DK SHIVAKUMAR: ಸಿಎಂ ಡಿಕೆಗೆ ಶತದಿನೋತ್ಸವದ ಸಂಭ್ರಮ – ‘ದೃಢ ಕರ್ನಾಟಕ’ ಸಂಕಲ್ಪದೊಂದಿಗೆ ಹೊಸ ಮೈಲಿಗಲ್ಲು

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ಯಶಸ್ವಿಯಾಗಿ ನೂರು ದಿನಗಳ ಆಡಳಿತ ಅವಧಿಯನ್ನು ಪೂರ್ಣಗೊಳಿಸಿದ್ದು, ಈ ವಿಶೇಷ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು “ಧೃಡ ಕರ್ನಾಟಕದ ಸಂಕಲ್ಪ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಈ ಬೃಹತ್ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವತಃ ಸಿಎಂ ಡಿ. ಕೆ. ಶಿವಕುಮಾರ್ ಅವರೇ ವಹಿಸಲಿದ್ದಾರೆ. ಸರ್ಕಾರದ ಆರಂಭಿಕ ನೂರು ದಿನಗಳ ಸಾಧನೆ, ಜಾರಿಗೆ ತಂದ ಪ್ರಮುಖ ಜನಪರ ಯೋಜನೆಗಳು ಮತ್ತು ಭವಿಷ್ಯದ ಅಭಿವೃದ್ಧಿ ದೂರದೃಷ್ಟಿಯನ್ನು ಜನರಿಗೆ ತಲುಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಈ ಸಂಭ್ರಮಾಚರಣೆಯ ಅಂಗವಾಗಿ ವಿಧಾನಸೌಧ ಸೇರಿದಂತೆ ನಗರದ ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ವರ್ಣರಂಜಿತ ದೀಪಾಲಂಕಾರ ಮಾಡಲಾಗಿದ್ದು, ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳು ಹಾಗೂ ಸಾಧನೆಗಳನ್ನು ಬಿಂಬಿಸುವ 3D ಮ್ಯಾಪಿಂಗ್, ಎಲ್‌ಇಡಿ ಹಾಗೂ ಧ್ವನಿ-ಬೆಳಕಿನ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಈ ಶತದಿನದ ಉತ್ಸವಕ್ಕೆ ರಾಜ್ಯದಾದ್ಯಂತ ವಿವಿಧ ಯೋಜನೆಗಳ ಲಾಭ ಪಡೆದ ಸಾಮಾನ್ಯ ಫಲಾನುಭವಿಗಳನ್ನೇ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಗೌರವಿಸುತ್ತಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ.

ಇದೇ ಸಂದರ್ಭದಲ್ಲಿ ರೈತರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸ ಯೋಜನೆಗಳು ಹಾಗೂ ಸಚಿವ ಸಂಪುಟದ ಪ್ರಮುಖ ನಿರ್ಧಾರಗಳನ್ನು ರಾಜ್ಯದ ಜನತೆಗೆ ಸಮರ್ಪಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಯಾವುದೇ ಸರ್ಕಾರಕ್ಕೆ ನೂರು ದಿನಗಳ ಆಡಳಿತ ಎಂಬುದು ಪ್ರಮುಖ ಪರೀಕ್ಷಾ ಘಟ್ಟವಾಗಿರುತ್ತದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ತೋರಿಸುವ ಆಡಳಿತಾತ್ಮಕ ವೇಗ ಮತ್ತು ಆದ್ಯತೆಗಳನ್ನು ಈ ಅವಧಿ ಸ್ಪಷ್ಟಪಡಿಸುತ್ತದೆ. ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಮತ್ತು ತಳಮಟ್ಟದ ಜನರಿಗೆ ತಲುಪಿಸುವಲ್ಲಿ ಆಡಳಿತ ಯಂತ್ರ ಯಶಸ್ವಿಯಾಗಿದ್ದರೂ, ಪ್ರಸ್ತುತ ಎದುರಾಗುತ್ತಿರುವ ರಾಜಕೀಯ ಸವಾಲುಗಳು, ವಿಪಕ್ಷಗಳ ಟೀಕೆಗಳು ಮತ್ತು ಆರ್ಥಿಕ ನಿರ್ವಹಣೆಯ ಸವಾಲುಗಳನ್ನು ಸರಿದೂಗಿಸಿಕೊಂಡು ಹೋಗುವುದು ಅತ್ಯಗತ್ಯ.

ಹೀಗಾಗಿ ಈ ವೇದಿಕೆ ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ನಗರಾಭಿವೃದ್ಧಿ ಮತ್ತು ಗ್ರಾಮೀಣ ಮೂಲಸೌಕರ್ಯಗಳಿಗೆ ವೇಗ ನೀಡುವುದು ಹಾಗೂ ಮುಂದಿನ ಐದು ವರ್ಷಗಳ ಸುಸ್ಥಿರ ಅಭಿವೃದ್ಧಿಗೆ ಸ್ಪಷ್ಟ ಹಾದಿ ನಿರ್ಮಿಸುವುದು ಸರ್ಕಾರದ ಮುಂದೆ ಇರುವ ಪ್ರಮುಖ ಸವಾಲಾಗಿದೆ.