DK SHIVAKUMAR: ಸಿಎಂ ಡಿಕೆ ಫುಲ್ ಸಾಫ್ಟ್ & ಸೈಲೆಂಟ್ – ಕೈಮುಗಿದು ಕೇಳಿಕೊಂಡಿದ್ದು ಯಾರಿಗೆ..?

ವಿಧಾನಸಭೆಯಲ್ಲಿ ನಾಗೇಂದ್ರ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸತತ ನಾಲ್ಕು ದಿನ ಕಲಾಪಕ್ಕೆ ಅಡ್ಡಿಪಡಿಸಿರುವ ಬೆನ್ನಲ್ಲೇ, ‘ದ್ವೇಷ ರಾಜಕಾರಣ ಮಾಡುವುದಿಲ್ಲ, ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆಯುತ್ತೇನೆ’ ಎಂದು ಡಿ.ಕೆ. ಶಿವಕುಮಾರ್‌ ಕೈಮುಗಿದು ಮನವಿ ಮಾಡಿದ್ದಾರೆ. ಆದರೆ ಅವರ ಈ ಮನವಿ ಯಾರನ್ನು ಉದ್ದೇಶಿಸಿತ್ತು ಎಂಬ ಪ್ರಶ್ನೆ ಇದೀಗ ಕಾಂಗ್ರೆಸ್‌ ವಲಯದಲ್ಲೇ ಚರ್ಚೆಗೆ ಕಾರಣವಾಗಿದೆ.

ಸುಗಮವಾಗಿ ಕಲಾಪ ನಡೆದಿದ್ದರೆ ಸರ್ಕಾರದ ಹಲವು ಲೋಪಗಳು ಪ್ರತಿಪಕ್ಷಗಳ ಚರ್ಚೆಗೆ ಸಿಲುಕುತ್ತಿದ್ದವು. ಹೊಸದಾಗಿ ಸಚಿವರಾಗಿರುವ ಒಂಬತ್ತು ಮಂದಿಗೂ ಇಲಾಖೆಗಳ ಬಗ್ಗೆ ಸಂಪೂರ್ಣ ಹಿಡಿತ ಸಾಧಿಸುವ ಮುನ್ನವೇ ತೀವ್ರ ಪ್ರಶ್ನೆಗಳನ್ನು ಎದುರಿಸುವ ಅನಿವಾರ್ಯತೆ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಲಾಪಕ್ಕೆ ಅಡ್ಡಿಯಾದ ಬೆಳವಣಿಗೆ ಆಡಳಿತ ಪಕ್ಷಕ್ಕೆ ಪರೋಕ್ಷ ಅನುಕೂಲ ತಂದಿದೆ. ಇದೇ ವೇಳೆ ಕಾಂಗ್ರೆಸ್‌ ಶಾಸಕರಲ್ಲಿನ ಒಗ್ಗಟ್ಟಿನ ಕೊರತೆಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಟಿ.ಬಿ. ಜಯಚಂದ್ರ, ಎಂ. ಕೃಷ್ಣಪ್ಪ, ಬಿ.ಆರ್. ಪಾಟೀಲ್‌ ಸೇರಿದಂತೆ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಗೈರುಹಾಜರಿ ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಎರಡನೇ ದಿನ ಸದನಕ್ಕೆ ಬಂದರೂ, ಅವರನ್ನು ಬೆಂಬಲಿಸುವ ಹಲವು ಶಾಸಕರು ಸಕ್ರಿಯವಾಗಿ ಕಾಣಿಸಿಕೊಂಡಿಲ್ಲ. ವಿಷಯಾಧಾರಿತ ಚರ್ಚೆ ನಡೆದರೆ ಸರ್ಕಾರದ ಪರ ವಾದಿಸಲು ಸಂಖ್ಯಾಬಲದ ಕೊರತೆ ಎದುರಾಗುವ ಸಾಧ್ಯತೆಯಿದೆ. ಸಚಿವ ಸ್ಥಾನ ಹಾಗೂ ನಿಗಮ-ಮಂಡಳಿ ಹುದ್ದೆಗಳ ನಿರೀಕ್ಷೆಯಲ್ಲಿರುವವರೇ ಸರ್ಕಾರದ ಪರ ಹೆಚ್ಚು ಧ್ವನಿ ಎತ್ತುತ್ತಿದ್ದಾರೆ ಎಂಬ ಮಾತುಗಳು ಇದಕ್ಕೆ ಮತ್ತಷ್ಟು ಬಲ ನೀಡಿವೆ.

ಮೇಲ್ನೋಟಕ್ಕೆ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇದ್ದರೂ, ಇತ್ತೀಚಿನ ಬೆಳವಣಿಗೆಗಳು ಇಬ್ಬರ ರಾಜಕೀಯ ಹೆಜ್ಜೆಗಳು ಬೇರೆಬೇರೆ ಆಗುತ್ತಿರುವ ಸೂಚನೆ ನೀಡುತ್ತಿವೆ. ದೆಹಲಿ ಭೇಟಿಯಲ್ಲೂ ಇಬ್ಬರ ನಡುವೆ ಹಿಂದಿನಂತ ಆತ್ಮೀಯ ಸಂವಹನ ಕಂಡುಬಂದಿಲ್ಲ ಎನ್ನಲಾಗಿದೆ.

ಹೀಗಾಗಿ ಶಿವಕುಮಾರ್‌ ಅವರ ‘ಸಹಕಾರ ನೀಡಿ’ ಎಂಬ ಮನವಿ ಪ್ರತಿಪಕ್ಷಗಳಿಗಿಂತ ಸ್ವಪಕ್ಷೀಯರಿಗೇ ಹೆಚ್ಚು ಅನ್ವಯವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ‘ಬಂಡೆ’ ಎಂಬ ಕಠಿಣ ರಾಜಕೀಯ ಇಮೇಜ್‌ ಹೊಂದಿದ್ದ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದ ಬಳಿಕ ಮೃದು ಧೋರಣೆಗೆ ಮೊರೆ ಹೋಗಿರುವುದು ಅಧಿಕಾರದ ಸಮೀಕರಣ ಬದಲಾಗಿರುವುದರ ಸಂಕೇತವೆಂಬ ವಿಶ್ಲೇಷಣೆ ಕೇಳಿಬರುತ್ತಿದೆ.