VANDE MATHARAM : ಪೂರ್ಣ ವಂದೇ ಮಾತರಂಗೆ ಎದ್ದುನಿಂತು ಗೌರವ – ಕಾಂಗ್ರೆಸ್ ನಿಲುವಿಗೆ ಸೆಡ್ಡು ಹೊಡೆದ ಓಮರ್ ಅಬ್ದುಲ್ಲಾ

ಶ್ರೀನಗರದಲ್ಲಿ ಆಯೋಜಿಸಲಾಗಿದ್ದ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಅವರ ತಂದೆ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೇರಿದಂತೆ ಅವರ ಕುಟುಂಬದ ಪ್ರಮುಖ ಸದಸ್ಯರು ಭಾರತದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನ ಪೂರ್ಣ ಆವೃತ್ತಿಗೆ ಎದ್ದುನಿಂತು ಸಂಪೂರ್ಣ ಗೌರವ ಸಲ್ಲಿಸಿದ್ದಾರೆ. ಈ ಸಮಾರಂಭದಲ್ಲಿ ಸಾಂಪ್ರದಾಯಿಕವಾಗಿ ಆರಂಭಿಕ ಚರಣಗಳ ಜೊತೆಗೆ ಗೀತೆಯ ಸಂಪೂರ್ಣ ಆವೃತ್ತಿಯನ್ನು ಪ್ರಸಾರ ಮಾಡಲಾಗಿದ್ದು, ಮೂರು ನಿಮಿಷಕ್ಕೂ ಹೆಚ್ಚು ಕಾಲ ಅಬ್ದುಲ್ಲಾ ಕುಟುಂಬದ ಪ್ರಮುಖರು ಸಭಾಸದರೊಂದಿಗೆ ಪೂರ್ಣವಾಗಿ ಎದ್ದುನಿಂತು ಶಿಷ್ಟಾಚಾರವನ್ನು ಪಾಲಿಸಿದರು.

ಕೇಂದ್ರ ಸರ್ಕಾರದ ನೂತನ ಮಾರ್ಗದರ್ಶಿ ಪ್ರಕಾರ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡುವ ನಿಯಮವನ್ನು ಜಾರಿಗೆ ತರಲಾಗಿದೆ. ಆದಾಗ್ಯೂ, ವಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ಪ್ರಮುಖ ಪಾಲುದಾರ ಪಕ್ಷವಾದ ಕಾಂಗ್ರೆಸ್, 1937ರ ತನ್ನ ಐತಿಹಾಸಿಕ ನಿರ್ಣಯಕ್ಕೆ ಬದ್ಧವಾಗಿ ಗೀತೆಯ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳ್ಳಬೇಕು ಎಂಬ ನಿಲುವನ್ನು ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಅದೇ ಒಕ್ಕೂಟದ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕರು ಈ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಕಾಶ್ಮೀರ ಕಣಿವೆಯಲ್ಲಿ ನೂತನ ನಿಯಮಾವಳಿಗೆ ಅನುಗುಣವಾಗಿ ಪೂರ್ಣ ಗೀತೆಗೆ ಗೌರವ ಸೂಚಿಸಿರುವುದು ದೇಶಾದ್ಯಂತ ವ್ಯಾಪಕ ಗಮನ ಸೆಳೆದಿದೆ.

ಈ ಘಟನೆ ಭಾರತೀಯ ರಾಜಕೀಯದಲ್ಲಿ ಮತ್ತು ವಿಶೇಷವಾಗಿ ವಿಪಕ್ಷಗಳ ಮೈತ್ರಿಕೂಟದಲ್ಲಿರುವ ಆಂತರಿಕ ನಿಲುವುಗಳ ಭಿನ್ನತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಒಂದೆಡೆ ದೆಹಲಿಯ ರಾಜಕೀಯ ವಲಯದಲ್ಲಿ ವಂದೇ ಮಾತರಂ ಗೀತೆಯ ಎಷ್ಟು ಚರಣಗಳನ್ನು ಹಾಡಬೇಕು ಅಥವಾ ನುಡಿಸಬೇಕು ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಸಂಘರ್ಷ ನಡೆಯುತ್ತಿದ್ದರೆ, ಇನ್ನೊಂದೆಡೆ ಸತತ ಸೂಕ್ಷ್ಮ ಪ್ರದೇಶವೆನಿಸಿಕೊಂಡಿರುವ ಜಮ್ಮು-ಕಾಶ್ಮೀರದ ಆಡಳಿತಾರೂಢ ನಾಯಕರು ಯಾವುದೇ ಗೊಂದಲವಿಲ್ಲದೆ ಪೂರ್ಣ ಗೀತೆಗೆ ಗೌರವ ನೀಡಿರುವುದು ಮಹತ್ವದ ರಾಜಕೀಯ ಸಂದೇಶವಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕರ ಈ ನಡೆ, ರಾಷ್ಟ್ರೀಯ ಸಂಕೇತಗಳ ವಿಷಯದಲ್ಲಿ ಅನಗತ್ಯ ವಿವಾದಗಳನ್ನು ಸೃಷ್ಟಿಸುವ ಬದಲು, ಸಾರ್ವಜನಿಕ ವೇದಿಕೆಗಳಲ್ಲಿ ಸಂವಿಧಾನಾತ್ಮಕ ಹಾಗೂ ರಾಷ್ಟ್ರೀಯ ಶಿಷ್ಟಾಚಾರಗಳನ್ನು ಪಾಲಿಸುವುದು ಮುಖ್ಯ ಎಂಬುದನ್ನು ನಿರೂಪಿಸಿದೆ. ಪ್ರಾದೇಶಿಕ ನಾಯಕರು ಇಂತಹ ಸೂಕ್ಷ್ಮ ವಿಷಯಗಳಲ್ಲಿ ತೋರುವ ಪ್ರಬುದ್ಧತೆ ರಾಷ್ಟ್ರೀಯ ಐಕ್ಯತೆಗೆ ಸಾಕ್ಷಿಯಾಗುತ್ತದೆ.