Photo Credits: @iffmelbourne (Instagram)
ಆಸ್ಟ್ರೇಲಿಯಾದಲ್ಲಿ ನಡೆದ ಪ್ರತಿಷ್ಠಿತ 17ನೇ ಆವೃತ್ತಿಯ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ (IFFM 2026) ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಗಳ ಮೆರಗು ಕಂಗೊಳಿಸಿದೆ. ಭಾರತೀಯ ಚಿತ್ರರಂಗದ ನಟನೆ, ವೈವಿಧ್ಯಮಯ ಕಥೆಗಳು ಹಾಗೂ ತಾಂತ್ರಿಕ ಶ್ರೇಷ್ಠತೆಯನ್ನು ಗೌರವಿಸುವ ಈ ವೇದಿಕೆಯಲ್ಲಿ ಸ್ಯಾಂಡಲ್ವುಡ್ ಬ್ಲಾಕ್ಬಸ್ಟರ್ ‘ಕಾಂತಾರ: ಚಾಪ್ಟರ್ 1’ ಅಬ್ಬರಿಸಿದೆ. ಕನ್ನಡದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಬರೋಬ್ಬರಿ ಎರಡು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಯಭೇರಿ ಬಾರಿಸಿದ್ದಾರೆ.
ರಿಷಬ್ ಶೆಟ್ಟಿಗೆ ಒಲಿದ ‘ಅತ್ಯುತ್ತಮ ನಿರ್ದೇಶಕ’ ಹಾಗೂ ‘ಲೀಡರ್ಶಿಪ್ ಇನ್ ಸಿನಿಮಾ’ ಗೌರವ…
ಕನ್ನಡದ ಹೆಮ್ಮೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅದ್ಭುತ ಮೇಕಿಂಗ್ಗಾಗಿ ರಿಷಬ್ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ. ಇದರ ಜೊತೆಗೆ, ಭಾರತೀಯ ಸಿನಿಮಾಗೆ ನೀಡಿದ ಕೊಡುಗೆ ಮತ್ತು ಸಾಂಸ್ಕೃತಿಕ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ‘ಲೀಡರ್ಶಿಪ್ ಇನ್ ಸಿನಿಮಾ’ ಪ್ರಶಸ್ತಿಯನ್ನೂ ನೀಡಲಾಗಿದೆ. ದಕ್ಷಿಣ ಭಾರತದ ಹೆಮ್ಮೆಯ ಕಂಟೆಂಟ್ಗಳನ್ನು ಮೆಲ್ಬೋರ್ನ್ನಂತಹ ಬೃಹತ್ ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿ ಸೈ ಎನಿಸಿಕೊಂಡಿರುವುದು ಕನ್ನಡಿಗರಿಗೆ ಅಪಾರ ಹೆಮ್ಮೆ ತಂದಿದೆ. ಚಿತ್ರೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್, ಈ ಯಶಸ್ಸನ್ನು ತಮ್ಮ ಇಡೀ ತಂಡ ಹಾಗೂ ಅಭಿಮಾನಿಗಳಿಗೆ ಪ್ರೀತಿಯಿಂದ ಸಮರ್ಪಿಸಿದ್ದಾರೆ.
ಭಾರತೀಯ ಚಿತ್ರರಂಗದ ದಿಗ್ಗಜರಾದ ರೇಖಾ, ರಾಣಿ ಮುಖರ್ಜಿ ಹಾಗೂ ದುಲ್ಕರ್ ಸಲ್ಮಾನ್ ಮಿಂಚು…
ಈ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಟಿ ರೇಖಾ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಗೌರವ ನೀಡಿ ಸನ್ಮಾನಿಸಲಾಯಿತು. ಚಿತ್ರರಂಗದಲ್ಲಿ 30 ವರ್ಷಗಳ ಯಶಸ್ವಿ ಪಯಣ ಪೂರೈಸಿದ ನಟಿ ರಾಣಿ ಮುಖರ್ಜಿ ಅವರ ಸಾಧನೆಯನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಅಭಿನಯ ರಾಕ್ಷಸ ಪಂಕಜ್ ತ್ರಿಪಾಠಿ ಅವರಿಗೆ ‘ಆರ್ಟಿಸ್ಟ್ ಆಫ್ ಡಿಸ್ಟಿಂಕ್ಷನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಕಾಂತಾ’ ಚಿತ್ರದ ಅದ್ಭುತ ನಟನೆಗಾಗಿ ದುಲ್ಕರ್ ಸಲ್ಮಾನ್ ಅತ್ಯುತ್ತಮ ನಟ ಹಾಗೂ ‘ಫುಲ್ ಪ್ಲೇಟ್’ ಚಿತ್ರಕ್ಕಾಗಿ ಕೀರ್ತಿ ಕುಲ್ಹಾರಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು.
ಐಎಫ್ಎಫ್ಎಂ (IFFM) 2026ರ ಇತರ ಪ್ರಮುಖ ವಿಜೇತರ ವಿವರಗಳು…
ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ‘ಲೋಕಾ ಚಾಪ್ಟರ್ 1: ಚಂದ್ರ’ ಪಡೆದುಕೊಂಡರೆ, ‘ನಾಟ್ ಎ ಹೀರೊ’ ಚಿತ್ರಕ್ಕೆ ಅತ್ಯುತ್ತಮ ಇಂಡಿ ಸಿನಿಮಾ ಗೌರವ ಲಭಿಸಿತು. ಬಾಲಿವುಡ್ನ ಬಹುನಿರೀಕ್ಷಿತ ‘ಸೈಯಾರಾ’ ಚಿತ್ರಕ್ಕೆ ಪ್ರೇಕ್ಷಕರ ಮನಗೆದ್ದ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ ಒಲಿದುಬಂದಿದೆ. ವೆಬ್ ಸರಣಿ ವಿಭಾಗದಲ್ಲಿ ‘ಮಟ್ಕಾ ಕಿಂಗ್’ ಸರಣಿಗಾಗಿ ವಿಜಯ್ ವರ್ಮಾ ಹಾಗೂ ‘ದೆಹಲಿ ಕ್ರೈಮ್ 3’ಗಾಗಿ ರಸಿಕಾ ದುಗಲ್ ಅತ್ಯುತ್ತಮ ನಟ-ನಟಿಯರಾಗಿ ಹೊರಹೊಮ್ಮಿದರು. ‘ಫ್ರೀಡಮ್ ಅಟ್ ಮಿಡ್ನೈಟ್ ಸೀಸನ್ 2’ ಅತ್ಯುತ್ತಮ ಸರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಒಟ್ಟಿನಲ್ಲಿ, ಈ ಬಾರಿಯ ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಕನ್ನಡದ ‘ಕಾಂತಾರ’ದ ಅಬ್ಬರ ಜೋರಾಗಿದ್ದು, ರಿಷಬ್ ಶೆಟ್ಟಿ ಸ್ಯಾಂಡಲ್ವುಡ್ ಕೀರ್ತಿಯನ್ನು ಹೆಚ್ಚಿಸಿದ್ದಾರೆ.




