ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ತೀವ್ರಗೊಂಡಿದ್ದು, ಲಕ್ಷಾಂತರ ಮತದಾರರ ಹೆಸರುಗಳು ಗೊಂದಲಕ್ಕೆ ಸಿಲುಕಿವೆ. ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕೋಟ್ಯಂತರ ಮತದಾರರ ಪಟ್ಟಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ವ್ಯಾಪಕ ಪ್ರಮಾಣದ ಹೆಸರುಗಳನ್ನು ಎಎಸ್ ಡಿಡಿಒ (ASDD-Absent, Shifted, Duplicate, Dead, Others) ಅಂದರೆ ಗೈರುಹಾಜರಾದ, ಸ್ಥಳಾಂತರಗೊಂಡ, ನಕಲಿ ಹಾಗೂ ಮೃತರಾದ ಪಟ್ಟಿಯಡಿಯಲ್ಲಿ ಗುರುತಿಸಲಾಗಿದೆ.
ಈ ಬೃಹತ್ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ನಾಗರಿಕರಿಗೆ ನೋಟಿಸ್ಗಳನ್ನು ನೀಡಲಾಗಿದ್ದು, ಮತದಾರರ ಪಟ್ಟಿಯ ನೈಜತೆ ಹಾಗೂ ದೋಷರಹಿತ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟಿಕೊಂಡಿದೆ. ಬೂತ್ ಮಟ್ಟದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಹಾಗೂ ವಿಳಾಸಗಳ ದೃಢೀಕರಣದಲ್ಲಿ ಎದುರಿಸುತ್ತಿರುವ ಸವಾಲುಗಳಿಂದಾಗಿ ಮತದಾರರ ಪಟ್ಟಿಯ ಸಮಗ್ರತೆಯ ಮೇಲೆ ಗಂಭೀರ ಪ್ರಶ್ನೆಗಳು ಎದುರಾಗಿವೆ.
ಮತದಾರರ ಪಟ್ಟಿಯ ಈ ಬೃಹತ್ ಪ್ರಮಾಣದ ಪರಿಷ್ಕರಣೆಯು ಆಡಳಿತಾತ್ಮಕ ಪಾರದರ್ಶಕತೆಗೆ ಸಹಕಾರಿಯಾಗಿದೆಯಾದರೂ, ತರಾತುರಿಯ ನಿರ್ಧಾರಗಳಿಂದಾಗಿ ನೈಜ ಮತದಾರರು ತಮ್ಮ ಹಕ್ಕುಗಳಿಂದ ವಂಚಿತರಾಗುವ ಅಪಾಯವಿದೆ. ಬೂತ್ ಮಟ್ಟದ ಅಧಿಕಾರಿಗಳ ಮೇಲಿನ ವಿಪರೀತ ಒತ್ತಡ ಮತ್ತು ಡಿಜಿಟಲೀಕರಣದ ಲೋಪಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಚುನಾವಣಾ ಆಯೋಗವು ಕೇವಲ ದೋಷಗಳನ್ನು ಸರಿಪಡಿಸುವುದಷ್ಟೇ ಅಲ್ಲದೆ, ಪ್ರತಿಯೊಬ್ಬ ಅರ್ಹ ಮತದಾರರಿಗೆ ಮುಕ್ತ ಹಾಗೂ ಸುಲಭ ಅವಕಾಶ ಕಲ್ಪಿಸುವುದು ಅತ್ಯಗತ್ಯ.




