ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಆಗಸ್ಟ್ 26ಕ್ಕೆ ರಿಲೀಸ್ ಆಗಿದೆ. ಈ ಸಿನಿಮಾಕ್ಕಾಗಿ ಯಶ್ ತಮ್ಮ ಜೀವನದ ನಾಲ್ಕು ವರ್ಷಕ್ಕೂ ಹೆಚ್ಚು ಸಮಯ ನೀಡಿದ್ದಾರೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕಂಡು ಕೇಳರಿಯದ ಬಜೆಟ್ ಅನ್ನು ಸಿನಿಮಾಕ್ಕೆ ಹೂಡಿಕೆ ಮಾಡಲಾಗಿದೆ. ಯಶ್, ಭಾರಿ ಮಹಾತ್ವಾಕಾಂಕ್ಷೆಯೊಂದಿಗೆ ಈ ಸಿನಿಮಾನಲ್ಲಿ ತೊಡಗಿಕೊಂಡಿದ್ದರು. ಸಿನಿಮಾ ನೋಡಿದಾಗ ಯಶ್ ಸೇರಿದಂತೆ ಪ್ರತಿಯೊಬ್ಬರ ಶ್ರಮವೂ ಕಣ್ಣಿಗೆ ಎದ್ದು ಕಾಣುತ್ತದೆ. ಖರ್ಚು ಮಾಡಲಾಗಿರುವ ಪ್ರತಿ ರೂಪಾಯಿಯೂ ಸಿನಿಮಾದ ಫ್ರೇಂಗಳಲ್ಲಿ ಪ್ರತಿಫಲಿಸುತ್ತದೆ. ಯಶ್ ಹಾಗೂ ತಂಡ ಒಂದು ‘ಹಾಲಿವುಡ್ ಮಾದರಿ’ ಸಿನಿಮಾ ಮಾಡಲು ಯತ್ನಿಸಿ, ಅದರಲ್ಲಿ ಸಫಲರಾಗಿದ್ದಾರೆ. ‘ಟಾಕ್ಸಿಕ್’ ನಲ್ಲಿ ತಾಂತ್ರಿಕವಾಗಿ ಇರಬೇಕಾದ ಎಲ್ಲವೂ ಇದೆ. ಆದರೆ ಮುಖ್ಯವಾಗಿ ಇರಬೇಕಾದ ‘ಭಾವ’ ಮಿಸ್ಸಿಂಗ್ ಆಗಿದೆ.
‘ಕೆಜಿಎಫ್’ ಅಥವಾ ‘ಕೆಜಿಎಫ್ 2’ ಒಮ್ಮೆ ನೆನಪಿಸಿಕೊಳ್ಳಿ, ಅಲ್ಲಿಯೂ ಯಶ್ ಗ್ಯಾಂಗ್ಸ್ಟರ್. ಆದರೆ ಆ ಗ್ಯಾಂಗ್ಸ್ಟರ್ಗೆ ಉದ್ದೇಶವಿತ್ತು, ಗುರಿ ಇತ್ತು, ಅವನ ಬದುಕಿನಲ್ಲಿ ಹೋರಾಟವಿತ್ತು, ವ್ಯಕ್ತಿತ್ವದಲ್ಲಿ ಗತ್ತಿನ ಜೊತೆಗೆ ಮಾನವೀಯತೆ ಇತ್ತು. ಆತ ಗ್ಯಾಂಗ್ಸ್ಟರ್ ಆಗಿದ್ದಕ್ಕೂ ಅಲ್ಲಿ ಕಾರಣವಿತ್ತು. ‘ಟಾಕ್ಸಿಕ್’ನಲ್ಲೂ ಯಶ್ ಗ್ಯಾಂಗ್ಸ್ಟರ್, ಸಿಕ್ಕ-ಸಿಕ್ಕವರನ್ನು ಹಾದಿ ಬೀದಿಯಲ್ಲಿ ಕೊಲ್ಲುತ್ತಾನೆ. ಯುವತಿಯರೆಂದರೆ ರಾಯನಿಗೆ ಬಳಸಿ ಬಿಸಾಡುವ ಕರ್ಚೀಫಿನಂತೆ. ಯಾರ ಹಿಡಿತಕ್ಕೂ ಸಿಕ್ಕದ ಕಲ್ಲು ಹೃದಯಿ. ಆದರೆ ಅಕ್ಕನ ಪ್ರೀತಿಯ ತಮ್ಮ. ರಾಯನಿಗೆ ಮತ್ತೊಂದು ಮುಖವಿದೆ. ಅದು ಮನುಷ್ಯನ ಮುಖ, ಆದರೆ ಆ ಮುಖವನ್ನು ಸರಿಯಾಗಿ ತೋರಿಸುವಲ್ಲಿ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತೂ ಮೋಹನ್ದಾಸ್ ಸೋತಿದ್ದಾರೆ.
‘ಕೆಜಿಎಫ್’ನಲ್ಲಿ ಯಶ್ ಒಳಗಿನ ‘ಮನುಷ್ಯ’ತ್ವ ಅವನ ತಾಯಿಯ ರೂಪದಲ್ಲಿ, ನಾಯಕಿಯ ಜೊತೆ ಆತ ನಡೆದುಕೊಳ್ಳುವ ರೀತಿಯಲ್ಲಿ ವ್ಯಕ್ತವಾಗುತ್ತಿತ್ತು. ಆ ಪಾತ್ರಕ್ಕೆ ಆಪ್ತತೆಯನ್ನು ಅದು ನೀಡಿತ್ತು. ಇಲ್ಲಿಯೂ ಸಹ ಗ್ಯಾಂಗ್ಸ್ಟರ್ ರಾಯನಿಗೆ ಒಂದು ಒಳ್ಳೆಯ ಮುಖವಿದೆ. ಆದರೆ ಅದರ ಅನಾವರಣವನ್ನು ನಿರ್ದೇಶಕಿ ಸರಿಯಾಗಿ ಮಾಡಿಲ್ಲ, ಅದೇ ಕಾರಣಕ್ಕೆ ಎಲ್ಲವೂ ಇದ್ದ ಹೊರಾತಾಗಿಯೂ ‘ಟಾಕ್ಸಿಕ್’ ಸಿನಿಮಾನಲ್ಲಿ ಏನೋ ಮಿಸ್ಸಿಂಗ್ ಎನಿಸುತ್ತದೆ. ವಿಶೇಷವಾಗಿ ಸಿನಿಮಾನಲ್ಲಿ ಭಾವನೆಗಳು ಮಿಸ್ಸಿಂಗ್ ಎನಿಸುತ್ತದೆ.
ಇಡೀ ಸಿನಿಮಾನಲ್ಲಿ ಯಶ್ ಎದ್ದು ಕಾಣುತ್ತಾರೆ. ಅವರು ಎದ್ದು ಕಾಣಲೆಂದೇ ಕೆಲವು ದೃಶ್ಯಗಳನ್ನು ಹೆಣೆಯಲಾಗಿದೆ. ಯಶ್, ಭಾರಕ್ಕೆ ಕತೆ ತುಸು ಹಾದಿ ತಪ್ಪಿದೆಯಾ ಎಂಬ ಅನುಮಾನವೂ ಅಲ್ಲಲ್ಲಿ ಮೂಡುತ್ತದೆ. ಯಶ್ ಅವರ ಪಾತ್ರವನ್ನು ಎಲಿವೇಟ್ ಮಾಡಲೆಂದು ಪ್ರತಿ ಐದು ನಿಮಿಷಕ್ಕೊಂದು ಸ್ಲೋ ಮೋಷನ್ ಸೀನ್ ಇಡಲಾಗಿದೆ. ಯಶ್, ದ್ವಿಪಾತ್ರದಲ್ಲಿ ನಟಿಸಿದ್ದು, ಎರಡೂ ಪಾತ್ರಗಳಲ್ಲಿ ಅವರ ನಟನೆ ಅದ್ಭುತವಾಗಿದೆ. ಜೊತೆಗೆ ಅವರ ಟ್ರಾನ್ಸ್ಫರ್ಮೇಷನ್ಗೆ ಅಂಕಗಳನ್ನು ಕೊಡಲೇ ಬೇಕಿದೆ. ‘ಕೆಜಿಎಫ್’ನ ಅವರ ಸ್ವಾಗು ಇಲ್ಲಿಯೂ ಮುಂದುವರೆದಿದೆ. ಆದರೆ ಆ ಸ್ವಾಗನ್ನು ಪ್ರೇಕ್ಷಕ ಈಗಾಗಲೇ ನೋಡಿದ್ದಾಗಿದೆ. ಕತೆಯಲ್ಲಿ ಬರುವ ಟ್ವಿಸ್ಟುಗಳಿಗೆ ಬಲವಾದ ಕಾರಣಗಳು ಸಿಗುವುದಿಲ್ಲ. ನಾಯಕಿಯನ್ನು ನಾಯಕ ಬಿಟ್ಟು ಹೋಗಲು ಇರುವ ಕಾರಣ ಬಲು ಪೇಲವವಾಗಿದೆ. ಅದಾದ ಬಳಿಕ ನಾಯಕಿಯನ್ನು ದ್ವೇಷಿಸಲು ನಿರ್ದೇಶಕಿ ನೀಡಿರುವ ಕಾರಣವೂ ಬಲು ಪೇಲವವಾಗಿದೆ.
ಸಿನಿಮಾ ತಾಂತ್ರಿಕವಾಗಿ ಬಹಳ ರಿಚ್ ಆಗಿದೆ. ಮೊದಲೇ ಹೇಳಿದಂತೆ ಸಿನಿಮಾಕ್ಕೆ ಸುರಿದಿರುವ ಪ್ರತಿ ಕಾಸು ಪ್ರೇಂನಲ್ಲಿ ಕಾಣುತ್ತದೆ. ಪ್ರತಿಯೊಂದು ಪ್ರೇಮಿನಲ್ಲೂ ಅದ್ಧೂರಿತನ, ಅಚ್ಚುಕಟ್ಟುತನ, ಗುಣಮಟ್ಟ ಕಾಣುತ್ತದೆ. ಖಂಡಿತವಾಗಿಯೂ ಇದೊಂದು ಹಾಲಿವುಡ್ ಸಿನಿಮಾ ಫೀಲ್ ನೀಡುತ್ತದೆ. ಸಿನಿಮಾದ ಆಕ್ಷನ್ ದೃಶ್ಯಗಳು ಅದ್ಭುತವಾಗಿದೆ. ವಿಎಫ್ಎಕ್ಸ್ ಸಹ ಅದ್ಭುತವಾಗಿದೆ. ಸೆಟ್ ಡಿಸೈನ್, ಪ್ರೊಡಕ್ಷನ್ ಎಲ್ಲದಕ್ಕೂ ಪೂರ್ಣ ಅಂಕಗಳು.
ಸಿನಿಮಾನಲ್ಲಿ ಬಹುತೇಕ ಎಲ್ಲ ಪ್ರತಿಭಾವಂತ ನಟ-ನಟಿಯರನ್ನೇ ನಿರ್ದೇಶಕಿ ಗೀತೂ ಮೋಹನ್ದಾಸ್ ಬಳಸಿಕೊಂಡಿರುವ ಕಾರಣ ಯಾರ ನಟನೆಯೂ ಸಪ್ಪೆ ಎನಿಸುವುದಿಲ್ಲ. ಎಲ್ಲರೂ ತಮಗೆ ನೀಡಲಾದ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಸಂಗೀತವೂ ಚೆನ್ನಾಗಿದೆ. ರವಿ ಬಸ್ರೂರು ಈ ಬಾರಿ ಕೆಲವು ಭಿನ್ನ ಪ್ರಯೋಗಗಳನ್ನು ಸಹ ಈ ಸಿನಿಮಾನಲ್ಲಿ ಮಾಡಿದ್ದಾರೆ. ಒಟ್ಟಾರೆಯಾಗಿ ಒಳ್ಳೆಯ ಸಿನಿಮಾ ಆದರೆ ಇನ್ನೂ ಚೆನ್ನಾಗಿರಬಹುದಿತ್ತು ಎಂಬ ಭಾವ ಮೂಡದೇ ಇರದು.




