SATISH JARAKIHOLI : ಡಿಸಿಎಂ ಹುದ್ದೆ ಪಕ್ಷದ ನಿರ್ಧಾರ, ನಾನು ಯಾವುದೇ ಬೇಡಿಕೆ ಇಟ್ಟಿಲ್ಲ: ಸತೀಶ್ ಜಾರಕಿಹೊಳಿ

ಡಿಸಿಎಂ ಹುದ್ದೆ ನೀಡುವ ಕುರಿತು ಕಾಂಗ್ರೆಸ್ ಪಕ್ಷದೊಳಗೆ ಚರ್ಚೆ ನಡೆದಿರುವುದು ಸತ್ಯ. ಆದರೆ ಈವರೆಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಸ್ಥಾನಕ್ಕಾಗಿ ತಾವು ಯಾವುದೇ ಬೇಡಿಕೆ ಇಟ್ಟಿಲ್ಲ ಅಥವಾ ಪಕ್ಷದ ಮೇಲೆ ಒತ್ತಡ ಹೇರಿಲ್ಲ. ಪಕ್ಷದ ಹಿತದೃಷ್ಟಿಯಿಂದ ಈ ಕುರಿತು ಚರ್ಚೆ ನಡೆದಿದೆ. ಇಂತಹ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ನಿರ್ಧರಿಸುವುದು ಸೂಕ್ತವಾಗಿದ್ದು, ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ನಡೆಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ತಮ್ಮ ಖಾತೆ ಬದಲಾವಣೆಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ತಾವು ಕೂಡ ಖಾತೆ ಬದಲಾವಣೆಗೆ ಮನವಿ ಮಾಡಿಲ್ಲ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಸಂಪುಟದಲ್ಲಿ ಮಹಿಳಾ ಸಚಿವರಿಗೆ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಒಂದು ಸ್ಥಾನವನ್ನು ಖಾಲಿ ಇರಿಸಲಾಗಿದೆ. ಹಿರಿಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹಲವು ಬಾರಿ ತಿಳಿಸಿದ್ದೇವೆ. ಸಿದ್ದರಾಮಯ್ಯ ಅವರನ್ನೂ ಪರಿಗಣಿಸಿಲ್ಲ ಎಂಬ ವಿಚಾರವನ್ನು ಸರಿಪಡಿಸಲು ಸ್ಥಾನವೊಂದನ್ನು ಉಳಿಸಲಾಗಿದೆ ಎಂದು ತಿಳಿಸಿದರು.

ಡಿಸಿಎಂ ಹುದ್ದೆ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕಾಂಗ್ರೆಸ್‌ನೊಳಗಿನ ಅಧಿಕಾರ ಹಂಚಿಕೆ ಚರ್ಚೆ ಇನ್ನೂ ಸಂಪೂರ್ಣವಾಗಿ ಮುಕ್ತಾಯವಾಗಿಲ್ಲ ಎಂಬ ಸಂದೇಶ ನೀಡುತ್ತದೆ. ಹುದ್ದೆಗಾಗಿ ನೇರವಾಗಿ ಬೇಡಿಕೆ ಇಟ್ಟಿಲ್ಲ ಎಂದು ಅವರು ಹೇಳಿರುವುದು ಪಕ್ಷದ ಆಂತರಿಕ ನಿರ್ಧಾರಕ್ಕೆ ತಮ್ಮನ್ನು ಬದ್ಧಗೊಳಿಸಿಕೊಳ್ಳುವ ರಾಜಕೀಯ ನಿಲುವಾಗಿದೆ. ಈ ಮೂಲಕ ವೈಯಕ್ತಿಕ ಆಕಾಂಕ್ಷೆಗಿಂತ ಪಕ್ಷದ ತೀರ್ಮಾನಕ್ಕೆ ಆದ್ಯತೆ ನೀಡುತ್ತಿರುವುದಾಗಿ ಅವರು ತೋರಿಸಿದ್ದಾರೆ. ಆದರೆ ಡಿಸಿಎಂ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಯೇ ನಡೆದಿಲ್ಲ ಎನ್ನದೆ, ಚರ್ಚೆ ನಡೆದಿರುವುದನ್ನು ಒಪ್ಪಿಕೊಂಡಿರುವುದು ಈ ವಿಷಯ ಕಾಂಗ್ರೆಸ್ ರಾಜಕಾರಣದಲ್ಲಿ ಇನ್ನೂ ಪ್ರಸ್ತುತವಾಗಿದೆ ಎಂಬುದನ್ನು ಸೂಚಿಸುತ್ತದೆ.

ಖಾತೆ ಬದಲಾವಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂಬ ಸ್ಪಷ್ಟನೆ ಕೂಡ ಸಚಿವ ಸಂಪುಟದೊಳಗಿನ ಬದಲಾವಣೆಗಳ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಉತ್ತರವಾಗಿದೆ. ಖಾತೆ ಹಂಚಿಕೆ ಸಂಪೂರ್ಣವಾಗಿ ಹೈಕಮಾಂಡ್ ಮತ್ತು ಪಕ್ಷದ ನಾಯಕತ್ವದ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂಬ ಮಾತು, ಸಚಿವರ ನಡುವೆ ಉಂಟಾಗಬಹುದಾದ ಅಸಮಾಧಾನವನ್ನು ಬಹಿರಂಗ ಚರ್ಚೆಗೆ ತರುವುದನ್ನು ತಪ್ಪಿಸುವ ಪ್ರಯತ್ನವಾಗಿಯೂ ಕಾಣಬಹುದು. ಆದ್ರೆ ಅಂತಿಮವಾಗಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರದಲ್ಲಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.