PRADEEP RAEAT DEMISE: ‘ಗಜ’ ಚಿತ್ರದ ಖ್ಯಾತ ಖಳನಾಯಕ ಪ್ರದೀಪ್ ರಾವತ್ ಇನ್ನಿಲ್ಲ, ಕ್ಯಾನ್ಸರ್‌ನಿಂದ ಕಂಪ್ಲೀಟ್ ಆಯಿತು ಸಿನಿ ಪಯಣ…

'ಗಜ' ಚಿತ್ರದ ಖ್ಯಾತ ಖಳನಾಯಕ ಪ್ರದೀಪ್ ರಾವತ್ ನಿಧನ...

Photo Credits: @kissatv2 (Instagram)

ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ ಬಹುಭಾಷಾ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಖ್ಯಾತ ನಟ ಪ್ರದೀಪ್ ರಾವತ್ ಅವರು 74ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅವರು ಕಳೆದ ಹಲವು ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ದಶಕಗಳ ಕಾಲ ಚಿತ್ರರಂಗದಲ್ಲಿ ವಿಲನ್ ಹಾಗೂ ಪೋಷಕ ನಟನಾಗಿ ಕಮಾಲ್ ಮಾಡಿದ್ದ ಪ್ರದೀಪ್ ರಾವತ್ ಅವರ ಈ ನಿಧನವು ಇಡೀ ಸಿನಿಪ್ರೇಮಿಗಳಿಗೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ. ಅವರ ಸಂಪೂರ್ಣ ಸಿನಿಮಾ ಪಯಣದ ವಿವರ ಇಲ್ಲಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು…

ಪ್ರದೀಪ್ ರಾವತ್ ಅವರು ದೀರ್ಘಕಾಲದಿಂದ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಅವರನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯನ್ನು ಅವರ ಆಪ್ತ ವಲಯ ಹಾಗೂ ಮಾಧ್ಯಮಗಳು ದೃಢಪಡಿಸಿವೆ.

‘ಮಹಾಭಾರತ’ದ ಅಶ್ವತ್ಥಾಮನಿಂದ ‘ಗಜಿನಿ’ವರೆಗಿನ ಸಿನಿ ಪಯಣ…

ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯ ಅಶ್ವತ್ಥಾಮ ಪಾತ್ರದ ಮೂಲಕ ಇವರು ಬಣ್ಣದ ಪಯಣ ಆರಂಭಿಸಿದರು. ಬಳಿಕ ‘ಚಂದ್ರಕಾಂತಾ’ ಹಾಗೂ ‘ಯುಗ್’ ನಂತಹ ಪ್ರಸಿದ್ಧ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಬಾಲಿವುಡ್‌ನಲ್ಲಿ ‘ಐತಬಾರ್’, ‘ಅಗ್ನಿಪಥ್’, ‘ಸರ್ಫರೋಶ್’ ಹಾಗೂ ‘ಲಾಗಾನ್’ ಚಿತ್ರಗಳಲ್ಲಿ ಮಿಂಚಿದ್ದರು. 2008ರ ‘ಗಜಿನಿ’ ಸಿನಿಮಾದ ಖಳನಾಯಕನ ಪಾತ್ರ ಇಡೀ ದೇಶಾದ್ಯಂತ ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತು. ಆ ಐಕಾನಿಕ್ ಪಾತ್ರದ ಮೂಲಕ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ತಮ್ಮ ಗಂಭೀರ ನಟನೆಯಿಂದಲೇ ಅವರು ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಿದ್ದರು.

ದಕ್ಷಿಣ ಭಾರತ ಚಿತ್ರರಂಗದಲ್ಲೂ ಮಿಂಚಿದ್ದ ನಟ…

ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಪ್ರದೀಪ್ ರಾವತ್ ಕೆಲಸ ಮಾಡಿದ್ದರು. ಕನ್ನಡದಲ್ಲಿ ದರ್ಶನ್ ನಟನೆಯ ಸೂಪರ್ ಹಿಟ್ ‘ಗಜ’ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ತೆಲುಗಿನ ‘ಸೈ’ ಹಾಗೂ ತಮಿಳಿನ ‘ಗಜಿನಿ’ ಚಿತ್ರಗಳಲ್ಲಿ ಇವರ ನಟನೆ ಪ್ರಮುಖವಾಗಿತ್ತು. ತಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ಡೈಲಾಗ್ ಡೆಲಿವರಿಯಿಂದಲೇ ಸೌತ್ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು. ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಇವರು ನಿರ್ವಹಿಸಿದ ಪಾತ್ರಗಳು ಇಂದಿಗೂ ಮನೆಮಾತಾಗಿವೆ.