
ಚಿತ್ರದುರ್ಗದ ಭೌಗೋಳಿಕ ಪರಿಸ್ಥಿತಿ ಮತ್ತು ಕಡಿಮೆ ಮಳೆಯ ಕಾರಣ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶವು ಬಯಲು ಪ್ರದೇಶವಾಗಿದ್ದು ಇಲ್ಲಿನ ಕೃಷಿಕರು ನೀರಿನ ಕೊರತೆಯನ್ನು ಎದುರಿಸುತ್ತಾರೆ. ಕೃಷಿಯು ಇಲ್ಲಿನ ಜನರ ಪ್ರಮುಖ ಜೀವನಾಧಾರವಾಗಿದೆ. ಇಲ್ಲಿನ ಹೆಚ್ಚಿನ ರೈತರು ಕಡಲೆಕಾಯಿ, ಮೆಕ್ಕೆಜೋಳ, ರಾಗಿ ಮತ್ತು ಇತರ ಮಳೆಯಾಶ್ರಿತ ಬೆಳಗಳಿಗೆ ಮಾತ್ರ ಅವಲಂಬಿತರಾಗಿದ್ದರು.
ನೀರಿನ ಕೊರತೆಯ ನಡುವೆಯೂ ರೈತರು ಕಷ್ಟಪಟ್ಟು 1000 ಅಡಿಯಿಂದ 1500 ಅಡಿ ಆಳದವರೆಗೆ ಬೋರ್ ವೆಲ್ ಮಾಡಿದರೂ ನೀರು ಸಿಗುವುದು ದುಸ್ತರವಾಗಿತ್ತು. ಆದರೂ ಅನಿವಾರ್ಯವಾಗಿ ಜೀವನ ನಿರ್ವಹಣೆಗೆ ಕೃಷಿ ಅಗತ್ಯವಾಗಿ ಮಾಡುವಂತಾಗಿದೆ. ಈ ಕಾರಣಗಳಿಂದಾಗೆ ಬಹು ರೈತರ ಕೃಷಿ ಬದುಕು ಆರ್ಥಿಕವಾಗಿ ಕಂಟುತ್ತಾ ಸಾಗುತ್ತಿದೆ.
ಇಂತಹ ಬರಪೀಡಿತ ಪ್ರದೇಶದ ರೈತರ ಸಮಸ್ಯೆ ನಿವಾರಣೆಗೆ ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಇಂದು ಫಲಶೃತಿ ನೀಡಿದ್ದು ಬರ ಪ್ರದೇಶ ಎಂಬ ಕಳಂಕ ಹೊತ್ತಿದ್ದ ಚಿತ್ರದುರ್ಗಡೆಗೆ ನೀರು ಹರಿಯುವುದರೊಂದಿಗೆ ಕಳಂಕದಿಂದ ಮುಕ್ತಿ ಹೊಂದಿದಂತಾಗಿದೆ. ಬಯಲು ಸೀಮೆಯ ಬರದ ನಾಡಿನ ರೈತರ ಕೃಷಿ ಬದುಕಿಗೆ ವರದಾನವಾದ ಭದ್ರಾ ನದಿ ನೀರು ಈಗ ರೈತರಲ್ಲಿ ಸಂತಸ ತಂದಿದೆ. ಇದರೊಂದಿಗೆ ದಶಕಗಳ ಕನಸು ನನಸಾದಂತಾಗಿದೆ. ಚಿತ್ರದುರ್ಗಕ್ಕೆ ಶಾಖಾ ಕಾಲುವೆ ಮೂಲಕ ಪ್ರಾಯೋಗಿಕವಾಗಿ ನೀರು ಹರಿಸಿದ್ದು, ಇದರಿಂದ ಬರದ ನಾಡಿನ ರೈತರ ಬದುಕಿಗೆ ಜೀವ ತುಂಬಿದಂತಾಗಿದೆ.
ಇದನ್ನೂ ಓದಿ: ಈ ಪವಿತ್ರ ತೆಂಗನಕಾಯಿ ₹8 ಲಕ್ಷಕ್ಕೆ ಹರಾಜು; ಏನಿದರ ವಿಶೇಷತೆ ಗೊತ್ತೇ?
ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿ ಅಣೆಕಟ್ಟು ಬಳಿ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದು, ಇದರೊಂದಿಗೆ ದಶಕಗಳ ರೈತರ ಕನಸು ನನಸಾದಂತಾಗಿದೆ. ನಾಲ್ಕು ಜಿಲ್ಲೆಗಳ 12 ತಾಲೂಕುಗಳ ಕೃಷಿಕರ ಬದುಕಿಗೆ ಈ ಯೋಜನೆಯಿಂದ ಜೀವ ತುಂಬಿದಂತಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ 29.9 ಟಿಎಂಸಿ ನೀರು ಹಂಚಿಕೆಯಾಗಿದ್ದು ಇದರೊಂದಿಗೆ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಈಗ ಹರಿಸಿದ್ದು, ಅನ್ನದಾತರ ಬಹುದಿನದ ಕನಸು ನನಸಾದಂತಾಗಿದೆ. ಬರದ ನಾಡು ಎಂಬ ಕಳಂಕ ಹೊತ್ತಿದ್ದ ಜಿಲ್ಲೆ ಈಗ ಬಹುದಿನಗಳ ರೈತರ ಬೇಡಿಕೆ ಕೋಟೆ ನಾಡಿಗೆ ನೀರು ಹರಿಯುವ ಮೂಲಕ ಜೀವಕಳೆ ಬಂದಿದೆ. ಹಲವು ಕಡೆ ಸ್ಥಳೀಯ ರೈತರು ಭದ್ರಾ ನದಿ ನೀರಿಗೆ ಪುಷ್ಪಗಳನ್ನು ಅರ್ಪಿಸಿ, ಮಹಿಳೆಯರು ಬಾಗಿನ ಅರ್ಪಿಸುವುದರ ಮೂಲಕ ಸ್ವಾಗತಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯು ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸುವ ಮಹತ್ವದ ನೀರಾವರಿ ಯೋಜನೆಯಾಗಿದ್ದು ಇದರಿಂದ ಕೃಷಿಗೆ ನೀರಾವರಿ ಸೌಲಭ್ಯ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತದೆ, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಸುಧಾರಿಸಲು ಸಹಾಯವಾಗುತ್ತದೆ, ಬರನಾಡಿನ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದ್ದು ಇದರೊಂದಿಗೆ ಪರಿಹಾರ ದೊರೆತಂತಾಗಿದೆ, ರೈತರ ಆದಾಯ ಹೆಚ್ಚಾಗಿ ಗ್ರಾಮೀಣ ಬದುಕಿನ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ.




