DK SHIVAKUMAR: ಮುಖ್ಯಮಂತ್ರಿ ಡಿಕೆಶಿ ಆರೋಗ್ಯ ಏರುಪೇರು: ತುರ್ತು ವೈದ್ಯಕೀಯ ತಪಾಸಣೆ

ಬೆಂಗಳೂರಿನ ವಿಧಾನಸೌಧದಲ್ಲಿ ಅಧಿಕೃತ ಕಲಾಪ ಹಾಗೂ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಆರೋಗ್ಯದಲ್ಲಿ ಏಕಾಏಕಿ ವ್ಯತ್ಯಾಸ ಕಂಡುಬಂತು. ನಿರಂತರ ಸಭೆಗಳು, ಶಾಸಕರ ಹಾಗೂ ಸಾರ್ವಜನಿಕರ ಭೇಟಿ ಸೇರಿದಂತೆ ಅತಿಯಾದ ಕೆಲಸದ ಒತ್ತಡ ಮತ್ತು ಆಯಾಸದಿಂದಾಗಿ ಅವರ ರಕ್ತದೊತ್ತಡದಲ್ಲಿ (ಬಿಪಿ) ಹಠಾತ್ ವೈಪರೀತ್ಯ ಉಂಟಾಯಿತು ಎಂದು ವರದಿಯಾಗಿದೆ.

ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣವೇ ಜಾಗೃತರಾಗಿ ವಿಧಾನಸೌಧದಲ್ಲಿದ್ದ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದರು. ತಕ್ಷಣವೇ ಆಗಮಿಸಿದ ನರಿಪೂರ್ಣ ವೈದ್ಯರ ತಂಡ ಡಿಕೆ ಶಿವಕುಮಾರ್ ಅವರ ಕಚೇರಿಯಲ್ಲೇ ಪ್ರಾಥಮಿಕ ತಪಾಸಣೆ ನಡೆಸಿತು. ಅವರ ರಕ್ತದೊತ್ತಡ ಮತ್ತು ಇತರ ಆರೋಗ್ಯ ಸೂಚಕಗಳನ್ನು ಕೂಲಂಕುಷವಾಗಿ ಪರೀಕ್ಷಿಸಿದ ವೈದ್ಯರು, ಅವರಿಗೆ ಸೂಕ್ತ ವೈದ್ಯಕೀಯ ನೆರವು ನೀಡಿದರು. ಜೊತೆಗೆ, ಅತಿಯಾದ ಆಯಾಸವೇ ಈ ಆರೋಗ್ಯ ಸಮಸ್ಯೆಗೆ ಮುಖ್ಯ ಕಾರಣವೆಂದು ತಿಳಿಸಿದ ವೈದ್ಯರು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಅವರಿಗೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.

ಈ ಸುದ್ದಿ ಹರಡುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಹಾಗೂ ಅವರ ಬೆಂಬಲಿಗರಲ್ಲಿ ಆತಂಕ ಮೂಡಿತ್ತು. ಆದರೆ, ವೈದ್ಯರ ಚಿಕಿತ್ಸೆಯ ನಂತರ ಅವರ ಸ್ಥಿತಿ ಸುಧಾರಿಸಿದ್ದು, ಸದ್ಯ ಅಪಾಯವಿಲ್ಲ ಎಂದು ತಿಳಿಯಬಂದಿದೆ. ವಿಶ್ರಾಂತಿಯ ನಂತರ ಅವರು ಮತ್ತೆ ತಮ್ಮ ದಿನನಿತ್ಯದ ಆಡಳಿತಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.