ಕಿರುತೆರೆ ಕಿರಿಕ್:‌ ನಟಿಯ ದೌಲತ್ತಿಗೆ ನಿರ್ಮಾಪಕ ಹೈರಾಣು, ನಟ ಪರಾರಿ

ಕಿರುತೆರೆಯಲ್ಲಿ ಇತ್ತೀಚೆಗೆ ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ. ಮೊದಲನೆಯದಾಗಿ, ಗೋಕುಲದಂತೆ ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದ ಧಾರಾವಾಹಿಯೊಂದರಿಂದ ಪ್ರಮುಖ ನಟನೊಬ್ಬ ‘ನಾನಿನ್ನು ಇದರಲ್ಲಿ ನಟಿಸಲ್ಲ’ ಎಂದು ಹೊರಬಂದಿರುವುದು. ಎರಡನೆಯದು, ಪ್ರಮುಖ ವಾಹಿನಿಯ ಹೊಸ ಧಾರಾವಾಹಿಯೊಂದರಲ್ಲಿ ನಾಯಕ ನಟಿ ಮಾಡುತ್ತಿರುವ ಕಿರಿಕ್. ಈ ಎರಡೂ ಸಂಗತಿಗಳ ಒಳವಿಚಾರ ಕೆದಕಿದಾಗ ಗೊತ್ತಾಗಿದ್ದು ಇಷ್ಟು:

ಕನ್ನಡದ ಖ್ಯಾತ ಮನರಂಜನಾ ವಾಹಿನಿಯಲ್ಲಿ ಇನ್ನೇನು ಪ್ರಸಾರ ಆರಂಭಿಸಬೇಕಿದ್ದ ಹೊಸ ಧಾರಾವಾಹಿಯೊಂದು, ತನ್ನ ನಾಯಕಿಯ ಕಾರಣಕ್ಕೆ ಸುದ್ದಿಯಲ್ಲಿದೆ. ನಾಯಕಿಯ ದುರಹಂಕಾರದ ವರ್ತನೆ ಇಡೀ ಧಾರಾವಾಹಿ ತಂಡಕ್ಕೆ ಮತ್ತು ವಾಹಿನಿಯ ಕೆಲಸಗಾರರಿಗೆ ಸಂಕಟ ತಂದಿಟ್ಟಿದೆ. ಮನರಂಜನಾ ವಾಹಿನಿಗಳಲ್ಲಿ ಮೊದಲ ಸ್ಥಾನದಲ್ಲಿರುವ ಈ ವಾಹಿನಿಯಲ್ಲಿ, ಕಳೆದ ಕೆಲವು ತಿಂಗಳಿನಿಂದ ಈ ಧಾರಾವಾಹಿಯ ಪ್ರೊಮೋ ಪ್ರಸಾರ ಮಾಡಲಾಗುತ್ತಿತ್ತು. ಈ ಪ್ರೊಮೋದಲ್ಲಿ ನಾಯಕಿ ಭರ್ಜರಿ ಫೈಟಿಂಗ್‌ ಮಾಡುವ ಮೂಲಕ ಯಾವ ಪರಿ ದೂಳೆಬ್ಬಿಸಿದ್ದರು ಎಂದರೆ, ಅದನ್ನು ನೋಡಿದ ಧಾರಾವಾಹಿಯ ನಾಯಕ “ನನಗೆ ಈ ಧಾರಾವಾಹಿಯಲ್ಲಿ ಪ್ರಾಮುಖ್ಯತೆ ಇಲ್ಲ” ಎಂದು ಮುನಿಸಿಕೊಂಡು ದೂರದ ದುಬೈಗೆ ಹೋಗಿದ್ದಾರಂತೆ!

ಧಾರಾವಾಹಿಯ ಪ್ರೊಮೋ ಏನೋ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು; ಆದರೆ ಎರಡು ತಿಂಗಳು ಕಳೆದರೂ ಧಾರಾವಾಹಿ ಮಾತ್ರ ತೆರೆಯ ಮೇಲೆ ಬರಲೇ ಇಲ್ಲ. ವಾಹಿನಿಯವರು ಕೂಡ ದೂಳೆಬ್ಬಿಸಿದ ಆ ಫೈಟ್‌ ಪ್ರೊಮೋವನ್ನು ನಿಧಾನವಾಗಿ ಕಡಿಮೆ ಮಾಡಿ, ನಂತರ ಪ್ರಸಾರವನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಅಸಲಿಗೆ ಈ ನಾಯಕಿ ಶೂಟಿಂಗ್‌ ಸೆಟ್‌ನಲ್ಲಿ ಕಿರಿಕ್‌ ಶುರು ಮಾಡಿದ್ದಾರಂತೆ.

ಯಾವ ವಿಚಾರಕ್ಕೆ ಕಿರಿಕ್‌ ಎಂದು ವಿಚಾರಿಸಿದಾಗ, ನಿಜಕ್ಕೂ ಆಶ್ಚರ್ಯವೆನಿಸುವ ಸಂಗತಿಯೊಂದು ಗೊತ್ತಾಗಿದೆ. “ನನಗೆ ಶೂಟಿಂಗ್‌ ಸೆಟ್‌ನಲ್ಲಿ ಮರ್ಯಾದೆ ಸಿಗುತ್ತಿಲ್ಲ; ನಿರ್ದೇಶಕ, ನಿರ್ಮಾಪಕ ಹಾಗೂ ವಾಹಿನಿಯವರು ನನ್ನನ್ನು ‘ಮೇಡಂ’ ಎಂದೇ ಕರೆಯಬೇಕು. ನನಗೆ ಎಲ್ಲರ ಎದುರು ಕರೆಕ್ಷನ್‌ ಹೇಳಬಾರದು, ನನ್ನನ್ನು ರಶ್ಮಿಕಾ ಮಂದಣ್ಣ ರೇಂಜ್‌ಗೆ ಟ್ರೀಟ್‌ ಮಾಡಬೇಕು” ಇತ್ಯಾದಿ ಬೇಡಿಕೆಗಳಂತೆ! ನಟಿಯ ಈ ಅಹಂಕಾರದ ವರ್ತನೆ ಎಲ್ಲಿಗೆ ಹೋಗಿ ಮುಟ್ಟಿದೆ ಎಂದರೆ, ಕೊನೆಗೆ ಚಾನಲ್‌ನವರೇ ಈಕೆಯನ್ನು ಕಚೇರಿಗೆ ಕರೆಸಿ ಸಂಧಾನ ಮಾಡಿ ಕಳಿಸಿದ್ದಾರಂತೆ. ಆದರೂ ಕೂಡ ಸೆಟ್‌ನಲ್ಲಿ ಈಕೆಯ ಕಿರಿಕಿರಿ ಕಡಿಮೆಯಾಗಿಲ್ಲ.

‘ಭಾರಿ’ ಇತಿಹಾಸ ಇರುವ ಈ ನಟಿ, ‘ಬಿಗ್​​ಬಾಸ್’ ಪ್ರಯಾಣವನ್ನೆಲ್ಲ ಮುಗಿಸಿಕೊಂಡು ಬಂದಿದ್ದು, ಈಗ ಈಕೆಯ ವರ್ತನೆ ಸ್ಟಾರ್​ ನಟಿಯರನ್ನೂ ಮೀರಿಸುವಂತಿದೆಯಂತೆ. ಈಕೆಯ ಕಿರಿಕ್‌ನ ಜೊತೆಗೆ, ಧಾರಾವಾಹಿಯ ನಾಯಕ ನಟ ಕೂಡ “ನನಗೆ ಈ ಧಾರಾವಾಹಿಯಲ್ಲಿ ಜಾಸ್ತಿ ಸ್ಕೋಪ್‌ ಇಲ್ಲ, ನಾನು ಜೂನಿಯರ್‌ ಆರ್ಟಿಸ್ಟ್‌ ತರ ಆಗಿದ್ದೀನಿ” ಎಂದು ಡೇಟ್ಸ್ ಕೊಡದೇ ದುಬೈನಲ್ಲಿ ಸೆಟ್ಲ್‌ ಆಗಿ ಕಾಟ ಕೊಡುತ್ತಿರುವ ಸುದ್ದಿಯೂ ಕೇಳಿಬರುತ್ತಿದೆ. ಪಾಪ, ಆ ನಿರ್ಮಾಪಕರನ್ನು ತಾಯಿ ಜಗದ್ಧಾತ್ರಿಯೇ ಕಾಪಾಡಬೇಕು!

ಉಳಿದಂತೆ, ಕನ್ನಡದಲ್ಲಿ ಚೆನ್ನಾಗಿ ಮೂಡಿಬರುತ್ತಿದ್ದ, ‘ಗೋಕುಲ’ದಂತಿದ್ದ ಮತ್ತೊಂದು ಧಾರಾವಾಹಿಯಿಂದ ನಟನೊಬ್ಬ ಹೊರಬಂದು ಮಾಧ್ಯಮಗಳಲ್ಲಿ ತನ್ನದೇ ಕಥೆ ಹೇಳಿಕೊಳ್ಳುತ್ತಿದ್ದಾರೆ. “ಮತ್ತೆ ವಾಪಸ್ ಹೋಗಿ ನಟಿಸಲಾ ಎಂದು ಅನಿಸುತ್ತಿದೆ” ಅಂತೆಲ್ಲಾ ಸ್ಟೇಟ್‌ಮೆಂಟ್ ಕೊಡುತ್ತಿದ್ದಾರೆ. ಆದರೆ, “ಅವನು ವಾಪಸ್ ಬಂದರೂ ನಾವೇ ಸೇರಿಸಲ್ಲ” ಎನ್ನುತ್ತಿದೆ ಧಾರಾವಾಹಿ ತಂಡ. ನಿರ್ದೇಶಕ ಹಾಗೂ ಸಹ-ನಿರ್ಮಾಪಕ ಶ್ರವಂತ್‌ ಮತ್ತು ಚಾನಲ್‌ನವರಿಗೆ ಈ ನಟ ಅದ್ಯಾವ ಪರಿ ಕಾಟ ಕೊಟ್ಟಿದ್ದಾನೆ ಎಂದರೆ, ಮುಂದಿನ ದಿನಗಳಲ್ಲಿ ಇವನನ್ನು ವಾಹಿನಿಯ ಯಾವುದೇ ಕಾರ್ಯಕ್ರಮ ಅಥವಾ ಧಾರಾವಾಹಿಗೆ ಸೇರಿಸಬಾರದು ಹಾಗೂ ಈತ ನಟಿಸಿದ ಸಿನಿಮಾಗಳನ್ನು ವಾಹಿನಿ ಖರೀದಿಸಬಾರದು ಎಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಾರಂತೆ.

ಒಂದು ಕಡೆ ಸಿನಿಮಾ ಲೋಕ ಕುಂಟುತ್ತಾ ಸಾಗುತ್ತಿದ್ದರೆ, ಇದ್ದುದರಲ್ಲಿ ಕಿರುತೆರೆ ಸ್ವಲ್ಪ ಮಟ್ಟಿಗೆ ಉಸಿರಾಡುತ್ತಿದೆ. ಅದರಲ್ಲಿ ಬರುವ ಹೆಸರು, ಹಣದಿಂದ ನಿಜಕ್ಕೂ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು. ತುಂಬಾ ಜನ ಅದನ್ನೇ ಮಾಡುತ್ತಿದ್ದಾರೆ ಕೂಡ. ಆದರೆ, ಈ ತರಹ ಅರ್ಧ ರಾತ್ರಿ ಕೊಡೆ ಹಿಡಿದು ನಿಲ್ಲುವ ನಟ–ನಟಿಯರಿಗೆ ಯಾರು ಬುದ್ಧಿ ಹೇಳುತ್ತಾರೋ