ಗೇಶ್ ಅವರ ಆ ಕಾಲದ ಲುಕ್ ನೋಡಿ “ಜೂನಿಯರ್ ರಜನಿಕಾಂತ್ ತರ ಕಾಣಿಸ್ತಾ ಇದ್ದೀರಾ” ಎಂದು ಬಣ್ಣಿಸಿದ್ದಾರೆ. ಇನ್ನು ಕೆಲವರು “ಹಳೇ ಹುಲಿ”, “ಓಲ್ಡ್ ಈಸ್ ಗೋಲ್ಡ್ ಜಗಣ್ಣ” ಹಾಗೂ “ಇದು ನಿಜವಾದ 80s ಫೋಟೋ” ಎಂದು ಪ್ರಶಂಸಿಸಿದ್ದಾರೆ.
ಒಟ್ಟಾರೆಯಾಗಿ, ಕೃತಕ ಬುದ್ಧಿಮತ್ತೆಯ (AI) ಈ ಕಾಲದಲ್ಲಿ ನಟ ಜಗ್ಗೇಶ್ ಶೇರ್ ಮಾಡಿರುವ ಒರಿಜಿನಲ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸಖತ್ ವೈರಲ್ ಆಗುತ್ತಿವೆ.
‘ನಾನು ಬೆಂಕಿಯಲ್ಲಿ ಅರಳಿದ ಹೂವು’: 80ರ ದಶಕದ AI ಟ್ರೆಂಡ್ಗೆ ಒರಿಜಿನಲ್ ಫೋಟೋ ಹಂಚಿಕೊಂಡ ಜಗ್ಗೇಶ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ 80ರ AI ಫೋಟೋ ಟ್ರೆಂಡ್ಗೆ ನಟ ಜಗ್ಗೇಶ್ ತಮ್ಮ 1980ರ ದಶಕದ ಒರಿಜಿನಲ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ರಿಯಲ್ ಉತ್ತರ ನೀಡಿದ್ದಾರೆ.
ಅಭಿಮಾನಿಗಳ ಪ್ರೀತಿಯ ಕೋರಿಕೆಯಂತೆ ತಮ್ಮ ಹದಿಹರೆಯದ ಕಪ್ಪು-ಬಿಳುಪು ಚಿತ್ರಗಳನ್ನು ಹಂಚಿಕೊಂಡಿರುವ ಅವರು, ಅಭಿಮಾನಿಗಳಿಗೆ ಸಾಧನೆಯ ಶಪಥ ಮಾಡುವಂತೆ ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ.




