RAHUL GANDHI : ರಾಜತಾಂತ್ರಿಕತೆ ಕುರಿತು ಮೋದಿ ಕಾಲೆಳೆದ ರಾಹುಲ್ – ಹದ್ದು ಮೀರಿದ ವ್ಯಂಗ್ಯ..?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಟುವಾಗಿ ಹಾಸ್ಯಮಾಡಿದ್ದು, ಜಾಗತಿಕ ನಾಯಕರನ್ನು ಆಲಿಂಗನ ಮಾಡಿಕೊಳ್ಳುವುದೇ ದೇಶದ ರಾಜತಾಂತ್ರಿಕತೆ ಎಂದು ಭಾವಿಸಲಾಗಿದೆ ಎಂದಿದ್ದಾರೆ. ನವದೆಹಲಿಯಲ್ಲಿ ನಡೆದ ‘ರಚನಾತ್ಮಕ ಕಾಂಗ್ರೆಸ್’ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದು ಎಂದರೆ ರಾಷ್ಟ್ರೀಯ ರಾಜತಾಂತ್ರಿಕತೆ ಅಲ್ಲ ಎಂದು ಟೀಕಿಸಿದರು. ತಮ್ಮ ಹೇಳಿಕೆಯನ್ನು ಪ್ರತ್ಯಕ್ಷವಾಗಿ ವಿವರಿಸಲು ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ, ವ್ಯಂಗ್ಯ ಪ್ರದರ್ಶಿಸಿದ್ದಾರೆ.

ಈ ವೇಳೆ ಸಂದೀಪ್ ದೀಕ್ಷಿತ್ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಹೆಸರು ಪ್ರಸ್ತಾಪಿಸಿ ಆಡಿದ ಮಾತುಗಳು ಹಾಗೂ ಅದಕ್ಕೆ ರಾಹುಲ್ ನೀಡಿದ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಯಿತು. ಈ ಘಟನೆಯ ಬೆನ್ನಲ್ಲೇ ಬಿಜೆಪಿ ನಾಯಕರು ಕಟು ವಾಗ್ದಾಳಿ ನಡೆಸಿದ್ದು, ವಿಪಕ್ಷ ನಾಯಕರು ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವಿರುದ್ಧ ಹಾಗೂ ವಿದೇಶಿ ಗಣ್ಯರ ವಿರುದ್ಧ ಬಳಸಿದ ಭಾಷೆ ತೀರ ಅಸಭ್ಯವಾಗಿದೆ ಎಂದು ಕಿಡಿಕಾರಿದ್ದಾರೆ. ವಿದೇಶಾಂಗ ನೀತಿ ಕೇವಲ ವೈಯಕ್ತಿಕ ಸೌಹಾರ್ದತೆಗೆ ಸೀಮಿತವಾಗದೆ ದೇಶದ ಹಿತಾಸಕ್ತಿ ಕಾಯುವತ್ತ ಗಮನಹರಿಸಬೇಕು ಎಂದು ರಾಹುಲ್ ಹೇಳಿದ್ದಾರೆ.

ರಾಜತಾಂತ್ರಿಕ ಸಂಬಂಧಗಳು ಹಾಗೂ ವಿದೇಶಾಂಗ ನೀತಿಗಳು ಯಾವುದೇ ಒಂದು ದೇಶದ ಆರ್ಥಿಕ, ಭದ್ರತಾ ಹಾಗೂ ಕಾರ್ಯತಂತ್ರದ ಬಲವನ್ನು ಪ್ರತಿನಿಧಿಸುತ್ತವೆ. ರಾಜತಾಂತ್ರಿಕತೆಯಲ್ಲಿ ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯ ಮತ್ತು ಸೌಹಾರ್ದ ಸಂಕೇತಗಳು ಪ್ರಮುಖ ಪಾತ್ರ ವಹಿಸುತ್ತವೆಯಾದರೂ, ಅವುಗಳನ್ನೇ ಸಂಪೂರ್ಣ ರಾಜತಾಂತ್ರಿಕತೆ ಎಂದು ಪರಿಗಣಿಸುವುದು ತಪ್ಪು ಆಲೋಚನೆ. ರಾಹುಲ್ ಗಾಂಧಿ ಅವರ ಈ ವಿಮರ್ಶೆ ಪ್ರಧಾನಿ ಮೋದಿಯವರ ಶೈಲಿಯನ್ನು ನೇರವಾಗಿ ಗುರಿಯಾಗಿಸಿಕೊಂಡಿದ್ದರೂ, ರಾಜತಾಂತ್ರಿಕತೆಯ ನೈಜ ಸ್ವರೂಪ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ನಡುವಿನ ವ್ಯತ್ಯಾಸವನ್ನು ಚರ್ಚೆಗೆ ತಂದಿದೆ.

ಆದರೆ, ರಾಜಕೀಯ ವಿಮರ್ಶೆಯ ಸಂದರ್ಭದಲ್ಲಿ ಜಾಗತಿಕ ನಾಯಕರನ್ನು, ವಿಶೇಷವಾಗಿ ಮಹಿಳಾ ನಾಯಕರನ್ನು ಉಲ್ಲೇಖಿಸಿ ಆಡುವ ಲಘು ಮಾತುಗಳು ಚರ್ಚೆಯ ಘನತೆಯನ್ನು ತಗ್ಗಿಸುತ್ತವೆ. ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಗಂಭೀರ ವಿಷಯಗಳನ್ನು ಪ್ರಸ್ತಾಪಿಸುವಾಗ ವಹಿಸಬೇಕಾದ ಜವಾಬ್ದಾರಿ ಅತ್ಯಗತ್ಯ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುವಾಗ ರಾಜತಾಂತ್ರಿಕ ಚೌಕಟ್ಟನ್ನು ಗೌರವಿಸುವುದು ಮತ್ತು ರಾಜಕೀಯ ಲಾಭಕ್ಕಾಗಿ ನಾಯಕರ ವೈಯಕ್ತಿಕ ವಿಚಾರಗಳನ್ನು ಹಾಸ್ಯಕ್ಕೀಡು ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ.