Photo Credits: @thenameisyash (Instagram)
‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿದೆ.
ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನೆಗೆಟಿವ್ ವಿಮರ್ಶೆ ಹಾಗೂ ಟ್ರೋಲ್ಗಳನ್ನು ಹರಿಬಿಡುತ್ತಿದ್ದಾರೆ.
ಆದರೆ ಈ ಎಲ್ಲಾ ನೆಗೆಟಿವಿಟಿಗಳ ಮಧ್ಯೆ ಯಶ್ ಅವರ ಇನ್ಸ್ಟಾಗ್ರಾಮ್ ಬಯೋ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ನೆಗೆಟಿವ್ ಕಾಮೆಂಟ್ಸ್ಗಳಿಗೆ ಯಶ್ ಬಯೋ ಮೂಲಕವೇ ಫ್ಯಾನ್ಸ್ ಸಖತ್ ಕೌಂಟರ್
ಯಶ್ ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಬಯೋದಲ್ಲಿ, “Be Yourself because An Original is Worth more than a Copy” ಎಂದು ಬರೆದುಕೊಂಡಿದ್ದಾರೆ. ಅಂದರೆ, “ನೀವು ನೀವಾಗಿಯೇ ಇರಿ, ಏಕೆಂದರೆ ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ” ಎಂಬುದು ಇದರ ಅರ್ಥವಾಗಿದೆ.
‘ಟಾಕ್ಸಿಕ್’ ಸಿನಿಮಾವನ್ನು ಇತರ ಚಿತ್ರಗಳಿಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿರುವವರಿಗೆ ಯಶ್ ಅಭಿಮಾನಿಗಳು ಈ ಬಯೋ ಸ್ಕ್ರೀನ್ಶಾಟ್ ಹಂಚಿಕೊಳ್ಳುವ ಮೂಲಕ ಸರಿಯಾದ ಟಾಂಗ್ ನೀಡುತ್ತಿದ್ದಾರೆ.
‘ಅಸಲಿ’ ಪ್ರಯತ್ನಗಳಿಗೆ ಎಂದು ಸೋಲಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳು ಈ ಸಾಲುಗಳನ್ನು ತಮ್ಮ ಸ್ಟೇಟಸ್ ಹಾಗೂ ಪೋಸ್ಟ್ಗಳಲ್ಲಿ ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ.
‘ಟಾಕ್ಸಿಕ್’ ಬೆನ್ನಿಗೆ ನಿಂತ ಸ್ಯಾಂಡಲ್ವುಡ್ ದಿಗ್ಗಜರು
ನೆಗೆಟಿವ್ ಕಾಮೆಂಟ್ಗಳು ಏನೇ ಬಂದರೂ, ಸಿನಿಮಾದ ವಿಶ್ಯುವಲ್ ಮೇಕಿಂಗ್, ಯಶ್ ಮಾಸ್ ಆಕ್ಷನ್ ಅವತಾರ ಹಾಗೂ ತಾಂತ್ರಿಕ ಮೆರುಗು ಅಭಿಮಾನಿಗಳನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ.
ಕನ್ನಡ ಚಿತ್ರರಂಗದ ಪ್ರಮುಖ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಯಶ್ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಚಿತ್ರರಂಗದ ಹಿರಿಯರು ಹಾಗೂ ಸಹಕಲಾವಿದರ ಈ ಬೆಂಬಲ ಯಶ್ ಅಭಿಮಾನಿಗಳಿಗೆ ಮತ್ತಷ್ಟು ಧೈರ್ಯ ತುಂಬಿದೆ.
ಟ್ರೋಲ್ಗಳ ನಡುವೆಯೂ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’
ಟ್ರೋಲ್ಗಳ ನಡುವೆಯೂ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸುತ್ತಿದ್ದು, ರಿಲೀಸ್ ಆದ ಕೇವಲ 3 ದಿನಗಳಲ್ಲೇ ಜಾಗತಿಕವಾಗಿ ಬರೋಬ್ಬರಿ ₹221 ಕೋಟಿಗೂ ಅಧಿಕ ಗಳಿಕೆ ಕಂಡು ₹200 ಕೋಟಿ ಕ್ಲಬ್ ಸೇರಿದೆ.
ಭಾರತದ ಬಾಕ್ಸ್ ಆಫೀಸ್ ಒಂದರಲ್ಲೇ ₹165 ಕೋಟಿಗೂ ಹೆಚ್ಚು ನೆಟ್ ಕಲೆಕ್ಷನ್ ಆಗಿದ್ದು, ಹಿಂದಿ ಹಾಗೂ ಕನ್ನಡ ಆವೃತ್ತಿಗಳು ಗರಿಷ್ಠ ಕೊಡುಗೆ ನೀಡಿವೆ.
ಒಟ್ಟಿನಲ್ಲಿ ನೆಗೆಟಿವ್ ಪ್ರಚಾರಗಳ ನಡುವೆಯೂ ರಾಕಿಂಗ್ ಸ್ಟಾರ್ ಯಶ್ ಜಾದೂ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.




