ಚಾಮರಾಜನಗರ ಜಿಲ್ಲೆಯ ಹನೂರು ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆಗೆ ವಹಿಸಿದೆ. ಈ ಪ್ರಕರಣದ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ಆದೇಶ ಹೊರಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಾಪುರದಲ್ಲಿ ಒಂದು, ಹನೂರಿನಲ್ಲಿ ಎರಡು ಮತ್ತು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಪ್ರತ್ಯೇಕ ಎಫ್ಐಆರ್ ಗಳು ದಾಖಲಾಗಿದ್ದು, ಎಲ್ಲಾ ಪ್ರಕರಣಗಳ ದಾಖಲೆ ಮತ್ತು ಸಾಕ್ಷ್ಯಗಳನ್ನು ತಕ್ಷಣ ಸಿಐಡಿಗೆ ವರ್ಗಾಯಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ.
ಇದೇ ಪ್ರಕರಣದ ಮರಣೋತ್ತರ ಪರೀಕ್ಷಾ ವರದಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಹನೂರು ಪೊಲೀಸ್ ಠಾಣೆಯ 166/2026 ಪ್ರಕರಣದಲ್ಲಿ ಮೃತಪಟ್ಟ ಸೆಬಾಸ್ಟಿಯನ್ ಡೇವಿಡ್ ಕುಮಾರ್ ಅವರ ಶವ ಪರೀಕ್ಷೆಯನ್ನು ಮೈಸೂರು ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಡಾ. ದಯಾನಂದ ಆರ್ ಮತ್ತು ಡಾ. ಆನಂದ್ ಪಿ ರಾಯಮಾನೆ ನೇತೃತ್ವದ ತಂಡ ನಡೆಸಿದೆ. ಈ ವರದಿಯ ಪ್ರಕಾರ ಮೃತನ ಮೇಲೆ ಅತ್ಯಂತ ಸಮೀಪದಿಂದ ಶಾಟ್ ಗನ್ ನಿಂದ ಎರಡು ಬಾರಿ ಗುಂಡು ಹಾರಿಸಲಾಗಿದೆ. ಒಂದು ಗುಂಡು ಎಡ ಎದೆಗೆ ಮತ್ತು ಇನ್ನೊಂದು ಬಲ ತೊಡೆಯ ಒಳಭಾಗಕ್ಕೆ ನೇರವಾಗಿ ತಗುಲಿದೆ. ಗಾಯದ ಸುತ್ತ ಚರ್ಮ ಸುಟ್ಟಿರುವ ಗುರುತು, ಬಟ್ಟೆಯ ಮೇಲೆ ಸುಟ್ಟ ಕಲೆ, ಕಪ್ಪು ಹೊಗೆ ಮತ್ತು ಗನ್ ಪೌಡರ್ ಅಂಶ ಪತ್ತೆಯಾಗಿದ್ದು, ಇದು ಕ್ಲೋಸ್ ರೇಂಜ್ ನಿಂದಲೇ ಗುಂಡು ಹಾರಿಸಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಹನೂರು ಶೂಟೌಟ್ ಪ್ರಕರಣ ಆರಂಭದಲ್ಲಿ ಅರಣ್ಯ ಅತಿಕ್ರಮಣ ತಡೆಯುವ ಕಾರ್ಯಾಚರಣೆ ಎಂದು ಬಿಂಬಿತವಾಗಿತ್ತು. ಆದರೆ ಮರಣೋತ್ತರ ವರದಿ ಹೊರಬಿದ್ದ ನಂತರ ಅದರ ಸ್ವರೂಪವೇ ಬದಲಾಗಿದೆ. ಹತ್ತಿರದಿಂದ ಗುಂಡು ಹಾರಿಸಿರುವುದು ಸ್ವರಕ್ಷಣೆಗಾಗಿ ನಡೆದ ಕ್ರಮವೇ ಅಥವಾ ಉದ್ದೇಶಪೂರ್ವಕ ಹತ್ಯೆಯೇ ಎನ್ನುವ ಪ್ರಶ್ನೆ ಎದ್ದಿದೆ. ಸಾಮಾನ್ಯವಾಗಿ ಅರಣ್ಯ ಸಿಬ್ಬಂದಿ ಎಚ್ಚರಿಕೆ ನೀಡಿ, ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಕಾಲಿಗೆ ಗುರಿಯಿಡುವ ಪ್ರೋಟೋಕಾಲ್ ಇದೆ. ಆದರೆ ಎದೆಗೆ ನೇರ ಗುಂಡು ಹಾರಿಸಿರುವುದು ಈ ಪ್ರೋಟೋಕಾಲ್ ಉಲ್ಲಂಘನೆಯಾಗಿದೆಯೇ ಎನ್ನುವ ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಥಳೀಯರಲ್ಲಿ ಈಗಾಗಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ನಡುವಿನ ತನಿಖೆಯಲ್ಲಿ ಪಾರದರ್ಶಕತೆ ಇರುವುದಿಲ್ಲ ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮೂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಿರುವುದು ಸೂಕ್ತ ನಿರ್ಧಾರ. ಸಿಐಡಿ ತಂಡ ಸ್ಥಳಕ್ಕೆ ಭೇಟಿ ನೀಡಿ ಮರುಸೃಷ್ಟಿ ಮಾಡಬೇಕು, ಗುಂಡು ಹಾರಿದ ದೂರ, ಬಳಸಿದ ಅಸ್ತ್ರ, ಸಿಬ್ಬಂದಿಯ ಹೇಳಿಕೆ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನು ತುಲನೆ ಮಾಡಬೇಕು.
ಇಂತಹ ಪ್ರಕರಣಗಳಲ್ಲಿ ವಿಧಿವಿಜ್ಞಾನ ಸಾಕ್ಷ್ಯವೇ ನಿರ್ಣಾಯಕ. ಗನ್ ಪೌಡರ್ ಕುರುಹು, ಸುಟ್ಟ ಗಾಯಗಳು ಕ್ಲೋಸ್ ರೇಂಜ್ ದಾಳಿಯನ್ನು ಸಾಬೀತುಪಡಿಸುತ್ತವೆ. ಮುಂದೆ ಸಿಐಡಿ ಬ್ಯಾಲಿಸ್ಟಿಕ್ ವರದಿ, ಘಟನಾ ಸ್ಥಳದ ಪಂಚನಾಮೆ ಮತ್ತು ಅರಣ್ಯ ಸಿಬ್ಬಂದಿಯ ಕರ್ತವ್ಯ ಲಾಗ್ ಬುಕ್ ಪರಿಶೀಲಿಸಿದರೆ ಮಾತ್ರ ಸತ್ಯ ಹೊರಬರುತ್ತದೆ. ಈ ತನಿಖೆ ಕೇವಲ ಮೂವರ ಸಾವಿನ ನ್ಯಾಯದ ಪ್ರಶ್ನೆಯಲ್ಲ, ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಮತ್ತು ರೈತ ಸಮುದಾಯ ಹಾಗೂ ಇಲಾಖೆ ನಡುವಿನ ನಂಬಿಕೆಯ ಪ್ರಶ್ನೆಯೂ ಹೌದು. ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮವಾಗದಿದ್ದರೆ ಇಂತಹ ಘಟನೆಗಳು ಮತ್ತೆ ಮರುಕಳಿಸುವ ಸಾಧ್ಯತೆ ಇದೆ.




