@colorskannadaofficial (Instagram)
ಅಪಾರ ನಿರೀಕ್ಷೆಯಂತೆ ಬಿಗ್‌ಬಾಸ್ ಕನ್ನಡ ಸೀಸನ್ 13 ಅತ್ಯಂತ ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿದೆ. ನಿರೂಪಕ ಕಿಚ್ಚ ಸುದೀಪ್ ಅವರು ಈ ಬಾರಿಯ ವಿಶ್ವದ ಅದ್ಭುತಗಳ ಮಾದರಿಯ ಸುಂದರ ಮನೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿ ಶೋ ಆರಂಭಿಸಿದರು. ಈ ಹೊಸ ಸೀಸನ್‌ನ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೇಲ್ 3’ ಖ್ಯಾತಿಯ ಹಾಸ್ಯನಟ ಜಗದೀಶ್ ಎಂ. ಬಿ. (ಜಗ್ಗು ಮಮ್ಮಿ) ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರು.
ಒಂದೇ ಸಿನಿಮಾದಲ್ಲಿ ನಟಿಸಿ ಇಷ್ಟು ಬೇಗ ಬಿಗ್‌ಬಾಸ್‌ನಂತಹ ದೊಡ್ಡ ವೇದಿಕೆ ಏರಿದ ಜಗ್ಗು, ಆರಂಭದಲ್ಲೇ ನರ್ವಸ್ ಆಗಿದ್ದರು. ಆದರೆ ವೇದಿಕೆಗೆ ಬರುತ್ತಿದ್ದಂತೆ ಸುದೀಪ್ ಅವರು ಅವರಿಗೆ ದೊಡ್ಡ ಶಾಕ್ ನೀಡಿ ನಂತರ ಧೈರ್ಯ ತುಂಬಿದರು.
“ರೂಲ್ಸ್ ಬ್ರೇಕ್ ಮಾಡಿದ್ದೀರಿ”: ಜಗ್ಗುಗೆ ಭಯ ಹುಟ್ಟಿಸಿದ ಕಿಚ್ಚ
ವೇದಿಕೆಗೆ ಬಂದ ಜಗ್ಗು, “ನಮ್ಮೂರಿನ ಜನ ನಿಮ್ಮ ಅಭಿಮಾನಿಗಳು, ಅವರಿಗೆ ಒಮ್ಮೆ ಹಾಯ್ ಹೇಳಿ” ಎಂದು ಸುದೀಪ್ ಅವರಲ್ಲಿ ವಿನಂತಿಸಿಕೊಂಡರು. ತಕ್ಷಣವೇ ಗಂಭೀರವಾದ ಸುದೀಪ್, “ನೀವು ಬಿಗ್‌ಬಾಸ್ ನಿಯಮ ಮುರಿದಿದ್ದೀರಿ. ಇಲ್ಲಿಗೆ ಬರುವ ವಿಚಾರವನ್ನು ಯಾರಿಗೂ ಹೇಳಬಾರದಿತ್ತು. ಆದರೆ ನೀವು ಇಡೀ ಊರಿಗೇ ವಿಷಯ ತಿಳಿಸಿದ್ದೀರಿ, ಹಾಗಾಗಿ ನಿಮ್ಮನ್ನು ವಾಪಸ್ ಕಳುಹಿಸುತ್ತಿದ್ದೇವೆ” ಎಂದು ಬೆದರಿಸಿದರು.
ಇದರಿಂದ ತೀವ್ರ ಗಾಬರಿಗೊಂಡ ಜಗ್ಗು, ವೇದಿಕೆ ಮೇಲೆಯೇ ಶಾಕ್ ಆಗಿ ನಿಂತುಬಿಟ್ಟರು. ನಂತರ ಸುದೀಪ್ ಅವರು “ಆಡಿಯನ್ಸ್ ಒಪ್ಪಿದರೆ ಮಾತ್ರ ನಿಮ್ಮನ್ನು ಒಳಗೆ ಕಳಿಸುತ್ತೇನೆ” ಎಂದು ಹೇಳಿ, ಜಗ್ಗುಗೆ ತಿಳಿಯದಂತೆ ಜನರಿಗೆ ‘ಒಪ್ಪಬೇಡಿ’ ಎಂದು ಸೈನ್ ಮಾಡಿದರು. ಜಗ್ಗು ತಮ್ಮ ಗೆಳೆಯರು ಹಾಗೂ ಜನರ ಬಳಿ ಗೋಗರೆದರೂ ಎಲ್ಲರೂ ‘ಆಗಲ್ಲ’ ಎಂದಾಗ ಜಗ್ಗು ಸಂಪೂರ್ಣವಾಗಿ ಕಂಗಾಲಾದರು.
ವೇದಿಕೆಯಲ್ಲೇ ಕಣ್ಣೀರು ಹಾಕಿದ ‘ಜಗ್ಗು ಮಮ್ಮಿ’
ಪರಿಸ್ಥಿತಿ ತಿಳಿಗೊಳಿಸಿದ ಸುದೀಪ್ ಅವರು ಜಗ್ಗು ಅವರ ‘ವಿಟಿ’ ಪ್ರದರ್ಶಿಸಿದಾಗ ಅವರಿಗೆ ಜೀವ ಬಂದಂತಾಯಿತು. ತಮ್ಮ ಕಷ್ಟದ ದಿನಗಳನ್ನು ನೆನೆದ ಜಗ್ಗು, ತಾವು ಧರಿಸಿರುವ ಉಡುಪು ಕೂಡ ಗೆಳೆಯನದ್ದಾಗಿದ್ದು, ಮನೆಯಲ್ಲಿ 2.50 ಲಕ್ಷ ರೂಪಾಯಿ ಸಾಲವಿದೆ ಎಂದರು. ಊರಿನವರು ತಮ್ಮನ್ನು ‘ಹುಡುಗಿಯಂತೆ ಆಡುತ್ತಾನೆ’ ಎಂದು ಲೇವಡಿ ಮಾಡಿದ್ದನ್ನು ನೆನೆದು ಬೇಸರ ವ್ಯಕ್ತಪಡಿಸಿದರು.
“ನಾನೇ ವಿನ್ನರ್ ಎಂದು ಪರಿಚಯಿಸಿಕೊಳ್ಳಿ”: ಜಗ್ಗುಗೆ ಕಿಚ್ಚನ ಮಾಸ್ ಸಲಹೆ
ಜಗ್ಗು ಅವರ ಮುಗ್ಧತೆ ಹಾಗೂ ಕಷ್ಟಗಳನ್ನು ಕಂಡ ಸುದೀಪ್, ಅವರಿಗೆ ಆತ್ಮವಿಶ್ವಾಸ ತುಂಬಿದರು. “ನೀವು ದೊಡ್ಮನೆಗೆ ಹೋದಾಗ ಯಾರೇ ಸಿಕ್ಕರೂ ‘ನಾನು ಜಗ್ಗು, ಸೀಸನ್ 13ರ ವಿನ್ನರ್’ ಎಂದೇ ಪರಿಚಯಿಸಿಕೊಳ್ಳಿ” ಎಂದು ಸ್ಪೆಷಲ್ ಟಿಪ್ಸ್ ನೀಡಿದರು. ಅಲ್ಲದೆ ವೇದಿಕೆ ಮೇಲೆಯೇ ಅದಕ್ಕೆ ರಿಹರ್ಸಲ್ ಮಾಡಿಸಿ, ಪ್ರೀತಿಯಿಂದ ಬೋರ್ಡಿಂಗ್ ಪಾಸ್ ನೀಡಿ ದೊಡ್ಮನೆಯೊಳಗೆ ಕಳುಹಿಸಿಕೊಟ್ಟರು.




